ರಾಜ್ಯದ ನಾಲ್ಕು ವಿವಿ ಗಳಲ್ಲಿ ಕುಲಪತಿಗಳೇ ಇಲ್ಲ

ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ನೇಮಕವಾಗಿಲ್ಲ. ಇದರಿಂದ ವಿವಿಗಳ ಶೈಕ್ಷಣಿಕ ಪ್ರಗತಿಗೆ ಧಕ್ಕೆಯಾಗುತ್ತಿದೆ. ಇನ್ನು ವರ್ಷದಿಂದ ಎದುರಾಗಿರುವ ಸಮಸ್ಯೆ ಬಗೆಹರಿಸಲು ಯುಜಿಸಿ ಮಧ್ಯ ಪ್ರವೇಶಿಸಿ ರಾಜ್ಯಪಾಲರು ನಿರ್ವಹಿಸೋ ಕುಲಾಧಿಪತಿಗಳ ಹುದ್ದೆಯನ್ನೇ ಕೈಬಿಡಬೇಕು ಅನ್ನಲಾಗ್ತಿದೆ.

ವಿಶ್ವವಿದ್ಯಾಲಯಕ್ಕೆ ಕುಲಪತಿ ಮೇಟಿ ಇದ್ದಂತೆ. ಆದರೆ, ರಾಜ್ಯದ ಮೈಸೂರು, ಬೆಂಗಳೂರು, ಜಾನಪದ ಹಾಗೂ ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳಿಲ್ಲದೆ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಿತ್ಯವೂ ಹೊಸತನಕ್ಕೆ ತೆರೆದುಕೊಳ್ಳುವ ಶೈಕ್ಷಣಿಕ ವಲಯ ನಿರ್ಲಕ್ಷಿಸಿದರೆ ಅಭಿವೃದ್ಧಿ ಸಂಶೋಧನೆಗೆ ಹಿನ್ನೆಡೆಯಾಗುತ್ತದೆ. ರಾಜ್ಯ ಸರ್ಕಾರ ಕಳಿಸುವ ಕುಲಪತಿ ಅಭ್ಯರ್ಥಿ ಹೆಸರನ್ನು ರಾಜ್ಯಪಾಲರು ಒಪ್ತಿಲ್ಲ. ಈ ಜಟಾಪಟಿಗೆ ಕಾರಣವಾಗುವ ರಾಜ್ಯಪಾಲರನ್ನ ಕುಲಾಧಿಪತಿ ಹುದ್ದೆಯಿಂದ ಕೈಬಿಡುವ ನಿಟ್ಟಿನಲ್ಲಿ ಯುಜಿಸಿ ಚಿಂತಿಸಬೇಕಿದೆ ಅಂತ ಶಿಕ್ಷಣ ತಜ್ಞರು ಹೇಳ್ತಿದ್ದಾರೆ.

ಕಳೆದ 10 ತಿಂಗಳಿನಿಂದ ಬೆಂಗಳೂರು ಹಾಗೂ ಮೈಸೂರು ವಿವಿಗೆ ಕುಲಪತಿಗಳನ್ನು ನೇಮಿಸಿಲ್ಲ. ಬೆಂಗಳೂರು ವಿವಿ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಕಳೆದ ಫೆಬ್ರವರಿಯಲ್ಲಿ ನಿವೃತ್ತರಾಗಿದ್ದಾರೆ. ಇದಲ್ಲದೆ ಜಾನಪದ ಹಾಗೂ ತುಮಕೂರು ವಿವಿಗೂ ಕುಲಪತಿ ನೇಮಕವಾಗಿಲ್ಲ. ಇನ್ನು ಇದೇ ಡಿಸೆಂಬರ್​ಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕಲಿವಾಳ ನಿವೃತ್ತರಾಗಲಿದ್ದಾರೆ. ಶೋಧನಾ ಸಮಿತಿ ರಚಿಸಲು ನಾಲ್ಕು ತಿಂಗಳು ತೆಗೆದುಕೊಳ್ಳಲಾಯ್ತು.

ಹಂಗಾಮಿ ಕುಲಪತಿ ದೈನಂದಿನ ಕೆಲಸ ಮಾತ್ರ ಮಾಡಬಹುದು. ಹೊಸ ಕೆಲಸ, ಪ್ರಾಜೆಕ್ಟ್​ ವರ್ಕ್​ ಹಾಗೂ ಪಾಲಿಸಿ ಕುರಿತು ಕ್ರಮ ಕೈಗೊಳ್ಳುವಂತಿಲ್ಲ. ಹಾಗಾಗಿ ವಿವಿಯಲ್ಲಿ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆ ಸಂಪೂರ್ಣ ಸ್ಥಗಿತಗೊಂಡಿದೆ. ಹಾಗಾಗಿ ಯುಜಿಸಿ ಮಧ್ಯ ಪ್ರವೇಶಿಸಬೇಕಿದೆ ಅಂತಾರೆ ಬೆಂವಿವಿ ನಿವೃತ್ತ ಕುಲಪತಿ ಪ್ರೊ. ತಿಮ್ಮಪ್ಪ.

2002ರವರೆಗೂ ಕುಲಪತಿ ನಿವೃತ್ತರಾಗು ಮುನ್ನವೇ ಮತ್ತೊಬ್ಬ ಕುಲಪತಿಯನ್ನು ನೇಮಿಸುವ ವ್ಯವಸ್ಥೆ ಇತ್ತು. 2002ರಲ್ಲಿ ಕಾಯ್ದೆ ಬದಲಾದ ಮೇಲೆ ವಿಳಂಬವಾಗುತ್ತಿದೆ. ಇದರರಿಂದ ವಿಶ್ವವಿದ್ಯಾಲಯಗಳು ಯಾವುದೇ ಗುರಿ ಇಲ್ಲದೆ ಸಮಯ ಹರಣ ಮಾಡ್ತಿವೆ. ವಿವಿ ಪ್ರಗತಿ ಹಲವು ವರ್ಷ ಹಿಂದಕ್ಕೆ ಸಾಗ್ತಿದೆ. ಸಿಂಡಿಕೇಟ್​ನಲ್ಲಿ ಸೂಕ್ತ ಚರ್ಚೆ ನಡೆಸಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕುಲಪತಿ ಇರಲೇಬೇಕು. ಮುಂದಿನ ಜನಾಂಗ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ವ್ಯವಸ್ಥೆ ಬದಲಾಗಬೇಕಿದೆ.

ವಿಶ್ವವಿದ್ಯಾಲಯವನ್ನ ದೂರದೃಷ್ಟಿಯಿಂದ ಕಟ್ಟಬೇಕು. ಅಲ್ಲಿ ನಿರಂತರ ಶೈಕ್ಷಣಿಕ ಅಭಿವೃದ್ಧಿ, ಸಂಶೋಧನೆಗಳು ನಡೆದಾಗ ಮಾತ್ರ ದೇಶದ ಅಭಿವೃದ್ಧಿಯ ಪಥವೂ ಸುಸ್ಥಿಯಲ್ಲಿರುತ್ತೆ. ಹಾಗಾಗಿ, ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಆದಷ್ಟು ಬೇಗ ಅರ್ಹರನ್ನ ನೇಮಿಸಬೇಕು ಅನ್ನೋದು ಶಿಕ್ಷಣ ತಜ್ಞರ ಅಭಿಪ್ರಾಯ.

ಶಶಿರೇಖಾ, ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *