ಗೋರಕ್ಷಕರ ದಾಳಿ ನಿಯಂತ್ರಿಸಲು ಮಾನವ ಸಂಪನ್ಮೂಲದ ಕೊರತೆ: ರಾಜಸ್ಥಾನ ಗೃಹ ಸಚಿವ

ಅಲ್ವರ್: ರಾಜಸ್ಥಾನದಲ್ಲಿ ನಡೆಯುತ್ತಿರುವ ಗೋರಕ್ಷರ ದಾಳಿಯನ್ನು ನಿಯಂತ್ರಿಸಲು ಅಗತ್ಯ ಪ್ರಮಾಣದ ಮಾನವ ಸಂಪನ್ಮೂಲ ಇಲ್ಲ ಎಂದು ವಿವಾದಾಸ್ಪದ ಹೇಳಿಕೆಯನ್ನು ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಗೋರಕ್ಷರ ದಾಳಿಗಳನ್ನು ತಡೆಯುವಲ್ಲಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ವಿಫಲವಾಗಿರುವುದನ್ನು ಒಪ್ಪಿಕೊಂಡಂತಾಗಿದೆ. ಈ ನಡುವೆ ಉಮ್ಮರ್ ಹಂತಕರನ್ನು ಬಂಧಿಸುವಂತೆ ಅವರ ಸಂಬಧಿಕರು ಆಗ್ರಹಿಸಿದ್ದಾರೆ.

ಕಳೆದ ಶುಕ್ರವಾರ ಗೋರಕ್ಷರ ದಾಳಿಯಿಂದ ಗುಂಡಿನ ದಾಳಿಗೆ ಗುರಿಯಾಗಿ ಬಲಿಯಾಗಿದ್ದ ಪ್ರಕರಣದ ಕುರಿತು ರಾಜಸ್ಥಾನದ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ವಿವರಣೆ ನೀಡಿದ್ದಾರೆ. ಎಲ್ಲ ನಗರಗಳಲ್ಲಿ ಏಕಕಾಲಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸಲು ಅಗತ್ಯವಾದ ಮಾನವ ಸಂಪನ್ಮೂಲ ತಮ್ಮ ಬಳಿ ಇಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುತ್ತದೆ ಎಂದು ಕೂಡ ಅವರು ಭರವಸೆ ನೀಡಿದ್ದಾರೆ.

ವಾಹನದಲ್ಲಿ 5 ದನಗಳಿದ್ದವು. ಇವುಗಳ ಪೈಕಿ ಒಂದು ಸತ್ತುಹೋಗಿತ್ತು. ಅದರ ಬಳಿಯೇ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಶವವನ್ನು ತಮ್ಮ ಕುಟುಂಬದವರದು ಎಂದು ಕೆಲವರು ಹೇಳಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ ಎಂದು ಅವರು ವಿವರಿಸಿದರು. ಮೃತ ದೇಹವನ್ನು ಶವ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯೇ ಒಬ್ಬನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಏನನ್ನೂ ಸ್ಪಷ್ಟವಾಗಿ ಈಗಲೇ ಹೇಳುವುದು ಸಾಧ್ಯವಿಲ್ಲ. ಆದರೆ, ಶೀಘ್ರದಲ್ಲೇ ಪ್ರಕರಣವನ್ನು ಭೇದಿಸಲಾಗುವುದು. ಅಪರಾಧಿಗಳಿಗೆ ಶಿಕ್ಷೆ ನೀಡಲಾಗುವುದು ಎಂದರು.

ಗೋರಕ್ಷಕರು ರಾಜಸ್ಥಾನದ ಅಲ್ವರ್​​ನಲ್ಲಿ ಮತ್ತೊಂದು ಬಲಿ ಪಡೆದಿದ್ದಾರೆ. ಪೆಹ್ಲು ಖಾನ್ ಹತ್ಯೆಯ ನೆನಪು ಮಾಸುವ ಮುನ್ನವೇ 7 ಜನ ಗೋರಕ್ಷಕರು 35 ವರ್ಷದ ಉಮ್ಮರ್ ಖಾನ್​ನನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಕಳೆದ ಶುಕ್ರವಾರವೇ ಹತ್ಯೆ ನಡೆದಿದ್ದು, ಭಾನುವಾರ ಉಮ್ಮರ್ ಸಂಬಂಧಿಕರು ಶವವನ್ನು ಗುರುತಿಸಿದ್ದಾರೆ. ಬಲಿಯಾಗಿರುವ ಉಮ್ಮರ್ ಭಾರತ್​ಪುರದ ಘಾಟ್ಮಿಕ ಹಾಲಿನ ಡೈರಿ ನಡೆಸುತ್ತಿದ್ದ ರೈತ ಎಂದು ವರದಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಆಳ್ವಾರ್​​​ನ ಜಿಲ್ಲಾಸ್ಪತ್ರೆಯ ಸುತ್ತ ಮುಸ್ಲಿಮರು ನೆರೆದು, ಹತ್ಯೆಗೈದವರ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗೋರಕ್ಷಕರು ತಮ್ಮ ಸಂಬಂಧಿಕನನ್ನು ಹತ್ಯೆಗೈದಿದ್ದಾರೆ ಎಂದು ಸಂಬಂಧಿಕರು ದೂರನ್ನೂ ನೀಡಿದ್ದರು.

ರಾಜಸ್ಥಾನದ ಅಲ್ವರ್​​ನಲ್ಲಿ ಗೋರಕ್ಷಕರ ದಾಳಿಯಲ್ಲಿ ಬಲಿಯಾದ ಉಮ್ಮರ್​ನನ್ನು ಯಾರು ಹತ್ಯೆಗೈದಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಮೃತನ ಚಿಕ್ಕಪ್ಪ ಹೇಳಿದ್ದಾರೆ. ಆದರೆ, ಅವನು ದನದ ಕಳ್ಳಸಾಗಣೆದಾರನಲ್ಲ. 3 ಸ್ವಂತ ದನಗಳನ್ನು ಅವನು ಹೊಂದಿದ್ದ ಎಂದಿದ್ದಾರೆ. ಉಮ್ಮರ್​​ನನ್ನು ಅಮಾನುಷವಾಗಿ ಹತ್ಯೆಗೈಯಲಾಗಿದೆ. ಅವನ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *