ನೀವು ಮತ ಹಾಕಿಲ್ಲ ನಾನು ಅಭಿವೃದ್ಧಿ ಮಾಡಲ್ಲ ಎಂದ ಕಾರ್ಪೊರೇಟರ್

ಇತ್ತೀಚೆಗೆ ತಮಗೆ ಮತಹಾಕಿಲ್ಲವೆಂದು ದ್ವೇಷ ಸಾಧಿಸುವ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರಂತೆ ಬೆಂಗಳೂರಿನ ಪ್ರದೇಶ ಒಂದರಲ್ಲಿ ಸಮಸ್ಯೆಗಳ ಸರಮಾಲೆಯೇ ಎದುರಾದರೂ  ಕಾರ್ಪೊರೇಟರ್​ ಒಬ್ರು ನೀವು ಓಟ್​ ಹಾಕಿಲ್ಲ ನಾನು ಅಭಿವೃದ್ಧಿ ಮಾಡಲ್ಲ ಅಂತಿದ್ದಾರಂತೆ. ಹೀಗಾಗಿ ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ.

ಮನೆಗೆ ನುಗ್ಗುತ್ತಿರುವ ಗಬ್ಬು ನಾರುವ ಚರಂಡಿ ನೀರು. ಸಂಪೂರ್ಣ ಹದಗೆಟ್ಟಿರುವ ರಸ್ತೆ. ಈ ಅವ್ಯವಸ್ಥೆಯ ವಿರುದ್ಧ ಪ್ರತಿಭಟಿಸುತ್ತಿರುವ ಸ್ಥಳೀಯರು. ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ಥಣಿಸಂದ್ರ ವಾರ್ಡ್​​​​ನ ಮಂಜುನಾಥ ಲೇಔಟ್​.

ಈ ವಾರ್ಡ್​​​​ನ ಸ್ಥಿತಿ ಎರಡು ವರ್ಷದ ಹಿಂದೆ ಹೇಗಿತ್ತೋ ಇಂದೂ ಕೂಡ ಅದೇ ರೀತಿಯಾಗಿದೆ. ಏರಿಯಾದಲ್ಲಿರುವ ಪ್ರತಿ ಮನೆಗಳಿಗೂ ಗಬ್ಬು ನಾರುವ ಚರಂಡಿ ನೀರು ನುಗ್ಗುತ್ತಿದೆ. ಮಳೆ ಬಂತಂದ್ರೆ ಸಂಪೂರ್ಣ ಏರಿಯಾವೇ ಕೆರೆಯಾಗಿ ಮಾರ್ಪಾಟಾಗುತ್ತೆ. ಇನ್ನು ಗಬ್ಬು ನಾರುವ ನೀರಿನಿಂದ ಸ್ಥಳೀಯರು ನಾನಾ ಖಾಯಿಲೆಗಳಿಗೆ ತುತ್ತಾಗ್ತಿದ್ದಾರೆ. ಜೊತೆಗೆ ರಸ್ತೆಗಳಂತೂ ಡಾಂಬರನ್ನು ಕಂಡು ಎಷ್ಟೋ ವರ್ಷಗಳೆ ಕಳೆದಿವೆ. ಈ ದುಸ್ಥಿತಿಯ ಕುರಿತಾಗಿ ಸ್ಥಳೀಯ ಕಾರ್ಪೊರೇಟರ್​ ಮಮತಾ ವೆಂಕಟೇಶ್ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅದರ ಬದಲಾಗಿ ನಿಮ್ಮ ಏರಿಯಾದವ್ರು ನನಗೆ ಮತ ನೀಡಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳಾಗ್ತಿಲ್ಲ ಅಂತಿದ್ದಾರಂತೆ.

ಇನ್ನು ಸ್ಥಳೀಯ ಕಾರ್ಪೊರೇಟರ್​ ಇಷ್ಟಕ್ಕೆ ಸುಮ್ಮನಾಗದೆ, ನಿಮ್ಮ ಏರಿಯಾದ ಓಟಿನ ಅವಶ್ಯಕತೆಯೇ ನನಗಿಲ್ಲ. ನಿಮ್ಮ ಮತವಿಲ್ಲದೆಯೂ ನಾನು ಗೆಲ್ಲಬಲ್ಲೆ. ಹೀಗಾಗಿ ನಿಮ್ಮ ಏರಿಯಾವನ್ನು ಅಭಿವೃದ್ಧಿ ಪಡಿಸುತ್ತಿಲ್ಲ ಅಂತಿದ್ದಾರಂತೆ. ಇನ್ನು ಕಾರ್ಪೊರೇಟರ್​​ ಈ ನಡೆ ವಿರುದ್ಧ ಇಂದು ಸ್ಥಳಿಯರು ಪ್ರತಿಭಟನೆ ನಡೆಸಿದ್ರು. ರಸ್ತೆ ತಡೆ ನಡೆಸಿ, ಕಾರ್ಪೊರೇಟರ್​ ವಿರುದ್ಧ ಘೋಷಣೆ ಕೂಗಿದ್ರು. ಅಲ್ಲದೇ ತಕ್ಷಣವೇ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗದಿದ್ರೆ ಮುಂದಿನ ದಿನಗಳಲ್ಲಿ ಬೃಹತ್​ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ರು.

ಗೆದ್ದು ಬಂದ ಜನಪ್ರತಿನಿಧಿಗಳು ಕೇವಲ ಅವ್ರಿಗೆ ಮತ ನೀಡಿದವರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಹೀಗಾಗಿ ಜನಪ್ರತಿನಿಧಿಗಳು ಹೀಗೆ ದ್ವೇಷ ಸಾಧಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಾದರೂ ಎಚ್ಚೆತ್ತುಕೊಂಡು ವಾರ್ಡ್​​​​ ಅಭಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ.

ಸುಬ್ರಹ್ಮಣ್ಯ ಎಸ್​ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *