ವಿದ್ಯಾರ್ಥಿನಿಯರ ಹಾಸ್ಟೆಲ್​​​ನಲ್ಲಿ ಅಪರಿಚಿತ ವ್ಯಕ್ತಿ

ಹಾಸನ: ನಗರದ ಪ್ರತಿಷ್ಠಿತ ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮತ್ತೊಮ್ಮೆ ಅಪರಿಚಿತ ವ್ಯಕ್ತಿ ಬಂದು ಹೋಗಿರುವ ಘಟನೆ ನಡೆದಿದೆ. ಇದರಿಂದ ಸಹಜವಾಗಿಯೇ ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ. ಇದೇ ವರ್ಷ ಅಂದರೆ 2017 ಮಾರ್ಚ್ 30 ರ ರಾತ್ರಿ ಅನಾಮಿಕನೊಬ್ಬ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಾತ್ರಿ ವೇಳೆ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಬಂದು ಹೋಗಿದ್ದು, ಇದು ದೊಡ್ಡ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ ಹಾಸ್ಟೆಲ್​​ನ ಒಳಹೊರಗೆ ಸಿಸಿ ಕ್ಯಾಮೆರಾ ಜೊತೆಗೆ ಕಾವಲಿಗೆ ಸೆಕ್ಯುರಿಟಿ ಗಾರ್ಡ್ ಇದ್ದರೂ ಅನಾಮಿಕರು ಒಳಗೆ ಬರುವುದು ಹೇಗೆ ಸಾಧ್ಯ ಎಂಬುದು ಸಾಕಷ್ಟು ಅನುಮಾನಕ್ಕೂ ಎಡೆ ಮಾಡಿಕೊಟ್ಟಿತ್ತು.

ಈ ಬಗ್ಗೆ ಬಡಾವಣೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆ ಘಟನೆ ಮಾಸುವ ಮುನ್ನವೇ ಕಳೆದ ಡಿಸೆಂಬರ್ 2 ರಂದು ಮತ್ತೊಬ್ಬ ಅಪರಿಚಿತ ಅದೇ ಹಾಸ್ಟೆಲ್ ಗೆ ಹಳೆಯ ಮಾದರಿಯಲ್ಲೇ ಬಂದು ಹೋಗಿದ್ದಾನೆ. ಇದಕ್ಕೆ ಯಾವ ಲೋಪ ಕಾರಣ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆತ ಕಾಮುಕನೋ? ಕಳ್ಳನೋ? ಗೊತ್ತಿಲ್ಲ. ಆದರೆ ಸಣ್ಣ ಪೈಪ್ ಸಹಾಯದಿಂದ ಕಟ್ಟಡ ಏರಿರುವುದು ಪಾದದ ಗುರುತುನಿಂದ ಖಾತರಿಯಾಗಿದೆ. ಇಷ್ಟೆಲ್ಲಾ ಆದ ಬಳಿಕ ಪೈಪ್ ಗೆ ತಂತಿ ಸುತ್ತಿರುವ ಆಡಳಿತ ಮಂಡಳಿ, ಮುಂದೆ ಹಾಸ್ಟೆಲ್ ನಲ್ಲಿ ಭದ್ರತೆ ಹೆಚ್ಚಿಸಲು ಮುಂದಾಗಿದೆ. ಅಲ್ಲದೇ ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಮತ್ತೊಮ್ಮೆ ಬಡಾವಣೆ ಪೊಲೀಸರಿಗೆ ದೂರು ನೀಡಲಾಗಿದೆ.

0

Leave a Reply

Your email address will not be published. Required fields are marked *