ಮರ್ಯಾದಾ ಹತ್ಯೆ ಎಂಬುದು ಒಂದು ಕುಟುಂಬ ಅಥವಾ ಸಮುದಾಯ ತನ್ನ “ಮಾನ” ಅಥವಾ “ಗೌರವ” ಕಾಪಾಡಿಕೊಳ್ಳುವ ಹೆಸರಿನಲ್ಲಿ ತನ್ನದೇ ಸದಸ್ಯರನ್ನು ಕೊಲ್ಲುವ ಕ್ರೂರ ಸಾಮಾಜಿಕ ಅಪರಾಧ. ಪ್ರೀತಿವಿವಾಹ, ಜಾತಿ–ಧರ್ಮಾಂತರ ವಿವಾಹ, ಸ್ವಯಂ ಆಯ್ಕೆ ಮಾಡಿದ ಜೀವನ ಸಂಗಾತಿ, ಅಥವಾ ಕುಟುಂಬದ ನಿರೀಕ್ಷೆಗಳಿಗೆ ವಿರುದ್ಧವಾದ ವೈಯಕ್ತಿಕ ನಿರ್ಧಾರಗಳು — ಇವೆಲ್ಲವು ಮರ್ಯಾದಾ ಹತ್ಯೆಗೆ ಕಾರಣಗಳಾಗಿವೆ. ಇದು ಕೇವಲ ಕಾನೂನು ಸಮಸ್ಯೆಯಲ್ಲ; ಆಳವಾಗಿ ಬೇರೂರಿರುವ ಸಾಮಾಜಿಕ ಮನೋಭಾವ, ಪಿತೃತ್ವಶಾಹಿ ಮತ್ತು ಅಸಮಾನತೆಯ ಪ್ರತಿಫಲವಾಗಿದೆ.

ಇತಿಹಾಸದ ಹಿನ್ನೆಲೆ: ಮರ್ಯಾದೆಯ ಹೆಸರಿನ ಹಿಂಸೆ

ಮನುಷ್ಯ ಮೂಲಭೂತವಾಗಿ ಸ್ವಾರ್ಥಿ. ತನ್ನ ರಕ್ತಹಂಚಿಕೊಂಡು ಹುಟ್ಟಿದ ಜೀವಗಳನ್ನೂ ಸಹ ತನ್ನ ಪ್ರತಿಷ್ಠೆಗಾಗಿ ಕೊಲ್ಲಬಲ್ಲ. ತನ್ನ ಉಳುವಿಗಾಗಿ ಮಂಗವೊಂದು ತನ್ನ ಕುತ್ತಿಗೆಯವರೆಗೆ ನೀರು ಬರುವವರೆಗೆ ತನ್ನ ಕಂದಮ್ಮನನ್ನು ಹೊತ್ತುಕೊಂಡು ನಡೆಯುತ್ತದಂತೆ. ಆದರೆ ಮನುಷ್ಯ ನೀರಿನ್ನೂ ತನ್ನ ಕಾಲಿಗೆ ಬರುತ್ತದೆ ಎನ್ನುವ ಸಂದೇಹವಿದ್ದರೂ ಸಾಕು ಮರಿಯನ್ನು ಎತ್ತೆಸೆದು ತನ್ನ ಸುರಕ್ಷತೆಯನ್ನು ನೋಡುತ್ತಾನೆ. ಇದು ಹಣ, ಮಾನ, ಪ್ರಾಣ ಯಾವುದಾದರೂ ಸರಿ ಎಲ್ಲದಕ್ಕೂ ಅನ್ವಯವಾಗುತ್ತದೆ. ತನಗೆ ಮಾತ್ರ ಇದೆ ಎಂದುಕೊಂಡ ಮಾನ, ಮರ್ಯಾದೆಗಳಿಗೆ ಧಕ್ಕೆ ಬಂದಾಗ ಅದು ಹೆತ್ತ ಮಗಳೇ ಆದರೂ ಕತ್ತುಹಿಸುಕಿದ, ಕೊಲ್ಲಿಸಿದ ಸಾಕಷ್ಟು ಉದಾಹರಣೆಗಳು ಭಾರತಾದ್ಯಂತ ಸಿಗುತ್ತವೆ.

ಮರ್ಯಾದಾ ಹತ್ಯೆಯ ಬೇರುಗಳು ಪುರಾತನ ಕಾಲದ ಸಾಮಾಜಿಕ ವ್ಯವಸ್ಥೆಗಳಲ್ಲಿಯೂ ಕಾಣಿಸುತ್ತವೆ. ಗೋತ್ರ, ಕುಲ, ಜಾತಿ ಮತ್ತು ವಂಶಪಾರಂಪರ್ಯವನ್ನು “ಶುದ್ಧತೆ”ಯಾಗಿ ನೋಡಿದ ಸಮಾಜಗಳಲ್ಲಿ, ಮಹಿಳೆಯರ ಸ್ವಾತಂತ್ರ್ಯವನ್ನು ಕುಟುಂಬದ ಮಾನದೊಂದಿಗೆ ಜೋಡಿಸಲಾಯಿತು. ಇದಕ್ಕೆ ಮಹಿಳೆಯ ದೇಹ ಮತ್ತು ಆಯ್ಕೆಯನ್ನು ಕುಟುಂಬದ ಆಸ್ತಿಯಂತೆ ಪರಿಗಣಿಸುವ ಮನೋಭಾವ, ವಿವಾಹವನ್ನು ಸಾಮಾಜಿಕ ಒಪ್ಪಂದವಾಗಿ ಮಾತ್ರ ನೋಡುವ ಪರಂಪರೆ, ವ್ಯಕ್ತಿಗತ ಹಕ್ಕುಗಳಿಗಿಂತ ಸಮುದಾಯದ ಆದೇಶಕ್ಕೆ ಆದ್ಯತೆ ; ಈ ಎಲ್ಲ ಕಾರಣಗಳಿಂದ “ಮಾನ ಹಾನಿಯಾಗಿದೆ” ಎಂಬ ಭ್ರಮೆಯಲ್ಲಿ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಪದ್ಧತಿ ಹುಟ್ಟಿತು.

ಭಾರತದಲ್ಲಿ ಮರ್ಯಾದಾ ಹತ್ಯೆ: ವಾಸ್ತವ ಸ್ಥಿತಿ

ಭಾರತದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚಾಗಿ ಉತ್ತರ ಭಾರತದ ಕೆಲವು ಭಾಗಗಳು, ಗ್ರಾಮೀಣ ಮತ್ತು ಅರೆ–ಗ್ರಾಮೀಣ ಪ್ರದೇಶಗಳು ಮತ್ತು ಕಠಿಣ ಜಾತಿ ವ್ಯವಸ್ಥೆಯ ಪ್ರಭಾವ ಇರುವ ಸಮಾಜಗಳಲ್ಲಿ ಕಾಣಿಸುತ್ತವೆ. ಖಾಪ್ ಪಂಚಾಯತ್‌ಗಳಂತಹ ಅನೌಪಚಾರಿಕ ಸಂಸ್ಥೆಗಳು ಕೆಲ ಸಂದರ್ಭಗಳಲ್ಲಿ ಇಂತಹ ಹಿಂಸೆಯನ್ನು ಮೌನವಾಗಿ ಬೆಂಬಲಿಸಿರುವುದು ಕಂಡುಬಂದಿದೆ. ಆದರೆ ಇದು ಒಂದು ಪ್ರದೇಶಕ್ಕೆ ಸೀಮಿತವಲ್ಲ; ಇದು ಒಂದು ಮನೋಭಾವ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಏಳು ತಿಂಗಳು ಗರ್ಭಿಣಿಯ ಹತ್ಯೆ ಒಂದು ಉದಾಹರಣೆ.

ಕಾನೂನು ದೃಷ್ಟಿಕೋನ: ಮರ್ಯಾದಾ ಹತ್ಯೆ ಅಪರಾಧವೇ?

ಭಾರತದಲ್ಲಿ ಮರ್ಯಾದಾ ಹತ್ಯೆಗೆ ಪ್ರತ್ಯೇಕ ಕಾನೂನು ಇಲ್ಲದಿದ್ದರೂ, ಅದು ಸ್ಪಷ್ಟವಾಗಿ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302 ರ ಪ್ರಕಾರ- ಕೊಲೆ. ಸೆಕ್ಷನ್ 307 – ಕೊಲೆಗೆ ಯತ್ನ, ಸೆಕ್ಷನ್ 120B – ಸಂಚು, ಸೆಕ್ಷನ್ 34 – ಸಾಮಾನ್ಯ ಉದ್ದೇಶ ಎಂಬುದನ್ನು ಗುರುತಿಸುತ್ತದೆ. ಸರ್ವೋಚ್ಛ ನ್ಯಾಯಾಲಯವು ಮರ್ಯಾದಾ ಹತ್ಯೆಗಳನ್ನು “ನಾಗರಿಕ ಸಮಾಜಕ್ಕೆ ಕಳಂಕ” ಎಂದು ಕಠಿಣವಾಗಿ ಖಂಡಿಸಿದೆ. ವಿವಾಹವು ವ್ಯಕ್ತಿಯ ಮೂಲ ಹಕ್ಕು, ಕುಟುಂಬ ಅಥವಾ ಸಮುದಾಯಕ್ಕೆ ಜೀವ ತೆಗೆದುಕೊಳ್ಳುವ ಹಕ್ಕಿಲ್ಲ ಮತ್ತು ಇಂತಹ ಅಪರಾಧಗಳಿಗೆ ಕಠಿಣ ಶಿಕ್ಷೆ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.

ನಿಷೇಧದ ಹೋರಾಟ ಮತ್ತು ಕಾನೂನು ಸುಧಾರಣೆಯ ಬೇಡಿಕೆ

ಸಾಮಾಜಿಕ ಕಾರ್ಯಕರ್ತರು ಮತ್ತು ಮಹಿಳಾ ಹಕ್ಕು ಸಂಘಟನೆಗಳು ಮರ್ಯಾದಾ ಹತ್ಯೆಗೆ ಪ್ರತ್ಯೇಕ ಕಠಿಣ ಕಾನೂನು ಬೇಕೆಂದು ಆಗ್ರಹಿಸುತ್ತಿವೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ಸೂಕ್ತ ಸಾಕ್ಷಿ ಕೊರತೆ ಎಂಬ ಹಣೆಪಟ್ಟಿಯಡಿ ಖುಲಾಸೆಗೊಳ್ಳುತ್ತವೆ. ಅದನ್ನು ತಪ್ಪಿಸಲು ಸಾಕ್ಷಿಯನ್ನು ರಕ್ಷಿಸಬೇಕು. ಅಪಾಯದಲ್ಲಿರುವ ಜೋಡಿಗಳಿಗೆ ರಕ್ಷಣಾ ವ್ಯವಸ್ಥೆಯಾಗಬೇಕು ಎಂದು ಬೇಡಿಕೆ ಇಟ್ಟಿವೆ. ಕೆಲವು ರಾಜ್ಯಗಳು ಪ್ರೀತಿವಿವಾಹ ಮಾಡಿದವರಿಗೆ ರಕ್ಷಣೆ ನೀಡುವುದು, ಸುರಕ್ಷಿತ ಆಶ್ರಯ ಗೃಹಗಳನ್ನು ಒದಗಿಸುವುದು ಮತ್ತು ಪೊಲೀಸ್ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದ್ದರೂ, ಅನುಷ್ಠಾನದಲ್ಲಿ ಇನ್ನೂ ಕೊರತೆಗಳಿವೆ.

ಸಮಾಜದ ಹೊಣೆಗಾರಿಕೆ: ಕಾನೂನು ಮಾತ್ರ ಸಾಕೇ?

ಮರ್ಯಾದಾ ಹತ್ಯೆಯನ್ನು ತಡೆಯಲು ಕಾನೂನು ಅಗತ್ಯ, ಆದರೆ ಸಾಕಾಗುವುದಿಲ್ಲ. ಅಗತ್ಯವಿರುವುದು: * ಶಿಕ್ಷಣದ ಮೂಲಕ ಮಾನವ ಹಕ್ಕುಗಳ ಅರಿವು * ಮಹಿಳೆಯರ ಸ್ವಾಯತ್ತತೆಯ ಗೌರವ * ಜಾತಿ–ಧರ್ಮ ಆಧಾರಿತ ಭೇದಭಾವದ ವಿರೋಧ * ಕುಟುಂಬ ಮಟ್ಟದಲ್ಲಿ ಸಂವಾದ ಮತ್ತು ಬದಲಾವಣೆ.

ಮರ್ಯಾದೆ ಎಂಬುದು ಹಿಂಸೆಯಿಂದ ಉಳಿಯುವುದಿಲ್ಲ; ಅದು ಮಾನವೀಯತೆಯಿಂದ ಬೆಳೆದು ಬರುತ್ತದೆ. ಇಂದಿನ ಸಂವಿಧಾನಾತ್ಮಕ ಭಾರತದಲ್ಲಿ ವ್ಯಕ್ತಿಯ ಜೀವನಕ್ಕಿಂತ ಸಮುದಾಯದ ಗೌರವ ದೊಡ್ಡದೇ? ಎಂಬ ಪ್ರಶ್ನೆ ಎದುರಾಗಿದೆ. ಜೀವನ ಮತ್ತು ಸ್ವಾತಂತ್ರ್ಯ ಪ್ರತಿಯೊಬ್ಬರ ಹಕ್ಕು, ಪ್ರೀತಿ ಅಪರಾಧವಲ್ಲ, ಆಯ್ಕೆ ಮಾಡುವುದು ಅಪಮಾನವಲ್ಲ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ಮರ್ಯಾದಾ ಹತ್ಯೆ ಎಂದರೆ ಸಂಪ್ರದಾಯವಲ್ಲ; ಅದು ಮಾನವ ಹಕ್ಕುಗಳ ಉಲ್ಲಂಘನೆ. ಅದು ಸಂಸ್ಕೃತಿಯ ರಕ್ಷಣೆ ಅಲ್ಲ; ಅದು ಕ್ರೂರತೆಯ ಸಮರ್ಥನೆ. ಸಮಾಜ ತನ್ನ “ಮಾನ”ವನ್ನು ಉಳಿಸಿಕೊಳ್ಳಲು ಜೀವಗಳನ್ನು ಬಲಿ ಕೊಡಬೇಕಾದರೆ, ಆ ಮಾನದ ಅರ್ಥವನ್ನೇ ಮರುಪರಿಶೀಲಿಸಬೇಕಾಗಿದೆ.

ನಿಜವಾದ ಮರ್ಯಾದೆ ಎಂದರೆ – ವ್ಯಕ್ತಿಯ ಜೀವ ಮತ್ತು ಆಯ್ಕೆಗೆ ಗೌರವ.

Author

  • ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

By Sheela Bhat

ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

Leave a Reply

Your email address will not be published. Required fields are marked *