ಸೀತಾಪುರದಲ್ಲಿ ಉದ್ಯಮಿ ಕುಟುಂಬದ ತ್ರಿವಳಿ ಕೊಲೆ

ಸೀತಾಪುರ: ಉತ್ತರಪ್ರದೇಶದ ಸೀತಾಪುರದಲ್ಲಿ ಉದ್ಯಮಿ ಕುಟುಂಬಕ್ಕೆ ಸೇರಿದ ಮೂವರನ್ನು ಶೂಟ್ ಮಾಡಿ ಹತ್ಯೆಗೈಯಲಾಗಿದೆ. 60 ವರ್ಷದ ಸುನಿಲ್ ಜೈಸ್ವಾಲ್, ಮಡದಿ ಕಾಮಿನಿ ಮತ್ತು ಪುತ್ರ ಹೃತಿಕ್​​ರನ್ನು ಹತ್ಯೆಗೈಯಲಾಗಿದೆ. ಈ ದೃಶ್ಯ ಉದ್ಯಮಿ ಮನೆಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ದರೋಡೆಕೋರರು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಗುಂಡಿನ ದಾಳಿ ವೇಳೆ ಮಧ್ಯಪ್ರವೇಶಿಸಿದ ನೆರೆಯ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಅದೃಷ್ಟವಶಾತ್ ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾತ್ರಿ 9:30ರ ವೇಳೆಗೆ ಜೈಸ್ವಾಲ್ ಮನೆಗೆ ಆಗಮಿಸಿದ್ದಾರೆ. ಈ ವೇಳೆ ಎರಡು ಬೈಕ್​ಗಳಲ್ಲಿ ಆಗಮಿಸಿದ ಅಪರಿಚಿತರು ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಘರ್ಷಣೆಯಲ್ಲಿ ಆಗಂತುಕರು ಜೈಸ್ವಾಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಮ್ಮ ಪತಿಯ ರಕ್ಷಣೆಗೆ ಆಗಮಿಸಿದ ಪತ್ನಿ ಮತ್ತು ಪುತ್ರನ ಮೇಲೆ ಕೂಡ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಮೂವರೂ ಸಾವನ್ನಪ್ಪಿದ್ದಾರೆ.

ಇದುವರೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಅಭಯ್ ಕುಮಾರ್ ಪ್ರಸಾದ್ ಹೇಳಿದ್ದಾರೆ. ಇಂಥದ್ದೇ ಮಾದರಿಯ ದರೋಡೆ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ವರದಿಯಾಗಿದ್ದವು ಎಂದು ಕೂಡ ಅವರು ತಿಳಿಸಿದ್ದಾರೆ.

ಕಳೆದ ವಾರ ನಡೆದ ಇದೇ ಮಾದರಿಯ ಘಟನೆಯನ್ನು ಖಂಡಿಸಿ, ವರ್ತಕರ ಸಂಘಗಳು ಅಹೋರಾತ್ರಿ ಧರಣಿ ನಡೆಸಿದ್ದವು. ಅಲಹಾಬಾದ್​​ನಲ್ಲಿ 36 ವರ್ಷದ ಉದ್ಯಮಿಯೊಬ್ಬರನ್ನು ಕೊಲ್ಲಲಾಗಿತ್ತು. ಇನ್ನು ಕಳೆದ ತಿಂಗಳು ಉತ್ತರಪ್ರದೇದ ಜೆವಾರ್​​ನಲ್ಲಿ ಬಂದೂಕಿನ ನಳಿಕೆಯಡಿ 4 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಉತ್ತರಪ್ರದೇಶ ಸಿಎಂ ಆದಿತ್ಯನಾಥ್, ಇಂಥ ಘಟನೆ ನಡೆದಿರುವುದು ದುರದೃಷ್ಟಕರ ಎಂದಿದ್ದರು. ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ರಾಜ್ಯ ಸಮಾಜವಾದಿ ಪಕ್ಷದ ಆಡಳಿತದ ಅವಧಿಯಲ್ಲಿ ಜಂಗಲ್​ ರಾಜ್​​ ಆಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿಗೆ ತರುವಂತೆ ಆದೇಶಿಸಲಾಗಿದೆ ಎಂದಿದ್ದರು. ಅಲ್ಲದೇ, ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿಗೆ ತರುವುದೇ ಸರ್ಕಾರದ ಮೊದಲ ಆದ್ಯತೆ ಎಂದಿದ್ದರು. ಆದರೆ, ಅವರು ಕಳೆದ ಮಾರ್ಚ್​​ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇಂಥ ಘಟನೆಗಳ ಸರಮಾಲೆಗಳೇ ಎದುರಾಗುತ್ತಿವೆ.

ನಿನ್ನೆ ರಾತ್ರಿ ನಡೆದ ಉದ್ಯಮಿ ಹತ್ಯೆ ವಿಷಯದ ಕುರಿತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತಮ್ಮ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದರು ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ಆರೋಪಿಗಳನ್ನು 24 ಗಂಟೆಗಳ ಒಳಗೆ ಬಂಧಿಸದಿದ್ದಲ್ಲಿ ಸೀತಾಪುರ ಬಂದ್​ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನಿಡಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *