ಲಖ್ನೋ: ಎಲ್ಲೇ ಯಾವುದೇ ಚುನಾವಣೆಗೂ ನಾವು ಮೈತ್ರಿಗೆ ಸಿದ್ಧ. ಆದರೆ, ನಮಗೆ ಗೌರವಾರ್ಹ ಪಾಲು (ಕ್ಷೇತ್ರಗಳು) ಸಿಕ್ಕರೆ ಮಾತ್ರ ಮೈತ್ರಿ. ಇಲ್ಲವಾದಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮತ್ತು ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಹೇಳಿದ್ದಾರೆ. ಈ ಮೂಲಕ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟ ರಚನೆ ಕುರಿತು ತಮ್ಮ ಅಭಿಪ್ರಾಯವನ್ನು ಅವರು ಸ್ಪಷ್ಟವಾಗಿ ಹೇಳಿದಂತಾಗಿದೆ.
ಕೇಂದ್ರದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ, ಅದು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ಎಲ್ಲರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಅನುಸರಿಸುತ್ತಿದೆ ಎಂದ ಅವರು, ಅಟಲ್ ಬಿಹಾರಿ ವಾಜಪೇಯಿ ಸಾವನ್ನು ಲಾಭಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಭೀಮ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ತಮ್ಮನ್ನು ಚಿಕ್ಕಮ್ಮ ಎಂದ ಕುರಿತು ಸ್ಪಷ್ಟೀಕರಣ ನೀಡಿದ ಅವರು, ಅಂತಹ ವ್ಯಕ್ತಿಗಳೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಸಾಮಾನ್ಯ ಮನುಷ್ಯರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಗಳು ನನಗೆ ಸಂಬಂಧಿಕರು ಎಂದರು.