ಒಮ್ಮೆ ಕಂಪ್ಯೂಟರ್ ಕಲಿಯುವುದು ದೊಡ್ಡ ವಿಷಯವಾಗಿತ್ತು. ನಂತರ ಸಾಫ್ಟ್ವೇರ್ ಉದ್ಯೋಗಗಳು ಭಾರತದ ಮಧ್ಯಮ ವರ್ಗದ ಕನಸಾಯಿತು. ಈಗ ಜಗತ್ತಿನ ಗಮನ ಮತ್ತೊಂದು ಕ್ಷೇತ್ರದ ಮೇಲೆ ಕೇಂದ್ರೀಕೃತವಾಗಿದೆ . ಅವೇ ಎಐ ಮತ್ತು ಮಷಿನ್ ಲರ್ನಿಂಗ್. ಇಂದು ಚಾಟ್ ಜಿಪಿಟಿ, ಗೂಗಲ್ ಸರ್ಚ್, ಯುಟ್ಯೂಬ್ ರೆಕಮಂಡೇಶನ್, ವಾಯ್ಸ್ ಅಸಿಸ್ಟೆಂಟ್, ಫೇಸ್ ರೆಕಗ್ನಿಷನ್, ಸೆಲ್ಫ್ ಡ್ರೈವಿಂಗ್ ತಂತ್ರಜ್ಞಾನ ಇವೆಲ್ಲದರ ಹಿಂದೆ ಎಐ ಕೆಲಸ ಮಾಡುತ್ತಿದೆ. ಆದರೆ “ಎಐ ಇಂಜಿನಿಯರ್” ಅಂದ್ರೆ ನಿಜವಾಗಿಯೂ ಏನು? ಈ ಕ್ಷೇತ್ರಕ್ಕೆ ಹೇಗೆ ಬರಬಹುದು? ಯಾವ ಅರ್ಹತೆ ಬೇಕು? ಭವಿಷ್ಯ ಎಷ್ಟು ದೊಡ್ಡದು? ಅದರ ಜೊತೆಗೆ ಇರುವ ಸವಾಲುಗಳೇನು? ಈ ಪ್ರಶ್ನೆಗಳು ಈಗ ಸಾವಿರಾರು ಯುವಕರಲ್ಲಿ ಮೂಡುತ್ತಿವೆ.
AI ಮತ್ತು Machine Learning ಅಂದ್ರೆ ಏನು?
ಸರಳವಾಗಿ ಹೇಳುವುದಾದರೆ, ಕೃತಕ ಬುದ್ಧಿಮತ್ತೆ (Artificial Intelligence) ಅಂದ್ರೆ ಯಂತ್ರಗಳಿಗೆ “ಮಾನವನಂತ ಆಲೋಚನೆ ಮತ್ತು ನಿರ್ಧಾರ ಸಾಮರ್ಥ್ಯ” ನೀಡುವ ತಂತ್ರಜ್ಞಾನ. ಯಂತ್ರಕಲಿಕೆ (Machine Learning) ಅಂದರೆ ಕೊಟ್ಟ ಮಾಹಿತಿಯಿಂದ ಯಂತ್ರಗಳು ಸ್ವತಃ ಕಲಿಯುವ ವಿಧಾನ.
ಉದಾಹರಣೆಗೆ:
- ಯುಟ್ಯೂಬ್ ನಿಮಗೆ ಯಾವ ವಿಡಿಯೋ ತೋರಿಸಬೇಕು?
- ಅಮೇಜಾನ್ ಯಾವ ವಸ್ತು ಶಿಫಾರಸು ಮಾಡಬೇಕು?
- ಗೂಗಲ್ ಮ್ಯಾಪ್ ಯಾವ ದಾರಿ ತೋರಿಸಬೇಕು?
- ಚಾಟ್ ಜಿಪಿಟಿ ಹೇಗೆ ಉತ್ತರ ಕೊಡುತ್ತದೆ?
ಇವೆಲ್ಲ ಯಂತ್ರಕಲಿಕೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳು.
AI Engineer ನಿಜವಾಗಿ ಏನು ಮಾಡುತ್ತಾರೆ?
ಬಹಳ ಜನರಿಗೆ ಎಐ ಅಂದ್ರೆ ಕೇವಲ ಚಾಟ್ ಜಿಪಿಟಿ ಎಂದು ಅನಿಸುತ್ತದೆ. ಆದರೆ ನಿಜವಾದ ಎಐ ಇಂಜಿನಿಯರಿಂಗ್ ಅದಕ್ಕಿಂತ ಬಹಳ ದೊಡ್ಡ ಕ್ಷೇತ್ರ.
ಎಐ ಎಂಜಿನಿಯರ್ ಗಳು –
- ಮಾನವನ ಬುದ್ಧಿಮತ್ತೆಯನ್ನು (ಕಲಿಕೆ, ತಾರ್ಕಿಕತೆ, ಸಮಸ್ಯೆ ಪರಿಹರಿಸುವುದು) ಅನುಕರಿಸುವ ಕಂಪ್ಯೂಟರ್ ವ್ಯವಸ್ಥೆಗಳನ್ನು ನಿರ್ಮಿಸುತ್ತಾರೆ
- ದತ್ತಾಂಶ ವಿಶ್ಲೇಷಣೆ ಮಾಡುತ್ತಾರೆ
- ಮುನ್ಸೂಚಕ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಾರೆ
- ಭಾಷಾ ಗ್ರಹಿಕೆ ವ್ಯವಸ್ಥೆಗಳನ್ನು ನಿರ್ಮಿಸುತ್ತಾರೆ
- ಕಂಪ್ಯೂಟರ್ಗಳಿಗೆ ಚಿತ್ರಗಳನ್ನು ನೋಡಿ ಅರ್ಥಮಾಡಿಕೊಳ್ಳುವ ಶಕ್ತಿಯನ್ನು ನೀಡುವುದರ ಮೇಲೆ ಕೆಲಸ ಮಾಡುತ್ತಾರೆ
ಅಂದರೆ ಯಂತ್ರಗಳು “ಕಲಿಯುವಂತೆ” ಮಾಡುವುದು ಅವರ ಮುಖ್ಯ ಕೆಲಸ.
ಈ ಕ್ಷೇತ್ರಕ್ಕೆ ಯಾವ ವಿದ್ಯಾರ್ಹತೆ ಬೇಕು?
ಸಾಮಾನ್ಯವಾಗಿ –
- ಬಿಇ/ ಬಿ.ಟೆಕ್ ( ಕಂಪ್ಯೂಟರ್ ಸೈನ್ಸ್/ ಎಐ/ ಡೇಟಾ ಸೈನ್ಸ್ )
- ಬಿಸಿಎ/ಎಂಸಿಎ
- ಎಂಎಸ್ಸಿ – ಕಂಪ್ಯೂಟರ್ ಸೈನ್ಸ್
- ಗಣಿತ/ ಸಂಖ್ಯಾ ಶಾಸ್ತ್ರ
ಹಿನ್ನೆಲೆ ಹೊಂದಿದ್ದರೆ ಒಳ್ಳೆಯದು. ಆದರೆ ಇಂದಿನ ಎಐ ಜಗತ್ತಿನಲ್ಲಿ ಕೇವಲ ಡಿಗ್ರಿ ಸಾಕಾಗುವುದಿಲ್ಲ. ಬಹಳಷ್ಟು ಉತ್ತಮ ಎಐ ಇಂಜಿನಿಯರ್ ಗಳು ಸ್ವಕಲಿಕೆ, ಆನ್ ಲೈನ್ ಮತ್ತು ಪ್ರಾಜೆಕ್ಟ್ ಮೂಲಕ ಬೆಳೆದಿದ್ದಾರೆ. ಅಂದರೆ ಕೌಶಲ್ಯ , ಪ್ರಮಾಣ ಪತ್ರಗಳಿಗಿಂತ ಹೆಚ್ಚು ಎಂಬ ಪರಿಸ್ಥಿತಿ ನಿಧಾನವಾಗಿ ನಿರ್ಮಾಣವಾಗುತ್ತಿದೆ.
AI ಕ್ಷೇತ್ರಕ್ಕೆ ಅತ್ಯಂತ ಮುಖ್ಯವಾದ ಕೌಶಲ್ಯಗಳು ಯಾವುವು?
ಎಐ ಕ್ಷೇತ್ರದಲ್ಲಿ ಯಶಸ್ವಿಯಾಗಲು ಪ್ರೊಗ್ರಾಮಿಂಗ್ ಅತ್ಯಂತ ಮುಖ್ಯ. ವಿಶೇಷವಾಗಿ – ಪೈಥನ್ ( Python) , ಸೀಕ್ವಲ್ (SQL) , ಡೇಟಾ ಅನಾಲಿಸಿಸ್ (Data Analysis) ಕಲಿಯಲೇಬೇಕು. ಪೈಥನ್ ಇಂದು ಎಐ ಜಗತ್ತಿನ ಪ್ರಮುಖ ಭಾಷೆ. ಅದರ ಜೊತೆಗೆ
- ಸಂಖ್ಯಾಶಾಸ್ತ್ರ (statistics)
- ಸಂಭವನೀಯತೆ (probability)
- ತರ್ಕ (logic),
- ಮಾಹಿತಿಗಳನ್ನು ಅರ್ಥ ಮಾಡಿಕೊಳ್ಳುವಿಕೆ (data understanding)
ಇವುಗಳ ಅರಿವು ಅಗತ್ಯ. ಯಾಕೆಂದರೆ ಎಐ ಅಂದ್ರೆ ಕೇವಲ ಕೋಡಿಂಗ್ ಅಲ್ಲ. ಅದು “ಮಾದರಿಗಳ ಗ್ರಹಿಕೆಯ” ಕ್ಷೇತ್ರ.
AI ನಲ್ಲಿ ಯಾವ ಯಾವ ವಿಭಾಗಗಳಿವೆ?
ಎಐ ಕ್ಷೇತ್ರ ಬಹಳ ದೊಡ್ಡದು. ಒಬ್ಬ ಎಐ ಎಂಜಿನಿಯರ್ ಅನೇಕ ದಿಕ್ಕುಗಳಲ್ಲಿ ಬೆಳೆಯಬಹುದು.
ಉದಾಹರಣೆಗೆ:
- ರೋಬೊಟ್ ಗಳು
- ನೈಸರ್ಗಿಕ ಭಾಷಾ ಪ್ರಕ್ರಿಯೆ
- ಆಳ ಕಲಿಕೆ
- ಯಂತ್ರ ಕಲಿಕೆ
- ಕಂಪ್ಯೂಟರ್ ದೃಷ್ಟಿಕೋನ
- ಎಐ ಸ್ವಯಂಚಾಲನೆ
- ಸೃಜನಶೀಲ ಎಐ
- ಮಾಹಿತಿ ವಿಜ್ಞಾನ
ಇವು ಪ್ರತಿಯೊಂದೂ ದೊಡ್ಡ ಉದ್ಯೋಗ ಕ್ಷೇತ್ರಗಳಾಗುತ್ತಿವೆ.
AI ಕ್ಷೇತ್ರದಲ್ಲಿ ಅವಕಾಶಗಳು ಎಷ್ಟು ದೊಡ್ಡವು?
ಈ ಪ್ರಶ್ನೆಗೆ ಸರಳ ಉತ್ತರ – “ಮುಂದಿನ ದಶಕದ ಅತ್ಯಂತ ಪ್ರಭಾವಿ ಕ್ಷೇತ್ರಗಳಲ್ಲಿ ಎಐ ಒಂದು.” ಇಂದು ಗೂಗಲ್, ಮೈಕ್ರೊಸಾಫ್ಟ್, ಮೆಟಾ, ಓಪನ್ ಎಐ, ಇನ್ಫೋಸಿಸ್, ಟಿಸಿಎಸ್, ಸ್ಟಾರ್ಟ್ ಅಪ್ಸ್ ಎಲ್ಲರೂ ಎಐ ಪ್ರತಿಭೆಗಳನ್ನು ಹುಡುಕುತ್ತಿದ್ದಾರೆ. ಎಐ ಈಗ ಕೇವಲ ಸಾಫ್ಟ್ ವೇರ್ ಉದ್ಯಮದಲ್ಲಿಲ್ಲ. ಇದು ಮಾಧ್ಯಮ, ಆರೋಗ್ಯ, ಕೃಷಿ, ಶಿಕ್ಷಣ, ಆಡಳಿತ, ಪತ್ರಿಕೋದ್ಯಮ, ಬ್ಯಾಂಕಿಂಗ್ ಹೀಗೆ ಎಲ್ಲ ಕ್ಷೇತ್ರಗಳಿಗೂ ಪ್ರವೇಶಿಸುತ್ತಿದೆ.
AI ಕ್ಷೇತ್ರದಲ್ಲಿ ಯಾವ ಯಾವ ಉದ್ಯೋಗಗಳು ಸಿಗಬಹುದು?
ಎಐ ಮತ್ತು ಮಶಿನ್ ಲರ್ನಿಂಗ್ ಕ್ಷೇತ್ರದಲ್ಲಿ ಒಂದೇ ರೀತಿಯ ಉದ್ಯೋಗವಿಲ್ಲ. ಹಲವಾರು ವಿಭಿನ್ನ ಉದ್ಯೋಗಗಳಿವೆ.
ಉದಾಹರಣೆಗೆ:
- ಎಐ ಎಂಜಿನಿಯರ್
- ಮಶಿನ್ ಲರ್ನಿಂಗ್ ಎಂಜಿನಿಯರ್
- ಡೇಟಾ ಸೈಂಟಿಸ್ಟ್
- ಡೇಟಾ ಅನಾಲಿಸ್ಟ
- ಎನ್ ಎಲ್ ಪಿ ಎಂಜಿನಿಯರ್
- ಕಂಪ್ಯೂಟರ್ ವಿಜನ್ ಎಂಜಿನಿಯರ್
- ಎಐ ಸಂಶೋಧಕ
- ರೊಬೊಟಿಕ್ಸ್ ಎಂಜಿನಿಯರ್
- ಎಐ ಪ್ರಾಡಕ್ಟ್ ಡೆವೆಲಪರ್
- ಎಐ ಆಟೊಮೇಷನ್ ಸ್ಪೆಷಲಿಸ್ಟ್
ಇದಲ್ಲದೆ ಈಗ ಹೊಸದಾಗಿ:
- ಪ್ರಾಂಪ್ಟ್ ಎಂಜಿನಿಯರ್
- ಎಐ ಕಂಟೆಂಟ್ ಸ್ಟ್ರಾಟೆಜಿಸ್ಟ್
- ಎಐ ವಿಡಿಯೊ ವರ್ಕ್ ಫ್ಲೋ ಸ್ಪೆಷಲಿಸ್ಟ್
- ಜನರೇಟಿವ್ ಎಐ ಡಿಸೈನರ್
ಮಾದರಿಯ ಉದ್ಯೋಗಗಳೂ ಬೆಳೆಯುತ್ತಿವೆ. ಒಬ್ಬ ಡೇಟಾ ಅನಾಲಿಸ್ಟ್ ಡೇಟಾ ವಿಶ್ಲೇಷಣೆ ಮಾಡಬಹುದು. ಮಷಿನ್ ಲರ್ನಿಂಗ್ ಎಂಜಿನಿಯರ್ ಮುನ್ಸೂಚಿತ ವ್ಯವಸ್ಥೆ ನಿರ್ಮಿಸಬಹುದು. ಎನ್ ಎಲ್ ಪಿ ಎಂಜಿನಿಯರ್ ಭಾಷೆಯನ್ನು ಅರ್ಥಮಾಡಿಕೊಳ್ಳುವ ಎಐ ಸಿಸ್ಟ್ಂ ಮೇಲೆ ಕೆಲಸ ಮಾಡಬಹುದು.
ಉದಾಹರಣೆಗೆ:
- ChatGPT ಮಾದರಿಯ ಸಿಸ್ಟಂಗಳು
- ವಾಯ್ಸ್ ಅಸಿಸ್ಟೆಂಟ್ ಗಳು
- ರೆಕಮಂಡೇಷನ್ ಎಂಜಿನ್ ಗಳು
- ಫೇಸ್ ರೆಕಗ್ನಿಷನ್
- ಆಟೊಮೇಟೇಡ್ ನ್ಯೂಸ್ ಸಿಸ್ಟ್ಂ ಹೀಗೆ
ಇವೆಲ್ಲಕ್ಕೂ ವಿಭಿನ್ನ ಎಐ ವೃತ್ತಿಪರರು ಅಗತ್ಯವಿರುತ್ತಾರೆ.
ಈ ಕ್ಷೇತ್ರದಲ್ಲಿ ಸಂಬಳ ಎಷ್ಟು?
ಎಐ ಕ್ಷೇತ್ರದಲ್ಲಿ ಸಂಬಳ ಕೌಶಲ್ಯದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಭಾರತದಲ್ಲಿ ಆರಂಭಿಕ ಹಂತದಲ್ಲಿ ₹4 ಲಕ್ಷದಿಂದ ₹10 ಲಕ್ಷ ವಾರ್ಷಿಕ ಸಂಬಳ ಸಾಮಾನ್ಯವಾಗಿ ಸಿಗಬಹುದು. ಉತ್ತಮ ಕೌಶಲ್ಯ ಮತ್ತು ಅನುಭವ ಬಂದ ನಂತರ ₹15 ಲಕ್ಷ, ₹25 ಲಕ್ಷ, ಅಥವಾ ಅದಕ್ಕಿಂತಲೂ ಹೆಚ್ಚು ಸಂಬಳ ಪಡೆಯುವ ಅವಕಾಶಗಳಿವೆ. ವಿಶೇಷವಾಗಿ ಅಂತರಾಷ್ಟ್ರೀಯ ಕಂಪನಿಗಳು, ರಿಮೋಟ್ ಜಾಬ್ ಗಳು, ಎಐ ಸ್ಟಾರ್ಟ್ ಅಪ್ ಗಳು, ಪ್ರಾಡಕ್ಟ್ ಕಂಪನಿಗಳು ಇವುಗಳಲ್ಲಿ ಸಂಬಳ ಹೆಚ್ಚು ಇರಬಹುದು. ವಿಭಿನ್ನ ಕ್ಷೇತ್ರದ ಜನರಿಗೂ ಹೊಸ ಅವಕಾಶಗಳನ್ನು ತೆರೆಯುವ ಸಾಧ್ಯತೆ ಇದೆ.
ಮುಂದಿನ ಎಐ ಯುಗದಲ್ಲಿ ಕೇವಲ ಕೋಡಿಂಗ್ ಮಾತ್ರ ಸಾಕಾಗದ ಪರಿಸ್ಥಿತಿ ನಿರ್ಮಾಣವಾಗಬಹುದು.
- ಸಂವಹನ ಕಲೆ ಹೊಂದಿರುವವರು,
- ಸೃಜನಾತ್ಮಕ ಯೋಚನೆ ಹೊಂದಿರುವವರು
- ಮನುಷ್ಯನ ಮನೋವಿಜ್ಞಾನ ಅರ್ಥಮಾಡಿಕೊಳ್ಳುವವರು,
- ಕ್ಷೇತ್ರ ಪರಿಣತಿ ಇರುವವರು
- ತಂತ್ರಜ್ಞಾನ ಅರ್ಥಮಾಡಿಕೊಳ್ಳುವವರು
ಹೆಚ್ಚು ಬೆಲೆ ಪಡೆಯಲಿದ್ದಾರೆ. ಅಂದರೆ ಎಐ ಭವಿಷ್ಯ ಕೇವಲ ಎಂಜಿನಿಯರ್ ಗಳಿಗೆ ಮಾತ್ರವಲ್ಲ, ಬೇರೆ ಕ್ಷೇತ್ರಗಳ ಉದ್ಯೋಗಗಳಿಗೂ ಮುಖ್ಯವಾಗಿದೆ.
ಮಾಧ್ಯಮ ಮತ್ತು ಪತ್ರಿಕೋದ್ಯಮದಲ್ಲೂ AI ಭವಿಷ್ಯ ಇದೆಯೆ?
ಇಂದು ಎಐ ಬಂದ ಮೇಲೂ ಸಹ ಮಾಧ್ಯಮದಲ್ಲಿ ಭವಿಷ್ಯ ಖಂಡಿತವಾಗಿಯೂ ಇದೆ. ಈಗಾಗಲೇ ಬರವಣಿಗೆ, ವಿಡಿಯೊ ಎಡಿಟಿಂಗ್, ವಾಯ್ಸ್ ಕ್ಲೋನಿಂಗ್, ಭಾಷಾಂತರ, ಸುದ್ದಿ ಸಾರಾಂಶ, ಅಧ್ಯಯನ ಸಹಾಯ, ಶಿಫಾರಸ್ಸು ವ್ಯವಸ್ಥೆ, ಸ್ವಯಂ ಚಲಿತ ಪತ್ರಿಕೋದ್ಯಮಗಳಲ್ಲಿ ಎಐ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಮಾಧ್ಯಮ ಕ್ಷೇತ್ರದಲ್ಲೂ ಎಐ ದೊಡ್ಡ ಬದಲಾವಣೆ ತರಬಹುದು.
ಈ ಕ್ಷೇತ್ರದ ದೊಡ್ಡ ಶಕ್ತಿಗಳು ಯಾವುವು?
ಎಐ ಕ್ಷೇತ್ರದ ಅತ್ಯಂತ ದೊಡ್ಡ ಶಕ್ತಿ ಅದರ ಭವಿಷ್ಯ. ಇದು ತಾತ್ಕಾಲಿಕ ಟ್ರೆಂಡ್ ಅಲ್ಲ. ನಿಧಾನವಾಗಿ ಜಗತ್ತಿನ ಮೂಲ ಸೌಕರ್ಯ ಆಗುತ್ತಿದೆ. ಈ ಕ್ಷೇತ್ರದಲ್ಲಿ ಜಾಗತಿಕ ಅವಕಾಶಗಳು, ರಿಮೋಟ್ ಕೆಲಸ, ಹೆಚ್ಚು ಸಂಬಳ, ಆವಿಷ್ಕಾರ, ಸೃಜನಾತ್ಮಕ ಸ್ವಾತಂತ್ರ್ಯ ಇವೆಲ್ಲ ಇರುವುದರಿಂದ ಯುವಕರು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಇನ್ನೊಂದು ಮುಖ್ಯ ವಿಷಯ – ಎಐ ಕೇವಲ ಎಂಜಿನಿಯರಿಂಗ್ ಕ್ಷೇತ್ರವಲ್ಲ. ಅದು ಮನೋವಿಜ್ಞಾನ, ಭಾಷೆ, ಮಾಧ್ಯಮ, ಸಂವಹನ, ಸಾಮಾಜಿಕ ವರ್ತನೆ ಇವೆಲ್ಲದರ ಜೊತೆಯೂ ಸಂಪರ್ಕ ಹೊಂದಿದೆ.
ಹಾಗಾದರೆ ಸವಾಲುಗಳೇ ಇಲ್ಲವೆ?
ಖಂಡಿತವಾಗಿಯೂ ಇವೆ. ಎಐ ಕ್ಷೇತ್ರದ ದೊಡ್ಡ ಸವಾಲು – ನಿರಂತರ ಕಲಿಯಬೇಕಾಗುವುದು. ತಂತ್ರಜ್ಞಾನ ಬಹಳ ವೇಗವಾಗಿ ಬದಲಾಗುತ್ತಿದೆ. ಇಂದು ಕಲಿತದ್ದು ಎರಡು ವರ್ಷಗಳಲ್ಲಿ ಹಳೆಯದಾಗಬಹುದು. ಇನ್ನೊಂದು ದೊಡ್ಡ ಸವಾಲು – ಸ್ಪರ್ಧೆ. ಇಂದು ಲಕ್ಷಾಂತರ ಜನ ಎಐ ಕಲಿಯುತ್ತಿದ್ದಾರೆ. ಹೀಗಾಗಿ ಮೇಲುಮೇಲಿನ ಅರೆ ಬರೆ ಜ್ಞಾನ ಸಾಕಾಗುವುದಿಲ್ಲ. ಗಣಿತ ಮತ್ತು ತಾರ್ಕಿಕ ಯೋಚನೆ ಬಗ್ಗೆ ಕೆಲವರು ಹಿಂದಿರುತ್ತಾರೆ. ಅಂತವರಿಗೆ ಈ ಕ್ಷೇತ್ರ ಸ್ವಲ್ಪ ಕಠಿಣ.
AI ಕಲಿಯಲು ಹೇಗೆ ಆರಂಭಿಸಬೇಕು?
ಎಐ ಕ್ಷೇತ್ರಕ್ಕೆ ಬರಲು ಮೊದಲ ಹೆಜ್ಜೆ – ಪೈಥನ್ (Python) ಕಲಿಯುವುದು. ಅದರ ನಂತರ – ಡೇಟಾ ಅನಾಲಿಸಿಸ್, ಸಂಖ್ಯಾಶಾಸ್ತ್ರದ ಮೂಲಭೂತ ತತ್ವಗಳು ಮತ್ತು ಯಂತ್ರಕಲಿಕೆಯ ವಿಷಯಗಳನ್ನು ಕಲಿಯಬೇಕು. ಈಗ YouTube, Coursera, Kaggle, Google Colab, GitHub ಮುಂತಾದ ಪ್ಲಾಟ್ ಫಾರಂ ಮೂಲಕ ಉಚಿತವಾಗಿ ಸಾಕಷ್ಟು ಕಲಿಯಲು ಸಾಧ್ಯ. ಆದರೆ ಕೇವಲ ಕೋರ್ಸ್ ಪಡೆದರೆ ಸಾಲದು. ಸ್ವತಃ ಪ್ರಾಜೆಕ್ಟ್ಸ್ ಮಾಡುವುದು ಬಹಳ ಮುಖ್ಯ.
ಉದಾಹರಣೆಗೆ:
- ಚಾಟ್ ಬಾಟ್
- ಕನ್ನಡ ಎಐ ಟೂಲ್
- ವಾಯ್ಸ್ ಸಿಸ್ಟಂ
- ಶಿಫಾರಸ್ಸು ಎಂಜಿನ್
ಇತ್ಯಾದಿ ಸಣ್ಣ ಪ್ರಾಜೆಕ್ಟ್ ಮೂಲಕ ಪ್ರಾಯೋಗಿಕ ಅರಿವು ಬರುತ್ತದೆ.
ಮುಂದಿನ ದಿನಗಳಲ್ಲಿ AI ಯಾರಿಗೆ ಹೆಚ್ಚು ಉಪಯೋಗವಾಗಬಹುದು?
ಒಂದು ಆಸಕ್ತಿದಾಯಕ ವಿಷಯ ಏನೆಂದರೆ, ಎಐ ಕ್ಷೇತ್ರದಲ್ಲಿ ಕೇವಲ ಕೋಡಿಂಗ್ ಮಾಡುವವರು ಮಾತ್ರ ಯಶಸ್ವಿಯಾಗುವುದಿಲ್ಲ.
- ವ್ಯವಸ್ಥಿತ ಯೋಚನೆ ಇರುವವರು
- ಸಂವಹನ ಕೌಶಲ್ಯ ಇರುವವರು,
- ಮನುಷ್ಯರ ಮನಸ್ಸನ್ನು ಅರಿಯುವವರು,
- ಭಾಷಾ ಪರಿಣತರು
- ಮಾಧ್ಯಮ ವೃತ್ತಿಪರರು
ಭವಿಷ್ಯದಲ್ಲಿ ಹೆಚ್ಚು ಬೆಲೆ ಪಡೆಯುವವರಾಗಬಹುದು. ಯಾಕೆಂದರೆ ಎಐಗೆ ಈಗ “ಮನುಷ್ಯನ ಅರಿವು” ಕೂಡ ಅಗತ್ಯವಾಗಿದೆ. ಎಐ ಮತ್ತು ಯಂತ್ರ ಕಲಿಕೆ ಕೇವಲ ಹೊಸ ಉದ್ಯೋಗ ಕ್ಷೇತ್ರವಲ್ಲ. ಅದು ಸಮಾಜ, ಆರ್ಥಿಕತೆ, ಮಾಧ್ಯಮ ಮತ್ತು ಆಡಳಿತ ವ್ಯವಸ್ಥೆಗಳನ್ನೇ ಬದಲಾಯಿಸಬಹುದಾದ ದೊಡ್ಡ ತಂತ್ರಜ್ಞಾನ ಕ್ರಾಂತಿ. ಮುಂದಿನ ದಶಕದಲ್ಲಿ ಎಐ ತಿಳಿದಿರುವವರು ಕೇವಲ ಉದ್ಯೋಗ ಪಡೆಯುವುದಲ್ಲ, ಹೊಸ ವ್ಯವಸ್ಥೆಗಳನ್ನು ನಿರ್ಮಿಸುವವರಾಗಬಹುದು.
ಆದರೆ ಈ ಕ್ಷೇತ್ರದಲ್ಲಿ ಯಶಸ್ಸಿಗೆ ಅಡ್ಡದಾರಿಗಳಿಲ್ಲ.
ಅದಕ್ಕೆ ಬೇಕಾಗುವುದು –
- ನಿರಂತರ ಕಲಿಕೆ,
- ಸಮಸ್ಯೆ ಪರಿಹಾರ ಸಾಮರ್ಥ್ಯ,
- ತರ್ಕ,
- ಕುತೂಹಲ,
- ಮತ್ತು ತಾಳ್ಮೆ
ಭವಿಷ್ಯದ ಜಗತ್ತಿನಲ್ಲಿ “ಎಐ ಬಳಸುವವರು” ಮತ್ತು “ಎಐ ನಿರ್ಮಿಸುವವರು” ಎಂಬ ಎರಡು ವರ್ಗಗಳು ನಿರ್ಮಾಣವಾಗಬಹುದು. ಆ ಎರಡರಲ್ಲಿ ನೀವು ಯಾವ ವರ್ಗದಲ್ಲಿ ಇರಬೇಕೆಂದು ಈಗಲೇ ತೀರ್ಮಾನಿಸಬೇಕಾದ ಸಮಯ ಬಂದಿದೆ.
ಸೂಚನೆ : ಈ ಲೇಖನವು ತಾಂತ್ರಿಕ ಅಂಶಗಳನ್ನು ಹೊಂದಿದೆ. ಕನ್ನಡದಲ್ಲಿ ಸರಳವಾಗಿ ತಿಳಿಸಲು ಯತ್ನಿಸಲಾಗಿದೆ. ಆದಾಗ್ಯೂ ಬೇಕಾದಲ್ಲಿ ಇಂಗ್ಲಿಷ್ ಭಾಷೆಗೆ ಬದಲಾಯಿಸಿಕೊಂಡು ಓದಬಹುದಾಗಿದೆ.




