ಪಾಕ್ ಚಿತ್ರ, ಕಾರ್ಯಕ್ರಮಗಳಲ್ಲಿ ನಟಿಸಲು ಬಯಸುತ್ತೇನೆ: ಪರೇಶ್ ರಾವಲ್

ನವದೆಹಲಿ: ಪಾಕಿಸ್ತಾನಿ ಚಿತ್ರ ಮತ್ತು ಕಾರ್ಯಕ್ರಮಗಳಲ್ಲಿ ಕೆಲಸ ಮಾಡುವುದಕ್ಕೆ ನಾನು ಬಯಸುತ್ತೇನೆ. ನಮ್ಮ ಕಾರ್ಯಕ್ರಮಗಳು ಬೋರು ಹೊಡೆಸುತ್ತಿವೆ ಎಂದು ಬಿಜೆಪಿ ಸಂಸದ ಮತ್ತು ಬಾಲಿವುಡ್ ನಟ ಟ್ವೀಟ್ ಮಾಡಿದ್ದಾರೆ. ಕಲಾವಿದರು ಮತ್ತು ಕ್ರಿಕೆಟಿಗರು ಬಾಂಬ್ ಎಸೆಯುವವರಂತಲ್ಲ ಎಂದು ನಟ ಮತ್ತು ರಾಜಕಾರಣಿ ಪರೇಶ್ ರಾವಲ್ ಹೇಳಿದ್ದಾರೆ. ಅಲ್ಲದೇ, ಪಾಕಿಸ್ತಾನದ ಧಾರಾವಾಹಿಗಳು ಮತ್ತು ಚಿತ್ರಗಳಲ್ಲಿ ನಟಿಸುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಹೌದು ನಾನು ಪಾಕಿಸ್ತಾನ ಚಿತ್ರಗಳು ಮತ್ತು ಕಾರ್ಯಕ್ರಮಗಳಲ್ಲಿ ನಟಿಸಲು ಬಯಸುತ್ತೇನೆ. ನಾನು ಹಂಸಫರ್​​ನಂತಹ ಪಾಕಿಸ್ತಾನಿ ಧಾರಾವಾಹಿಗಳನ್ನು ಇಷ್ಟಪಡುತ್ತೇನೆ. ಅಲ್ಲಿನ ಕತೆ, ನಟನೆ, ಬರಹ ಮತ್ತು ಭಾಷೆಗಳೆಲ್ಲವು ಉತ್ತಮವಾಗಿವೆ. ನಮ್ಮ ಕಾರ್ಯಕ್ರಮಗಳೇ ಬೋರ್ ಹೊಡೆಸುತ್ತಿವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರ ಎ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಪಾಕಿಸ್ತಾನಿ ಕಲಾವಿದ ಫವದ್ ಖಾನ್ ನಟಿಸಿದ್ದರು. ಪಾಕಿಸ್ತಾನ ಭಾರತದ ಉರಿ ಸೇನಾ ನೆಲೆಯ ಮೇಲೆ ನಡೆಸಿದ್ದ ದಾಳಿ ವಿರೋಧಿಸಿ ಪಾಕಿಸ್ತಾನದ ನಟರು ಭಾರತೀಯ ಚಿತ್ರಗಳಲ್ಲಿ ನಟಿಸುವುದನ್ನು ನಿಷೇಧಿಸುವಂತೆ ಮತ್ತು ಚಿತ್ರ ಬಿಡುಗಡೆಯಾಗದಂತೆ ಸಂಘಪರಿವಾರ ಮೂಲದ ಪಕ್ಷ ಮತ್ತು ಸಂಘಟನೆಗಳು ಚಿತ್ರದ ಬಿಡುಗಡೆಗೆ ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ದವು. ಆದರೆ, ಇದೀಗ ಸ್ವತಃ ಬಿಜೆಪಿ ಸಂಸದರೇ ಪಾಕ್ ಚಿತ್ರ ಮತ್ತು ಕಾರ್ಯಕ್ರಮಗಳ ಗುಣಮಟ್ಟಕ್ಕೆ ಉತ್ತಮ ಎಂಬ ಸರ್ಟಿಫಿಕೇಟ್ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಕೂಡ ಪ್ರತಿಕ್ರಿಯಸಿರುವ ಪರೇಶ್ ರಾವಲ್, ನಾವು ಪಾಕ್ ಪ್ರೇರಿತ ಭಯೋತ್ಪಾದನೆ ಮತ್ತು ಸೇನೆಯ ವಿರುದ್ಧ ಇದ್ದೇವೆಯೇ ಹೊರತು ಪಾಕಿಸ್ತಾನಿ ನಾಗರರಿಕರ ವಿರುದ್ಧ ಇಲ್ಲ ಎಂದಿದ್ದಾರೆ.

ಅರುಂಧತಿ ರಾಯ್ ಅವರು 70 ಲಕ್ಷ ಸೈನಿಕರಿದ್ದರೂ ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದು ಸಾಧ್ಯವಾಗಿಲ್ಲ ಎಂದಿದ್ದಾರೆ ಎಂದು ಬಲಪಂಥೀಯ ನಕಲಿ ಸುದ್ದಿ ಜಾಲಗಳು ಮಾಡಿದ ವರದಿಯನ್ನು ಆಧರಿಸಿ, ಪರೇಶ್ ರಾವಲ್ ಅವರು, ಜಮ್ಮ ಕಾಶ್ಮೀರದಲ್ಲಿ ಸೇನೆಗೆ ಕಲ್ಲೆಸೆಯುವವರನ್ನು ಕಟ್ಟುವ ಬದಲಿಗೆ ಅರುಂಧತಿ ರಾಯ್ ಅವರನ್ನು ಕಟ್ಟಬೇಕು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಪರ – ವಿರುದ್ಧ ಸಾಕಷ್ಟು ವಾಗ್ವಾದಗಳೂ ನಡೆದಿದ್ದವು.

67 ವರ್ಷದ ಹಿರಿಯ ನಟರಾದ ಪರೇಶ್ ರಾವಲ್, ಭಾರತ ಮತ್ತು ಪಾಕಿಸ್ತಾನದ ಸಿನಿಮಾ ನಂಟಿನ ಕುರಿತು ಕೂಡ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ಪಾಕಿಸ್ತಾನಿ ನಟರ ನಿಷೇಧದ ಪ್ರಸ್ತಾವನೆಯನ್ನು ಕೂಡ ಅವರು ತಿರಸ್ಕರಿಸಿದ್ದಾರೆ. ಅಲ್ಲದೇ, ಯಾವುದೇ ವಿಷಯದ ಕುರಿತಾಗಲಿ ಅಥವಾ ವ್ಯಕ್ತಿಗಾಗಲಿ ನಿಷೇಧ ಹೇರಬೇಕಿಲ್ಲ. ದೇಶದಲ್ಲಿ ಒಳ್ಳೆಯ ಭಾವನೆಯಿದ್ದ ಸಂದರ್ಭದಲ್ಲಿ ಯಾವುದೇ ಕೆಟ್ಟ ಘಟನೆಗಳು ನಡೆದಿಲ್ಲ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಪರೇಶ್ ರಾವಲ್ ಅವರು ಲೇಖಕಿ ಅರುಂಧತಿ ರಾಯ್ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಪಾಕಿಸ್ತಾನದ ಸಿನಿಮಾ ಮತ್ತು ಧಾರಾವಾಹಿಗಳನ್ನು ಹೊಗಳುವ ಮೂಲಕ ಅವರು ಸಂಘ ಪರಿವಾರ ಮತ್ತು ಬಿಜೆಪಿಯವರ ಕೆಂಗಣ್ಣಿಗೆ ಅವರು ಗುರಿಯಾಗುವ ಸಾಧ್ಯತೆ ಇದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *