ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಎಚ್. ಮಿನಿಯಪ್ಪನವರಿಗೆ ರಾಜಕೀಯ ಸೋಲು. ಬಣ ರಾಜಕೀಯದಲ್ಲಿ ಗೆದ್ದ ರಮೇಶಕುಮಾರ್ ಬಣ. ಮುನಿಯಪ್ಪ ಅಳಿಯನಿಗೆ ಕೈ ತಪ್ಪಿದ ಟಿಕೆಟ್. ಕೆ. ವಿ. ಗೌತಮ್ ಅವರಿಗೆ ಟಿಕೆಟ್ ನೀಡಿದ ಕಾಂಗ್ರೆಸ್ ಹೈಕಮಾಂಡ್ ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿತು. ಎರಡು ಗುಂಪಿನ ಜಗಳದ ನಡುವೆ ಲಾಭವಾಗಿದ್ದು ಗೌತಮ್ ಅವರಿಗೆ. ಕಾರ್ಪೊರೇಟರ್ ವಿಜಯ್ ಕುಮಾರ್ ಅವರ ಪುತ್ರ ಕೆ ವಿ ಗೌತಮ್ ಈಗ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ.
ಈ ಕುರಿತು ಎಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ. . ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಭಾರೀ ಕಗ್ಗಂಟಾಗಿ ಎಡಗೈ ಮತ್ತು ಬಲಗೈ ಬಣಗಳು ತೀವ್ರ ಹೊಡೆದಾಟ ನಡೆಸಿದ್ದವು. ಈಗ ಎಡಗೈ ಸಮುದಾಯಕ್ಕೆ ಸೇರಿದ ಗೌತಮ್ ಅವರಿಗೆ ದೊರಕಿದೆ. ಮುನಿಯಪ್ಪ ಅವರು ಎಡಗೈ ಗೆ ಸೇರಿದವರು. ಗೌತಮ್ ಅವರೂ ಎಡಗೈ ಗೆ ಸೇರಿದವರು. ಆದರೆ ಮುನಿಯಪ್ಪ ಅವರ ಬೆಂಬಲಿಗರಲ್ಲ.
ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ, ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಕೋಲಾರದಲ್ಲಿ ಅಭ್ಯರ್ಥಿಯಾಗಿ ಕೆವಿ ಗೌತಮ್ ಅವರ ಹೆಸರನ್ನು ಒಪ್ಪಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಮಲ್ಲೇಶ್ ಬಾಬು ಕಣಕ್ಕಿಳಿದಿದ್ದಾರೆ.
ಹೊಂದಾಣಿಕೆ ರಾಜಕೀಯದಲ್ಲಿ ನಿಸ್ಸೀಮರಾದ ಮುನಿಯಪ್ಪ ಸದಾ ಅದನ್ನೇ ಮಾಡಿಕೊಂಡು ಬಂದವರು. ಹಾಗೆ ಹಲವಾರು ವರ್ಷಗಳಿಂದ ಕೋಲಾರದ ರಾಜಕಾರಣವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ ಅವರು ತಮ್ಮ ಪಕ್ಷದಲ್ಲಿ ಹಲವಾರು ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದವರು. ತಮ್ಮ ಪಕ್ಷದವರ ವಿರುದ್ಧವೇ ಕೆಲಸ ಮಾಡಿ ಬೇರೆ ಪಕ್ಷದವರಿಗೆ ಒಳಗಿನಿಂದಲೇ ಬೆಂಬಲ ನೀಡಿದ ಆರೋಪವೂ ಅವರ ಮೇಲಿದೆ. ಈಗ ಅವರು ಗೌತಮ್ ಅವರಿಗೆ ಬೆಂಬಲ ನೀಡುತ್ತಾರೆಯೇ ಅಥವಾ ಬೇರೆ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆಯೆ ಎಂಬುದನ್ನು ಕಾದು ನೋಡಬೇಕು.
ಟಿಕೆಟ್ ಆಯ್ಕೆಯ ಕಗ್ಗಂಟಾದಾಗ ಮುನ್ನೆಲೆಗೆ ಬಂದಿದ್ದು ಗೌತಮ್ ಅವರ ಹೆಸರು. ರಮೇಶ್ ಕುಮಾರ್ ಅವರ ಬಣದ ಶಾಸಕರು ಸಚಿವರು ರಾಜೀನಾಮೆ ನೀಡಲು ಮುಂದಾಗ ಈ ರಾಜಿ ಸೂತ್ರವನ್ನೂ ಸಿದ್ದಪಡಿಸಲಾಗಿತ್ತು. ಆದರೆ ಈ ಸೂತ್ರಕ್ಕೆ ಮುನಿಯಪ್ಪ ಅವರ ಒಪ್ಪಿಗೆ ಇರಲಿಲ್ಲ. ಕೊನೆಯ ಹಂತದ ವರೆಗೆ ತಮ್ಮ ಅಳಿಯನಿಗೆ ಟಿಕೆಟ್ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದರು.
ರಾಜ್ಯ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲೂ ಮುನಿಯಪ್ಪ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಾರೆ ಎಂಬ ವದಂತಿ ಹಬ್ಬಿತ್ತು. ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಈ ವದಂತಿಗೆ ಇನ್ನಷ್ಟು ಪುಷ್ಟಿಯನ್ನು ನೀಡಿತ್ತು.
