ವ್ಯಾಪಂ ಹಗರಣ: ಎರಡು ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಬಿಐ

ನವದೆಹಲಿ: ಸರಣಿ ಕೊಲೆಗಳಿಂದ ದೇಶದ ಗಮನ ಸೆಳೆದಿದ್ದ ದೇಶದ ಅತಿದೊಡ್ಡ ಮತ್ತು ಅತ್ಯಂತ ವಿವಾದಾಸ್ಪದ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎರಡು ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇಬ್ಬರು ಅಭ್ಯರ್ಥಿಗಳು ಮಧ್ಯವರ್ತಿಗಳು ಮತ್ತು ಪ್ರಕರಣದಲ್ಲಿ ಶಾಮೀಲಾದ ವ್ಯಕ್ತಿಯೊಬ್ಬನ ವಿರುದ್ಧ ಪ್ರತ್ಯೇಕ ದೋಷಾರೋಪ ಪಟ್ಟಿಗಳನ್ನು ಗ್ವಾಲಿಯರ್​​ ಕೋರ್ಟ್​​ ಮತ್ತು ಭೋಪಾಲ್​ನ ಮ್ಯಾಜಿಸ್ಟ್ರೇಟ್​​  ಕೋರ್ಟ್​ಗೆ ಸಿಬಿಐ ಸಲ್ಲಿಸಿದೆ.

ಉದ್ಯೋಗ ಗಿಟ್ಟಿಸುವ ಸಲುವಾಗಿ ಕಾಪಿ ಮಾಡಲು ಮತ್ತು ನಕಲು ಮಾಡಲು ಅವಕಾಶ ಮಾಡಿಕೊಟ್ಟಿದ್ದ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ ಮತ್ತು ಮಧ್ಯಪ್ರದೇಶ ಅಂಗೀಕೃತ ಪರೀಕ್ಷಾ ಕಾಯ್ದೆ 1937 ಅಡಿಯಲ್ಲಿ ದೂರು ದಾಖಲಾಗಿತ್ತು.

ಅಭ್ಯರ್ಥಿ ವಿರುದ್ಧ ಆದಾಯ ಕಾಯ್ದೆಯ 66-ಡಿ ಅಡಿಯಲ್ಲಿ ಗ್ವಾಲಿಯರ್​​ನ ಮೊರಾರ್ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 24, 2013ರಂದು ದೂರು ದಾಖಲಾಗಿತ್ತು. ಈ ದೂರಿನ ಪ್ರಕಾರ ಅಭ್ಯರ್ಥಿ 2012ರಲ್ಲಿ ಸಬ್ ಇನ್ಸ್ಪೆಕ್ಟರ್ / ಸುಬೇದಾರ್ ಹುದ್ದೆಗಳಿಗೆ ನಡೆದ ಪರೀಕ್ಷೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವುದಾಗಿ ದೂರಲಾಗಿತ್ತು. ಅಲ್ಲದೇ, ಅಭ್ಯರ್ಥಿಗೆ ಎರಡು ನೋಂದಣಿ ಸಂಖ್ಯೆಯನ್ನು ನೀಡಲಾಗಿತ್ತು.

ಸೆಪ್ಟಂಬರ್ 16, 2012ರಂದು ನಡೆದ ಪರೀಕ್ಷೆಗೆ ಒಂದು ನೋಂದಣಿ ಸಂಖ್ಯೆಯಲ್ಲಿ ಖುದ್ದಾಗಿ ಹಾಜರಾಗಿದ್ದ ಅಭ್ಯರ್ಥಿ, ಮತ್ತೊಂದು ನೋಂದಣಿ ಸಂಖ್ಯೆಗೆ ತನ್ನ ಸೋದರ ಸಂಬಂಧಿಯಿಂದ ಪರೀಕ್ಷೆಗೆ ಹಾಜರಾಗಲು ಅನುಕೂಲ ಮಾಡಿಕೊಡಲಾಗಿತ್ತು. ಸಿಬಿಐ ತನಿಖೆಯ ವೇಳೆ ಅಭ್ಯರ್ಥಿ ಒಟ್ಟು 8 ಅರ್ಜಿಗಳನ್ನು ಸಲ್ಲಿಸಿರುವ ಮಾಹಿತಿ ಬಹಿರಂಗವಾಗಿತ್ತು. ಈ ಪ್ರಕರಣವನ್ನು ಭೇದಿಸಲು ಕೈಬರಹ ತಜ್ಞರು, ಸಹಿ ಮತ್ತು ಬೆರಳಚ್ಚು ತಜ್ಞರ ನೆರವನ್ನೂ ಪಡೆಯಲಾಗಿತ್ತು. ವಿವರವಾದ ತನಿಖೆಯ ನಂತರ ಇಂದು ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಜುಲೈ 21, 2017ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಇನ್ನೊಂದು ಪ್ರಕರಣದ ಕುರಿತು ಭೋಪಾಲ್​​ನ ವಿಶೇಷ ಮ್ಯಾಜಿಸ್ಟ್ರೇಟ್​ ಕೋರ್ಟ್​​ನಲ್ಲಿ ದೋಷಾರೋಪ ಪಟ್ಟಿಯನ್ನು ಸಿಬಿಐ ಸಲ್ಲಿಸಿದೆ. ಮಧ್ಯವರ್ತಿಗಳು ಮತ್ತು ನಕಲಿ ಮಾಡಿದ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 120-ಬಿ, 419, 420, 467, 471 ಮತ್ತು ಮಧ್ಯಪ್ರದೇಶ ಅಂಗೀಕೃತ ಶಿಕ್ಷಣ ಕಾಯ್ದೆ 1937ರ ಅಡಿಯಲ್ಲಿ ದೂರು ದಾಖಲಾಗಿತ್ತು.

ಸುಪ್ರೀಂ ಕೋರ್ಟ್​​ ನಿರ್ದೇಶನದ ಮೇರೆಗೆ ಜುಲೈ 9, 2015ರಂದು ಈ ಕುರಿತು ಸಿಬಿಯ ತನಿಖೆ ಆರಂಭಿಸಿತ್ತು. ಪೊಲೀಸರ ನೇಮಕಾತಿ 2012ರಲ್ಲಿ ಅಕ್ರಮ ನಡೆದಿರುವುದಾಗಿ ಕೋರ್ಟ್ ಮೆಟ್ಟಿಲೇರಿದ್ದರಿಂದ ಭಾರೀ ಹಗರಣ ಬೆಳಕಿಗೆ ಬಂದಿತ್ತು. ಈ ವಿಷಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ನಿರಂತರ ಕೊಲೆಯಾಗಿದ್ದರು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ತೀವ್ರ ಕುತೂಹಲವನ್ನು ಈ ಪ್ರಕರಣ ಕೆರಳಿಸಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *