ಮೋದಿ ಇಷ್ಟಪಟ್ಟ ಆಹಾರವನ್ನು ತಿನ್ನಬೇಕೆ: ಎಂ ಕೆ ಸ್ಟಾಲಿನ್

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಇಷ್ಟಪಟ್ಟ ಆಹಾರವನ್ನು ಮಾತ್ರ ನಾವು ತಿನ್ನಬೇಕು ಎಂದು ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್ ವಾಗ್ದಾಳಿ ನಡೆಸಿದರು. ಕಳೆದ 23ರಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೋ ಮಾರಾಟಕ್ಕೆ ಸಂಬಂಧಿಸಿದ ತಿದ್ದುಪಡಿಯನ್ನು ವಿರೋಧಿಸಿ ಡಿಎಂಕೆ ನಡೆಸಿದ ಪ್ರತಿಭಟನೆಯಲ್ಲಿ ಜಲ್ಲಿಕಟ್ಟು ಸಂಬಂಧ ನಡೆದಂಥ ಮತ್ತೊಂದು ಮರೀನಾ ಕ್ರಾಂತಿ ನಡೆಸುವುದಾಗಿ ಅವರು ಎಚ್ಚರಿಕೆಯನ್ನೂ ನೀಡಿದರು.

ಇದೇ ವೇಳೆ ಬಲಪಂಥೀಯ ಸಂಘಟನೆಯ ವಿದ್ಯಾರ್ಥಿಗಳಿಂದ ಐಐಟಿ ಪಿಎಚ್​​.ಡಿ., ವಿದ್ಯಾರ್ಥಿ ಸೂರಜ್ ಮೇಲೆ ನಡೆಸಿದ ಹಲ್ಲೆಯನ್ನೂ ಖಂಡಿಸಿದರು. ಈ ವೇಳೆ ಡಿಎಂಕೆ ನೂರಾರು ಕಾರ್ಯಕರ್ತರು ಮತ್ತು ಡಿಎಂಕೆ ನಾಯಕಿ ಕನಿಮೊಳಿ ಕೂಡ ಭಾಗವಹಿಸಿದ್ದರು.

ಬಿಜೆಪಿ ತಮ್ಮ ಮೂರು ವರ್ಷಗಳ ನಿಷ್ಕ್ರಿಯತೆಯನ್ನು ಮುಚ್ಚಿಹಾಕಲು ಇಂಥ ವಿವಾದಾಸ್ಪದ ಅಧಿಸೂಚನೆಯನ್ನು ಹೊರಡಿಸಿದೆ. ಈ ಕುರಿತು ತಮಿಳುನಾಡು ಸಿಎಂ ಮೌನವಾಗಿರುವುದು ಏಕೆ ಎಂದು ಕೂಡ ಪ್ರಶ್ನಿಸಿದರು. 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನೀಡಿದ ಭರವಸೆಗಳನ್ನು ಉಲ್ಲೇಖಿಸಿದ ಸ್ಟಾಲಿನ್, ಯಾರೊಬ್ಬರಿಂದಲೂ ಕಪ್ಪುಹಣವನ್ನು ವಸೂಲಿ ಮಾಡಿಲ್ಲ. ಹೊಸ ಉದ್ಯೋಗಗಳನ್ನೂ ಸೃಷ್ಟಿಸಿಲ್ಲ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

ಗೋ ಮಾಂಸ ತಿನ್ನುವುದನ್ನು ನಿಷೇಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಬಯಸಿದ್ದನ್ನೇ ನಾವು ತಿನ್ನುವಂಥ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ಸಂವಿಧಾನದತ್ತವಾಗಿರುವ ನಾಗರಿಕರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟರು. ಅಲ್ಲದೇ, ಇಂಥ ವಿವಾದಾತ್ಮಕ ನಿರ್ಣಯಗಳ ಮೂಲಕ ದೇಶದಲ್ಲಿರುವ ಸಮಸ್ಯೆಗಳಿಂದ ವಿಮುಖಗೊಳಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದರು.

ಬಿಜೆಪಿ ಮೂರು ವರ್ಷಗಳ ತನ್ನ ಅಧಿಕಾರಾವಧಿಯನ್ನು ಪೂರೈಸಿದೆ. ಈ ಅವಧಿಯಲ್ಲಿ ಜನರಿಗೆ ಅನುಕೂಲಕರವಾದ ಯಾವುದೇ ಸಾಧನೆಗಳನ್ನೂ ಮಾಡಿಲ್ಲ. ಆದ್ದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂಥ ಕಾನೂನುಗಳನ್ನು ರೂಪಿಸುತ್ತಿದೆ ಎಂದರು.

2014ರಲ್ಲಿ ಮೋದಿಯವರು ವಿದೇಶಗಳಲ್ಲಿರುವ ಕಪ್ಪುಹಣವನ್ನು ತಂದು ಭಾರತೀಯರ ಖಾತೆಗಳಿಗೆ 15 ಲಕ್ಷ ರೂ.ಗಳನ್ನು ಹಾಕುವ ಭರವಸೆ ನೀಡಿದ್ದನ್ನು ನೆನಪಿಸಿದ ಅವರು, ಕನಿಷ್ಠ ಜನರ ಖಾತೆಗೆ 15 ರೂ.ಗಳನ್ನಾದರೂ ಜಮಾ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ 2014ರ ಲೋಕಸಭೆ ಚುನಾವಣೆಯಲ್ಲಿ ಒಕ್ಕೂಟ ಪದ್ಧತಿಗೆ ಅನುವು ಮಾಡಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ಈಗ ಸಿಎಂಗಳನ್ನು ನಗರಸಭೆ ಮುಖ್ಯಸ್ಥರಿಗೆ ಸಮನಾಗಿಸಿದೆ ಎಂದರು. ನೂತನವಾಗಿ ಹೊರಡಿಸಿರುವ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳದಿದ್ದಲ್ಲಿ, ಜಲ್ಲಿಕಟ್ಟು ಮಾದರಿಯಲ್ಲಿ ಮರೀನಾ ಕ್ರಾಂತಿ ನಡೆಯುತ್ತದೆ ಎಂದು ಕೂಡ ಎಚ್ಚರಿಸಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *