ಪುದಿನ ಏನೆಲ್ಲಾ ಕಾಯಿಲೆ ವಾಸಿ ಮಾಡುತ್ತೆ ಗೊತ್ತಾ??

ದಟ್ಟನೆಯ ಹಸಿರಿನಲ್ಲೂ ಎದ್ದು ಕಾಣುವ ಸೊಪ್ಪು ಪುದೀನ. ಸುಲಭವಾಗಿ ದೊರೆಯಬಹುದಾದ ಈ ಸೊಪ್ಪನ್ನು ಮನೆಯಲ್ಲಿಯೂ ಸಹ ಬೆಳೆಯಬಹುದಾಗಿದೆ. ಇದರ ಪರಿಣಾಮವನ್ನರಿತು ಬಳಕೆ ಮಾಡುವುದು ಆರೋಗ್ಯ ವರ್ಧನೆಗೆ ಪೂರಕವಾಗುತ್ತದೆ. ಅಜೀರ್ಣದ ಸಮಸ್ಯೆ, ಗ್ಯಾಸ್ಟ್ರಿಕ್ ಮುಂತಾದ ಹೊಟ್ಟೆಯ ತೊಂದರೆಗಳಿಗೆ ಪುದೀನದ ಬಳಕೆಯು ಅತ್ಯಂತ ಪರಿಣಾಮಕಾರಿಯಗಿದೆ.

ಪುದೀನದಲ್ಲಿ ಹೆಚ್ಚು ಪ್ರಮಾಣದ ಕ್ಯಾಲೋರಿಗಳಿಲ್ಲದ ಕಾರಣ ಇದರ ಸೇವನೆಯು ಬೊಜ್ಜನ್ನುಂಟುಮಾಡುವುದಿಲ್ಲ. ಆದ್ದರಿಂದ ಇದನ್ನು ನಮ್ಮ ಅಡುಗೆಗಳಲ್ಲಿ ಉಪಯೋಗಿಸಿ ರುಚಿಕರವಾದ ಆಹಾರ ತಯಾರಿಸಿಕೊಳ್ಳಬಹುದು. ಅತೀ ಹೆಚ್ಚು ಪ್ರಮಾಣದ ಪೊಟ್ಯಾಷಿಯಂ ಅಂಶವನ್ನು ಹೊಂದಿರುವ ಪುದೀನವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅದರಲ್ಲೂ ಪುದೀನವು ಸ್ನಾಯುಗಳನ್ನು ಸಡಿಲಗೊಳಿಸುವ ವಿಶೇಷ ಗುಣವನ್ನು ಹೊಂದಿದೆ. ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಫೊಸ್ಪರಸ್, ಜೀವಸತ್ವ ಸಿ, ಜೀವಸತ್ವ ಎ ಹೊಂದಿರುವ ಪೊಷಕಾಂಶಗಳ ಆಗರವಾಗಿರುವ ಪುದೀನದ ಬಳಕೆಯು ಆರೋಗ್ಯಯುತವಾಗಿ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ.

ಸೌಂದರ್ಯವನ್ನು ಹೆಚ್ಚು ಮಾಡುವ ಗುಣಹೊಂದಿರುವ ಪುದೀನವು ಮಹಿಳೆಯರ ಸಂಗಾತಿಯಂತೆ ಕಾರ್ಯನಿರ್ವಹಿಸುತ್ತದೆ. ಮುಟ್ಟಿನ ಸಮಯದಲ್ಲಿ ತೊಂದರೆಯಾಗುವಂತದ್ದು, ನೋವಾಗುವಂತದ್ದು, ಗರ್ಭಿಣಿಯರಲ್ಲಿ ಹಾಗೂ ಬಾಣಂತಿಯರಲ್ಲಿ ಆಗುವಂತಹ ಹಲವಾರು ಸಮಸ್ಯೆಗಳಿಗೆ ಪುದೀನವು ರಾಮಬಾಣದಂತೆ ಕೆಲಸ ಮಾಡುತ್ತದೆ. ಉಸಿರಾಟದ ತೊಂದರೆಗಳಿಗೆ ಶಮನದಾಯಕವಾಗಿ ಕೆಲಸ ಮಾಡುವ ಗುಣಹೊಂದಿರುವ ಪುದಿನವು ಮಕ್ಕಳಲ್ಲಿ ಕೆಮ್ಮು, ಕಫ, ಶೀತ, ನೆಗಡಿ, ಅಲರ್ಜಿ,ಅಸ್ತಮ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

ನೀವು ಮಾಡಿ ನೋಡಿ:

ಕುದಿಯುತ್ತಿರುವ ಬಿಸಿನೀರಿಗೆ ಒಂದು ಹಿಡಿಯಷ್ಟು ಪುದೀನ ಸೊಪ್ಪು, ಅರ್ಧಚಮಚ ಜೀರಿಗೆ, ಕಾಲು ಚಮಚ ಒಣಶುಂಠಿ ಪೌಡರ್ ಹಾಕಿ ಕುದಿಸಬೇಕು. ಅದಕ್ಕೆ ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು. ನಂತರದಲ್ಲಿ ಕಷಾಯವನ್ನು ಇಳಿಸಿ, ಲೋಟಕ್ಕೆ ಹಾಕಿ ಅದಕ್ಕೆ ಸ್ವಲ್ಪ ಲಿಂಬು ರಸವನ್ನು ಹಾಕಿ ಕುಡಿಯಬೆಕು. ಇದರಿಂದಾಗಿ ಅಜೀರ್ಣ ಸಮಸ್ಯೆ ಹಾಗೂ ಹೊಟ್ಟೆಯ ಇತರ ಸಮಸ್ಯೆಗಳೂ ಸಹ ಉಪಶಮನವಾಗುತ್ತದೆ. ಸೌಂದರ್ಯಾಸಕ್ತರು ಪ್ರತಿದಿನ ಎರಡು ಬಾರಿ ಇದನ್ನು ಆಹಾರದ ನಂತರದಲ್ಲಿ ಕುಡಿಯುತ್ತ ಬಂದಲ್ಲಿ ಸೌಂದರ್ಯವು ಸಹ ವೃದ್ದಿಯಾಗುತ್ತದೆ.

ತೊಳೆದ ಪುದೀನ ಎಲೆಗಳನ್ನು ಪೇಸ್ಟ ಮಾಡಿಕೊಂಡು ಅದಕ್ಕೆ ಒಂದು ಚಿಟಿಕೆ ಕಸ್ತೂರಿ ಅರಿಶಿಣವನ್ನು ಬೆರೆಸಿ ಸರಿಯಾಗಿ ಮಿಶ್ರಣಮಾಡಿಕೊಳ್ಳಬೇಕು. ಇದನ್ನು ಹಾರ್ವೆನ್​ಗಳ ವ್ಯತ್ಯಾಸದಿಂದ ಉಂಟಾದ ಮೊಡವೆಗಳ ಮೇಲೆ ಲೇಪಿಸಿಕೊಂಡರೆ ಮೊಡವೆಗಳು ಕಡಿಮೆಯಾಗುವುದಲ್ಲದೇ ಕಲೆಗಳೂ ಸಹ ಮಾಯವಾಗುತ್ತದೆ.

ಬಿಸಿಯಾಗುತ್ತಿರುವ ಎಣ್ಣೆಗೆ ಪೇಸ್ಟ ಮಾಡಿದ ಪುದೀನವನ್ನು ಹಾಗೂ ಪಚ್ಚಕರ್ಪೂರವನ್ನು ಹಾಕಬೇಕು. ಕರ್ಪೂರವು ಕರಗಿದ ನಂತರದಲ್ಲಿ ಅದಕ್ಕೆ ಸ್ವಲ್ಪ ಅರಿಶಿಣವನ್ನು ಹಾಕಿ ಮಿಶ್ರಣಮಾಡಬೇಕು. ಹೀಗೆ ತಯಾರಾದ ಎಣ್ಣೆಯನ್ನು ಮಕ್ಕಳಲ್ಲಿ ಶೀತ, ನೆಗಡಿ, ಕೆಮ್ಮು ಉಂಟಾದ ಸಂದರ್ಭದಲ್ಲಿ ಎದೆಯ ಭಾಗಕ್ಕೆ, ಬೆನ್ನಿನ ಭಾಗಕ್ಕೆ, ಹಣೆಯಮೇಲೆ ಹಚ್ಚಿಕೊಂಡಾಗ ತಕ್ಷಣ ಉಪಶಮನವಾಗುತ್ತದೆ. ಮಲಗುವ ಮೊದಲು ಇದರ ಬಳಕೆಯು ಪರಿಣಾಮಕಾರಿಯಾಗಿರುತ್ತದೆ.

ಪುದೀನ ಎಲೆಗಳನ್ನು ಹಾಗೂ ಕೆಂಪು ಕಲ್ಲುಸಕ್ಕರೆಯನ್ನು ಮಿಕ್ಸಿಗೆ ಹಾಕಿ ಅದಕ್ಕೆ ಸಿಪ್ಪೆ ಸಹಿತ ನಿಂಬೆಹಣ್ಣನ್ನೂ ಸಹ ಸೇರಿಸಿ ರುಬ್ಬಿಕೊಳ್ಳಬೇಕು. ಹೀಗೆ ತಯಾರಾದ ದ್ರವ್ಯವನ್ನು ಮಾಡಿದ ಕೂಡಲೇ ಕುಡಿಯಬೇಕು. ಇದನ್ನು ಉಪಯೋಗಿ ಶರಬತ್ತು ಎಂದೇ ಕರೆಯಬಹುದು. ಇದು ತಕ್ಷಣ ಆಯಾಸವನ್ನು ನೀಗಿಸಿ, ನವಚೈತನ್ಯವನ್ನು ಕೊಡುವುದಲ್ಲದೇ ಅನೇಕ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಮಾನಸಿಕ ಒತ್ತಡವನ್ನೂ ಸಹ ಕಡಿಮೆಮಾಡುತ್ತದೆ. ಹೀಗೆ ಪುದೀನದ ಬಳಕೆಯು ನಮ್ಮ ಜೀವನದ ಆಹಾರ ಪದ್ಧತಿಯಲ್ಲಿ ಪ್ರಮುಖ ಪಾತ್ರ ವಹಿಸಿದಲ್ಲಿ ಆರೋಗ್ಯ ರಕ್ಷಣೆ ಸಾಧ್ಯವಾಗಿ ಅನೇಕ ತೊಂದರೆಗಳಿಗೆ, ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

0

Leave a Reply

Your email address will not be published. Required fields are marked *