ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಡಿಸೆಂಬರ್ 25 ರಿಂದ ಡಿಸೆಂಬರ್ 28 ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದ್ವಿತೀಯ ಆಯುರ್ವೇದ ಸಮ್ಮೇಳನ ನಡೆಯಲಿದೆ. ಇದರ ಪೂರ್ವತಯಾರಿಯಾಗಿ ಜನಜಾಗೃತಿ ಮೂಡಿಸಲು ರಥಯಾತ್ರೆ ಆಯೋಜಿಸಲಾಗಿದೆ. ಏಳು ರಾಜ್ಯಗಳನ್ನು ಸಂಚರಿಸುವ ಈ ರಥಯಾತ್ರೆಗೆ ನವೆಂಬರ್ ೨೪ರಂದು ಚಾಲನೆ ನೀಡಲಾಗಿದೆ.
ಬೆಂಗಳೂರಿನ ಮಲ್ಲೇಶ್ವರದ ಶ್ರೀಸಿದ್ದಿವಿನಾಯಕ ದೇವರ ಸನ್ನಿಧಿಯಲ್ಲಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಲಾಯಿತು. ಕರ್ನಾಟಕ ಹೈಕೋರ್ಟ್’ನ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್, ರಾಜಾಜಿನಗರದ ಶಾಸಕ ಸುರೇಶ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಭಾರತೀಯ ಕೇಂದ್ರ ವೈದ್ಯಕೀಯ ಮಂಡಳಿಯ ಡಾ. ಜಯಪ್ರಕಾಶ್ ನಾರಾಯಣ್ ಹಾಗೂ ಸಮ್ಮೇಳನದ ರುವಾರಿಗಳಾದ ಹಿರಿಯ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಮುಂತಾದವರು ಉಪಸ್ಥಿತರಿದ್ದರು.
೨ನೇ ವಿಶ್ವ ಆಯುರ್ವೇದ ಸಮ್ಮೇಳನ ಹಾಗೂ ಆಯುರ್ವೇದ ಪದ್ಧತಿಯ ಕುರಿತಾಗಿ ಈ ರಥವು ಜನಜಾಗೃತಿಯನ್ನು ಮೂಡಿಸಲಿದ್ದು, ಕರ್ನಾಟಕದ ಎಲ್ಲಾ ಆಯುರ್ವೇದ ಕಾಲೇಜುಗಳು ಹಾಗೂ ಗೋವಾ, ಕೇರಳ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳ 30ಕ್ಕೂ ಹೆಚ್ಚುಆಯುರ್ವೇದ ಕಾಲೇಜು ಸೇರಿದಂತೆ ಒಟ್ಟು 137 ಆಯುರ್ವೇದ ವಿದ್ಯಾಲಯಗಳಿಗೆ ಒಟ್ಟು ಎರಡು ರಥಗಳು ಸಂಚರಿಸಲಿವೆ. ರಥಗಳಲ್ಲಿ ಆಯುರ್ವೇದ ದೇವತೆ ಧನ್ವಂತರಿ ಜ್ಯೋತಿ ಇದ್ದು, ಅದೇ ಧನ್ವಂತರಿ ಜ್ಯೋತಿಯ ಮೂಲಕ ವಿಶ್ವ ಸಮ್ಮೇಳನದ ಭವ್ಯ ಉದ್ಘಾಟನೆ ನೆರವೇರಲಿದೆ. – ಸುದ್ದಿ ಟಿವಿ, ಬೆಂಗಳೂರು
