ಯುವ ಪತ್ರಕರ್ತ ಮೌನೇಶ್ ಪೋತರಾಜ ಅಪಘಾತಕ್ಕೆ ಬಲಿ

ಹಾವೇರಿ: ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಸುದ್ದಿ ಟಿವಿಯ ಶಿರಸಿ ವರದಿಗಾರ ಮೌನೇಶ್ ಪೋತರಾಜ ಸಾವಿಗೀಡಾಗಿದ್ದಾರೆ. ಹಾವೇರಿ ಜಿಲ್ಲೆಯ ಗುಂಡೂರು ಗ್ರಾಮದ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಶಿರಸಿಯಿಂದ ಛಬ್ಬಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುದ್ದಿ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯರು ಅವರನ್ನು ಸಮಾಧಾನ ಪಡಿಸುವ ದೃಶ್ಯ ಮನಕಲಕುವಂತಿತ್ತು.

ಯುವ ಪತ್ರಕರ್ತ ಮೌನೇಶ್ ಸಾವಿಗೆ ಸುದ್ದಿ ಟಿವಿ ಪ್ರಧಾನ ಸಂಪಾದಕರಾದ ಶಶಿಧರ್ ಭಟ್‌ ಅವರು ಸಂತಾಪ ಸೂಚಿಸಿದ್ದಾರೆ. ಜೊತೆಗೆ, ಸಾಮಾಜಿಕ ಜಾಲತಾಣಗಳಾದ ಫೇಸ್​​ಬುಕ್, ವಾಟ್ಸ್​​ಅಪ್​ಗಳಲ್ಲಿ ಕೂಡ ಮೌನೇಶ್ ಒಡನಾಡಿಗಳು ಅವರೊಂದಿಗಿನ ಒಡನಾಟದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೇ, ಭರವಸೆಯ ಪತ್ರಕರ್ತನೊಬ್ಬನನ್ನು ಕಳೆದುಕೊಂಡಿದ್ದೇವೆ ಎಂದು  ಕಂಬನಿ ಮಿಡಿದಿದ್ದಾರೆ.

ಮೌನೇಶ್ ಪೋತರಾಜ ಅವರ ಕವಿತೆ.

ನಾನು ಮತ್ತು ನಾನು

ಎಂದೋ ಒಂದು ದಿನ
ಶತಃಸ್ಸಿದ್ಧ ನನ್ನ ಮರಣ..

ಸಾವಲ್ಲವದುವೇ ನನ್ನ ಜನನ
ಯೋಚಿಸು ಕೊಲ್ಲುವಾ ಮುನ್ನ..

ನಿನಗೆ ಕೊಲ್ಲುವ ಧೈರ್ಯವಿಲ್ಲ
ನನಗೆ ಸಾವಿನ ಭಯವೇ ಇಲ್ಲ..

ನಾನು ಮನುಷತ್ವ ಬಿಟ್ಟಿಲ್ಲ
ನಿನಗೋ ಅದು ಗೊತ್ತಿಲ್ಲ..

ನೆನಿಪಿರಲಿ, ನನ್ನ ಸಾವೂ
ಒಂದು ಇತಿಹಾಸ ಸೃಷ್ಠಿಸಬಲ್ಲದು..

ತಿಳಿದಿರಲಿ, ನಿನ್ನ ಸ್ವಾರ್ಥ
ನನ್ನೇನೇನೂ ಮಾಡಲಾರದು..

ಆ ಆಕಾಶದತ್ತ ಒಮ್ಮೆ ನೋಡು,
ಗಟ್ಟಿಮೋಡವೂ ಚೆದುರುತಿಹುದು..

ನನ್ನ ನೋಟಕ್ಕೆ ಅದು ಕೂಡ
ಬೆದರಿಹುದು.

ಅನುಮಾನವಿದ್ದರೆ ಅದನ್ನೇ ಕೇಳು
ನಾನೇನೆಂಬುದ ತಿಳಿ ಹೇಳುವುದು…

– ಮೌನೇಶ ಪೋತರಾಜ

 

0

Leave a Reply

Your email address will not be published. Required fields are marked *