ಅಣ್ವಸ್ತ್ರ ದಾಳಿ ನಡೆಸಿದರೆ ಅಮೆರಿಕ ಬೂದಿಯಾಗಲಿದೆ: ಉತ್ತರ ಕೊರಿಯಾ

ಫ್ಯೋಂಗ್​​ಯಾಂಗ್​: ಅಮೆರಿಕ ಅಣು ಸಮರ ನಡೆಸುವ ಸೂಚನೆಯನ್ನು ನೀಡುತ್ತಿದೆ ಎಂದು ಉತ್ತರ ಕೊರಿಯ ಅಭಿಪ್ರಾಯಪಟ್ಟಿದೆ. ಕಳೆದ ವಾರ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ) ಪ್ರತಿಬಂಧಕವನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ಅಮೆರಿಕ ಹೇಳಿಕೊಂಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಕೊರಿಯಾ, ಅಮೆರಿಕ ಗಂಭೀರವಾದ ಸೇನಾ ಪ್ರಚೋದನಾಕಾರಿ ನಡೆ ಇಡುತ್ತಿದೆ. ಇದು ಸಾಮ್ರಾಜ್ಯಶಾಹಿಗಳಿಂದ ಎದುರಾಗಿರುವ ಗಂಭೀರ ಸೂಚನೆ. ಅಣು ಸಮರಕ್ಕೆ ಈ ಮೂಲಕ ಪ್ರಚೋದನೆ ನೀಡಲಾಗುತ್ತಿದೆ. ಅಲ್ಲದೇ, ಅಣು ಸಮರವನ್ನು ತಡೆಯಲು ಅಮೆರಿಕ ಸಿದ್ಧವಿಲ್ಲ ಎಂಬುದಕ್ಕೆ ಅಮೆರಿಕದ ಈ ನಡೆ ಸಾಕ್ಷಿ ಎಂದು ಉತ್ತರಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಕೊರಿಯಾದ ಸೇನಾ ಕಾರ್ಯಾಚರಣೆ ವಕ್ತಾರರ ಹೇಳಿಕೆಯನ್ನು ಕೂಡ ಮಾಧ್ಯಮಗಳು ಉಲ್ಲೇಖಿಸಿವೆ. ಆತ್ಮ ರಕ್ಷಣೆಗಾಗಿ ತಾವು ಕೂಡ ಅಣ್ವಸ್ತ್ರ ಪ್ರಯೋಗಿಸಲು ಹಿಂಜರಿಯುವುದಿಲ್ಲ ಎಂದು ಕೂಡ ಸೇನಾ ವಕ್ತಾರ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಅಮೆರಿಕ ಖಂಡಾಂತರ ಕ್ಷಿಪಣಿ ಪ್ರತಿಬಂಧಕವನ್ನು ಪರೀಕ್ಷಿಸಿ ಯಶಸ್ವಿಯಾಗಿರುವ ಭ್ರಮೆಯಲ್ಲಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಣ್ವಸ್ತ್ರ ಬಳಕೆಗೆ ಮುಂದಾದಲ್ಲಿ ಅಂತಿಮವಾಗಿ ಆ ದೇಶ ಬೂದಿಯಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಮೆರಿಕದ ಪೆಂಟಗನ್ ಕಳೆದ ಮಂಗಳವಾರ ಉತ್ತರ ಕೊರಿಯಾದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರತಿಬಂಧಕ ಪರೀಕ್ಷೆಯಲ್ಲಿ ಯಶಸ್ವಿ ಆಗಿರುವುದಾಗಿ ಹೇಳಿಕೊಂಡಿತ್ತು. 1999-2014ರ ವರೆಗೆ ಅಮೆರಿಕ 17 ಬಾರಿ ಪ್ರತಿಬಂಧಕಗಳ ಪರೀಕ್ಷೆ ನಡೆಸಿದೆ. ಕಳೆದ ಮೂರು ವರ್ಷಗಳ ಪೈಕಿ ಇದೇ ಮೊದಲ ಬಾರಿ ಈ ಪರೀಕ್ಷೆ ನಡೆಸಿದೆ ಎಂದು ವರದಿಯಾಗಿದೆ.

ಈ ಮೂಲಕ ಅಮೆರಿಕ – ಉತ್ತರ ಕೊರಿಯಾ ದೇಶಗಳ ನಡುವಣ ಬಿಕ್ಕಟ್ಟು ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಉಭಯ ದೇಶಗಳು ಪರಸ್ಪರ ದೋಷಾರೋಪ ಹೊರಿಸುತ್ತಿದ್ದು, ಡೊನಾಲ್ಡ್ ಟ್ರಂಪ್ ಅಮರಿಕ ಅಧ್ಯಕ್ಷರಾದ ನಂತರ ಇವುಗಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಲ್ಲದೇ, ದಕ್ಷಿಣ ಕೊರಿಯಾದ ಕರಾವಳಿ ಪ್ರದೇಶದಲ್ಲಿ ಅಮೆರಿಕ ಸೇನೆ ಬೀಡುಬಿಟ್ಟಿರುವುದು ಈ ಅನುಮಾನಗಳಿಗೆ ಮತ್ತಷ್ಟು ನೀರೆರೆದಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *