ಹೊಟ್ಟೆನೋವಿಗಿದೆ ಮನೆಯಲ್ಲೇ ಮದ್ದು

ಹೊಟ್ಟೆನೋವಿಗೆ ಹೊಟ್ಟೆಯ ಯಾವುದೇ ಅಂಗ ಕಾರಣವಾಗಬಹುದು. ಒಳ್ಳೆಯ ಸುದ್ದಿ ಎಂದರೆ ಕಾರಣವೇನೇ ಇದ್ದರೂ ಹೊಟ್ಟೆನೋವನ್ನು ಶೀಘ್ರವಾಗಿ ಕಡಿಮೆಗೊಳಿಸಲು ಸಮರ್ಥವಾದ ಮನೆಮದ್ದುಗಳಿವೆ. ಇಂತಹ ಕೆಲವು ಮದ್ದುಗಳ ಬಗ್ಗೆ ವಿವರಗಳು ಇಲ್ಲಿವೆ.

ಕೆಲವೊಮ್ಮೆ ಹೊಟ್ಟೆನೋವಿನೊಂದಿಗೆ ಜ್ವರ, ವಾಂತಿ, ಹೊಟ್ಟೆಯ ಭಾಗ ಕೆಂಪಗಾಗುವುದು, ಊದಿಕೊಳ್ಳುವುದು, ತುರಿಕೆಯುಂಟಾಗುವುದು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಹೊಟ್ಟೆಯ ಯಾವುದಾದರೂ ಅಂಗ ಸೋಂಕಿಗೊಳಗಾಗಿರುವುದನ್ನು ಸೂಚಿಸುತ್ತದೆ.

ಶುಂಠಿ

ಇದು ಉರಿಯೂತ ನಿವಾರಕ ಗುಣ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಹೊಂದಿದ್ದು ಹೊಟ್ಟೆನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಹೊಟ್ಟೆ ನೋವಿದ್ದಾಗ ಹಸಿಶುಂಠಿಯನ್ನು ಕುದಿಸಿ ಮಾಡಿದ ಟೀ ಯನ್ನು ಸೇವಿಸುವುದರಿಂದ ಶೀಘ್ರ ಉಪಶಮನ ದೊರಕುತ್ತದೆ. ವಿಶೇಷವಾಗಿ ಹೊಟ್ಟೆನೋವಿನೊಂದಿಗೆ ವಾಂತಿ ಹಾಗೂ ವಾಕರಿಕೆ ಇದ್ದರೆ ಈ ವಿಧಾನ ಸೂಕ್ತವಾಗಿದೆ. ಇದು ಕೊಂಚ ಖಾರವಾಗಿರುವುದರಿಂದ ಇದನ್ನು ಸೇವಿಸಲು ಸುಲಭವಾಗಿಸಲು ಕೊಂಚ ಜೇನನ್ನು ಸಹಾ ಸೇರಿಸಬಹುದು. ಶುಂಠಿ ಚಹಾ ಸ್ವಾದದ ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತದೆ.

ಉಗುರುಬೆಚ್ಚನೆಯ ಉಪ್ಪುನೀರು

ಒಂದು ವೇಳೆ ಹೊಟ್ಟೆಯಲ್ಲಿ ಏನಾದರೂ ಶಬ್ದ ಬರುತ್ತಿದ್ದರೆ ಒಂದು ಅಥವಾ ಎರಡು ಚಿಕ್ಕ ಚಮಚದಷ್ಟು ಕಲ್ಲುಪ್ಪನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕರಗಿಸಿ ಗಟಗಟನೇ ಕುಡಿದುಬಿಡಿ. ಹೊಟ್ಟೆಯಲ್ಲಿ ಬರುವ ಶಬ್ದ ತಕ್ಷಣವೇ ಪರಿಹಾರವಾಗುತ್ತದೆ.

ಪುದಿನ ಎಲೆಗಳ ರಸ

ಒಂದು ವೇಳೆ ಅಜೀರ್ಣತೆಯ ಕಾರಣ ವಾಕರಿಕೆ ಹಾಗೂ ವಾಂತಿ ಎದುರಾದರೆ ಈ ವಿಧಾನ ಸೂಕ್ತವಾಗಿದೆ. ಅಲ್ಲದೇ ಹೊಟ್ಟೆ ಕಿವುಚಿದಂತೆ ನೋವಾಗುತ್ತಿದ್ದರೂ ಈ ವಿಧಾನ ಉತ್ತಮ. ಹೊಟ್ಟೆ ನೋವು ಕಂಡುಬಂದ ತಕ್ಷಣ ಕೆಲವು ಹಸಿ ಪುದೀನಾ ಎಲೆಗಳನ್ನು ಚೆನ್ನಾಗಿ ಜಗಿದು ನುಂಗುವುದು ಅತ್ಯುತ್ತಮ. ಇದು ಸಾಧ್ಯವಾಗದೇ ಹೋದರೆ ಕೆಲವು ಎಲೆಗಳನ್ನು ಮಿಕ್ಸಿಯಲ್ಲಿ ಅರೆದು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಬಹುದು. ಕೆಲವೊಮ್ಮೆ ಊಟದ ತಕ್ಷಣ ಹೊಟ್ಟೆನೋವು ಕಂಡುಬರುತ್ತದೆ. ಆಗಲೂ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

ನಿಂಬೆರಸ

ವಾಂತಿ ವಾಕರಿಕೆ ಸಹಿತ ಹೊಟ್ಟೆನೋವಿದ್ದರೆ ಈ ವಿಧಾನವೂ ಉತ್ತಮವಾಗಿದೆ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಮೂರು ಚಿಕ್ಕ ಚಮಚ ಲಿಂಬೆರಸ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಹೊಟ್ಟೆನೋವು, ವಾಕರಿಕೆ, ವಾಂತಿ ಇಲ್ಲವಾಗುತ್ತದೆ.

ಏಲಕ್ಕಿ

ಒಂದು ವೇಳೆ ಅಜೀರ್ಣದ ಕಾರಣ ಹೊಟ್ಟೆನೋವು ಕಾಣಿಸಿಕೊಂಡು ಇದರೊಂದಿಗೆ ವಾಕರಿಕೆ, ವಾಂತಿಯೂ ಆವರಿಸಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಒಂದು ಲೋಟ ನೀರಿನಲ್ಲಿ ಕೆಲವು ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಕುದಿಸಿ ಇದರೊಂದಿಗೆ ಕೊಂಚ ಜೀರಿಗೆಯನ್ನೂ ಸೇರಿಸಿ ನೀರು ಅರ್ಧದಷ್ಟಾದ ಬಳಿಕ ಅದನ್ನು ತಣಿಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

ಲೋಳೆಸರ ಜ್ಯೂಸ್

ಈ ರಸ ಹಲವು ತೊಂದರೆಗಳಿಗೆ ಸಿದ್ಧೌಷಧವಾಗಿದ್ದು ಹಲವು ಸೋಂಕು ಉಂಟುಮಾಡುವ ಕ್ರಿಮಿಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಅಲ್ಲದೇ ಆಂತರಿಕ ಸ್ರಾವ ನಿಲ್ಲಿಸಲು, ಹೊಟ್ಟೆಯೊಳಗಿನ ಉರಿಯನ್ನು ಶಮನಗೊಳಿಸಲು, ಜೀರ್ಣಶಕ್ತಿಯನ್ನು ಹೆಚ್ಚಿಸಲು, ಮಲಬದ್ಧತೆಯ ತೊಂದರೆ ನಿವಾರಿಸಲು ಹಾಗೂ ಹೊಟ್ಟೆನೋವು ಮತ್ತು ಹೊಟ್ಟೆಯೊಳಗೆ ಉಂಟಾಗಿರುವ ಸೆಡೆತವನ್ನು ನಿವಾರಿಸಲು ಸಮರ್ಥವಾಗಿದೆ. ಹೊಟ್ಟೆ ನೋವಿದ್ದರೆ ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ತಣ್ಣೀರಿಗೆ ಕೊಂಚ ಲೋಳೆಸರದ ರಸವನ್ನು ಮಿಶ್ರಣ ಮಾಡಿ ಪ್ರತಿದಿನ ಕುಡಿಯಿರಿ.

ದೊಡ್ಡ ಜೀರಿಗೆ

ಜೀರ್ಣಶಕ್ತಿ ಹೆಚ್ಚಲೆಂದೇ ಹೋಟೆಲ್​​ ಗಳಲ್ಲಿ ಊಟದ ಬಳಿಕ ದೊಡ್ಡಜೀರಿಗೆಯನ್ನು ತಿನ್ನಲು ನೀಡುತ್ತಾರೆ. ಇದರ ರಸದ ಸೇವನೆಯಿಂದ ಹೊಟ್ಟೆನೋವು, ಅಜೀರ್ಣತೆ, ವಾಯುಪ್ರಕೋಪ ಮತ್ತು ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳು ನಿವಾರಣೆಯಾಗುತ್ತವೆ. ಇದಕ್ಕಾಗಿ ಒಂದು ಲೋಟ ನೀರನ್ನು ಕುದಿಸಿ ಇದರಲ್ಲಿ ಒಂದು ಚಿಕ್ಕಚಮಚ ದೊಡ್ಡಜೀರಿಗೆಯನ್ನು ಹಾಕಿ ಮೂರು ನಾಲ್ಕು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ತಣಿಸಿ ಕೊಂಚ ಲಿಂಬೆರಸವನ್ನು ಮಿಶ್ರಣ ಮಾಡಿ. ಊಟಕ್ಕೂ ಮುನ್ನ ಈ ನೀರನ್ನು ಕುಡಿಯುವ ಮೂಲಕ ಹೊಟ್ಟೆನೋವಾಗುವುದನ್ನು ತಪ್ಪಿಸಬಹುದು.

0

Leave a Reply

Your email address will not be published. Required fields are marked *