2014ರಲ್ಲಿ ನಡೆದ ತಪ್ಪು ಪುನರಾವರ್ತಿಸುವುದಿಲ್ಲ: ಎನ್​ಡಿಎ ಮೈತ್ರಿ ಕುರಿತು ಶಿವಸೇನೆ ಹೇಳಿಕೆ

ದೆಹಲಿ/ಮುಂಬೈ: ಶಿವಸೇನೆ 52ನೇ ವರ್ಷಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿ ಕುರಿತು ತಕರಾರು ತೆಗೆದಿದೆ. ಅನೇಕ ಹಂತಗಳಲ್ಲಿ ಮೈತ್ರಿ ಪಕ್ಷಗಳಿಗೆ ಬಿಜೆಪಿ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿರುವ ಶಿವಸೇನೆ, ತನ್ನ ಮುಖವಾಣಿಯಾದ ಸಾಮ್ನಾದಲ್ಲಿ ಎನ್​ಡಿಎ ಮೈತ್ರಿ ಕೂಟ ತೊರೆಯುವ ಸೂಚನೆ ನೀಡಿದೆ.

ಸಾಮ್ನಾದ ಸಂಪಾದಕೀಯದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಶಿವಸೇನೆ, 2014ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಾಡಿರುವ ತಪ್ಪನ್ನು 2019ರಲ್ಲಿ ಪುನರಾವರ್ತಿಸುವುದಿಲ್ಲ ಎಂದಿದೆ. ಈ ಮೂಲಕ 2019ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಮೂಲಕ ಪ್ರಮುಖ ಪಾತ್ರ ವಹಿಸಲು ನಿರ್ಧರಿಸಿದೆ.

ಶಿವಸೇನೆಯ ಹಾದಿ ಸರಳವಾಗಿಲ್ಲ. ನಮ್ಮ ದಾರಿಯಲ್ಲಿ ಅನೇಕ ಅಡೆತಡೆಗಳಿವೆ. ಎಲ್ಲ ತೊಡಕುಗಳ ನಡುವೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ, ಜಯಿಸುವ ವಿಶ್ವಾಸವಿದೆ. ಮುಂಬರುವ ಚುನಾವಣೆಗಳಲ್ಲಿ ನಾವು ಪ್ರಮುಖ ಪಾತ್ರ ವಹಿಸಲಿದ್ದೇವೆ ಎಂದು ಸಂಪಾದಕೀಯದಲ್ಲಿ ಬರೆದುಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ನಾಗರಿಕತ್ವ ಮಸೂದೆ ತಿದ್ದುಪಡಿ – 2016ನ್ನು ಖಂಡಿಸಿರುವ ಸೇನೆ, ಇದರ ಮೂಲಕ ಕಾನೂನು ಬಾಹಿರವಾಗಿ ಅಕ್ರಮವಾಗಿ ಪಾಕಿಸ್ತಾನ, ಬಾಂಗ್ಲಾ ಮತ್ತು ಆಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ನುಸುಳಲು ಅವಕಾಶ ನಿಡಲಾಗಿದೆ ಎಂದು ದೂರಿದೆ. ಅಲ್ಲದೇ, ಹಿಂದೂ, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರ ಹೆಸರಿನಲ್ಲಿ ಭಾರತದ ನಾಗರಿಕತ್ವ ನೀಡಲಾಗುತ್ತಿದೆ ಎಂದು ಆರೋಪಿಸಿದೆ.

ಅಸ್ಸಾಂನ ಸಂಸ್ಕೃತಿ ಮತ್ತು ಅಸ್ಮಿತೆ ಅಪಾಯದಲ್ಲಿದೆ ಎಂದಿರುವ ಸೇನೆ, ಕೇಂದ್ರ ಸರ್ಕಾರ ವಿದೇಶೀ ಚಿಂತನೆಗಳಿಗೆ ರಾಜ್ಯದಲ್ಲಿ ಅವಕಾಶ ನೀಡಿದೆ. ಈ ಮೂಲಕ ರಾಜ್ಯದ ಜನರನ್ನು ರಾಜಿಗೆ ಒಳಪಡಿಸಲಾಗಿದೆ ಎಂದು ದೂರಲಾಗಿದೆ. ಜೊತೆಗೆ, ಮುಂಬೈನ ಕೆಲವು ಪ್ರದೇಶಗಳಲ್ಲಿ ಹೆಸರು ಬದಲಿಸುವ ಕುರಿತು ತಕರಾರು ತೆಗೆದಿದೆ. ಈ ಹಿಂದೆ, ವೊರ್ಲಿ, ಮಲಬಾರ್ ಹಿಲ್ಸ್ ಹೆಸರು ಬದಲಿಸುವ ಸಂದರ್ಭದಲ್ಲಿ ಕೂಡ ಸೇನೆ ತಕರಾರು ತೆಗೆದಿತ್ತು.

ರಾಜಧಾನಿ ದೆಹಲಿಯಲ್ಲಿ ಧೂಳಿನ ಮಾರುತ ಅಪ್ಪಳಿಸಿದೆ. ದೇಶಾದ್ಯಂತ ಜನರ ಜೀವನ ದುಃಸ್ಥರವಾಗಿದೆ. ಆದರೆ, ಪ್ರಧಾನಿ ಮೋದಿ ಶಾಂತಚಿತ್ತರಾಗಿದ್ದಾರೆ ಎಂದು ಕಟುವಾಗಿ ಟೀಕಿಸಿದೆ. ಕೇವಲ ದೆಹಲಿ ಮಾತ್ರವಲ್ಲ, ಇಡೀ ದೇಶವೇ ಸಮಸ್ಯೆಯಲ್ಲಿದೆ. ಆದರೆ, ಮೋದಿಯವರು ಇವುಗಳ ಕುರಿತು ಗಮನ ಹರಿಸುವುದಿಲ್ಲ. ಅವರು ದೇಶದಲ್ಲೇ ಇಲ್ಲ ಎಂದು ಕಿಡಿಕಾರಿದೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದೆಯೇ? ಎಂದು ಪ್ರಶ್ನಿಸಿರುವ ಶಿವಸೇನೆ, ಈಗ ಇಂಥ ಪ್ರಶ್ನೆಗಳು ಎದ್ದಿವೆ. ನಮ್ಮ ಯೋಧರು ಬಲಿಯಾಗುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ತಣ್ಣಗೆ ಕುಳಿತಿದೆ ಎಂದು ವಾಗ್ದಾಳಿ ನಡೆಸಿದೆ. ಇದರೊಂದಿಗೆ ಕಳೆದ 52 ವರ್ಷಗಳ ಪಕ್ಷದ ಪ್ರಯಾಣವನ್ನು ಕೂಡ ಈ ಬಾರಿಯ ಸಾಮ್ನಾದಲ್ಲಿ ಮೆಲುಕು ಹಾಕಲಾಗಿದ್ದು, ಮೈಲುಗಲ್ಲುಗಳು, ಸಾಧನೆಗಳ ಕಿರುಚಿತ್ರಣವನ್ನು ನೀಡಲಾಗಿದೆ. ದೇಶ ಮತ್ತು ರಾಜ್ಯಕ್ಕೆ ಪಕ್ಷ ನೀಡಿರುವ ಕೊಡುಗೆಗಳ ಪಟ್ಟಿಯನ್ನು ಕೂಡ ನೀಡಲಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *