ಭಾರತದ ಮಾಧ್ಯಮಗಳನ್ನು ಗೇಲಿ ಮಾಡಿದ ವಿಜಯ್ ಮಲ್ಯ

ಲಂಡನ್: ಭಾರತ – ಪಾಕ್ ಕ್ರಿಕೆಟ್ ಪಂದ್ಯವನ್ನು ಲಂಡನ್​ ಎಡ್ಜ್​ಬಾಸ್ಟನ್​ನಲ್ಲಿ ವೀಕ್ಷಿಸಿದ್ದಕ್ಕೆ ಭಾರೀ ಪ್ರಚಾರ ನೀಡಿದ ಭಾರತೀಯ ಮಾಧ್ಯಮಗಳನ್ನು ಉದ್ಯಮಿ ವಿಜಯ್ ಮಲ್ಯ ಗೇಲಿ ಮಾಡಿದ್ದಾರೆ. ನಾನು ಕ್ರಿಕೆಟ್ ವೀಕ್ಷಿಸಿದ್ದನ್ನು ಭಾರೀ ಸೆನ್ಸೇಷನಲ್ ಸುದ್ದಿಯಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಎಲ್ಲ ಆಟಗಳ ಭಾರತೀಯ ಆಟಗಾರರಿಗೆ ಹಾರೈಸುವುದು ನನ್ನ ಉದ್ದೇಶ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೇ, ಭಾರತೀಯ ಕ್ರಿಕೆಟ್ ತಂಡದಲ್ಲಿರುವುದು ವಿಶ್ವ ದರ್ಜೆಯ ಆಟಗಾರರು, ವಿರಾಟ್ ಕೊಹ್ಲಿ ವಿಶ್ವ ದರ್ಜೆಯ ನಾಯಕ ಎಂದು ಕೂಡ ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ಭಾನುವಾರ ಲಂಡನ್​​ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಭಾರತ – ಪಾಕ್ ನಡುವಿನ ಪಂದ್ಯವನ್ನು ವಿಐಪಿ ಸ್ಟಾಂಡ್​​ನಲ್ಲಿ ಕುಳಿತು ವಿಜಯ್ ಮಲ್ಯ ವೀಕ್ಷಿಸಿದ್ದರು. ಈ ವಿಷಯವನ್ನು ಭಾರತೀಯ ಮಾಧ್ಯಮಗಳು ಮುಖ್ಯ ಸುದ್ದಿಯಾಗಿ ಪ್ರಸಾರ ಮಾಡಿದ್ದವು. ಈ ಕುರಿತು ವಿಜಯ್ ಮಲ್ಯ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.

900 ಕೋಟಿ ರೂ. ಸಾಲ ಪಾವತಿಯಲ್ಲಿ ವಿಫಲವಾದ ಕಾರಣಕ್ಕೆ ವಿಜಯ್ ಮಲ್ಯ ಅವರನ್ನು ಗಡೀಪಾರು ಮಾಡಬೇಕು ಎಂಬ ಭಾರತದ ಮನವಿಯ ಮೇರೆಗೆ ಅವರನ್ನು ಬ್ರಿಟಿಷ್ ಅಧಿಕಾರಿಗಳು ಏಪ್ರಿಲ್​​ನಲ್ಲಿ ಬಂಧಿಸಿದ್ದರು. ಆದರೆ, ಕೆಲವೇ ಗಂಟೆಗಳ ಅವಧಿಯಲ್ಲಿ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಸಿಬಿಐ ಅವರ ವಿರುದ್ಧ ಎರಡು ದೂರುಗಳನ್ನು ದಾಖಲಿಸಿದ್ದು, ಐಡಿಬಿಐ ಮತ್ತು ಎಸ್​​ಬಿಐ ಸಮೂಹ ಬ್ಯಾಂಕ್​​ ಗಳಿಗೆ 6,000 ಕೋಟಿ ರೂ. ಮತ್ತು ಬಡ್ಡಿ ಸೇರಿ ಒಟ್ಟು 9,000 ಕೋಟಿ ರೂ.ಗಳನ್ನು ವಿಜಯ್ ಮಲ್ಯ ಪಾವತಿಸಬೇಕಿದೆ. ಕಳೆದ ವರ್ಷದ ಮಾರ್ಚ್​​ನಲ್ಲಿ ಅವರು ದೇಶ ತೊರೆದು ಲಂಡನ್​​ನಲ್ಲಿ ನೆಲೆಸಿದ್ದಾರೆ. ಅವರನ್ನು ಸ್ವದೇಶಕ್ಕೆ ಕರೆತರಲು ಭಾರತ ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ, ಇಂಗ್ಲೆಂಡ್​​ನ ನಿಯಮಾವಳಿಗಳ ಪ್ರಕಾರ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಸರಳವಲ್ಲ ಎಂಬ ವಾದಗಳೂ ಕೇಳಿ ಬಂದಿವೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *