ಅವಧಿಗೂ ಮುನ್ನ ಕೇರಳ ಪ್ರವೇಶಿಸಿದ ಮಳೆ ಮಾರುತಗಳು

ತಿರುವನಂತಪುರ: ಸಕಾಲಕ್ಕೆ ಮುಂಗಾರು ಮಾರುತಗಳು ಕೇರಳ ಮತ್ತು ಈಶಾನ್ಯ ಭಾರತವನ್ನು ಪ್ರವೇಶಿಸಿವೆ. ಈ ಮೂಲಕ ದೇಶದ ರೈತರಿಗೆ ತೀವ್ರ ಬರಗಾಲದ ಬವಣೆಯಿಂದ ಬಿಡುಗಡೆಯ ಆಶಾಕಿರಣ ಮೂಡಿದಂತಾಗಿದೆ.

ಈಶಾನ್ಯ ಮಳೆ ಮಾರುತಗಳು ಈ ಬಾರಿ ಕೇರಳ ಕರಾವಳಿ ಮತ್ತು ಈಶಾನ್ಯ ಭಾರತವನ್ನು ಅವಧಿಗೂ ಮುನ್ನ ಪ್ರವೇಶಿಸಿವೆ. ಜೂನ್ 1ರಂದು ಮುಂಗಾರು ಮಳೆ ಮಾರುತಗಳು ಕೇರಳ ಕರಾವಳಿಯನ್ನು ಪ್ರವೇಶಿಸುವುದು ಸಂಪ್ರದಾಯ. ಆದರೆ ಈ ಬಾರಿ ಮೇ 30ರಂದೇ ಕಾಲಿಟ್ಟಿವೆ. ಈ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ವರ್ಷ ಪೂರ್ತಿ ತೀವ್ರ ಬರಗಾಲದಿಂದಾಗಿ ಕುಡಿಯುವ ನೀರಿಗೂ ಬವಣೆ ಅನುಭವಿಸಿದ್ದ ದೇಶದ ನಾಗರಿಕರಲ್ಲಿ ತುಸು ನೆಮ್ಮದಿಯನ್ನು ಈ ಮಳೆ ಮಾರುತಗಳು ತಂದಿವೆ.

ಇನ್ನು ಈಶಾನ್ಯ ಭಾರತ ಮತ್ತು ಬಾಂಗ್ಲಾ ದೇಶಕ್ಕೆ ಮೋರಾ ಚಂಡ ಮಾರುತ ಅಪ್ಪಳಿಸಿದೆ. ಪರಿಸ್ಥಿತಿಯ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಶಕ್ತಿಶಾಲಿ ಮೋರಾ ಚಂಡಮಾರುತ ಅಪ್ಪಳಿಸುವ ಭೀತಿಯಿಂದ ಲಕ್ಷಾಂತರ ಜನರನ್ನು ಬಾಂಗ್ಲಾ ದೇಶ ಸ್ಥಳಾಂತರಿಸಿತ್ತು.

ಬಾಂಗ್ಲಾದ ಪೂರ್ವ ಕರಾವಳಿಗೆ ಇಂದು ಚಂಡಮಾರುತ ಅಪ್ಪಳಿಸಿದ ಪರಿಣಾಮ ಆರು ನಾಗರಿಕರು ಬಲಿಯಾಗಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದು, ಅವರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದೆ. 15,000 ಮನೆಗಳು ನೆರೆ ಹಾವಳಿಗೆ ಕೊಚ್ಚಿ ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಮೋರಾ ಚಂಡಮಾರುತ ದಾಳಿ ನಡೆಸಲಿದ್ದು, ಪಶ್ಚಿಮ ಬಂಗಾಳದ ಮೀನುಗಾರರಿಗೆ ನೀರಿಗಿಳಿಯದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​​ಡಿಎಂಎ) ಸೂಚಿಸಿದೆ. ಗಂಟೆಗೆ 117 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸುತ್ತಿದೆ. ಬಂಗಾಳ ಕೊಲ್ಲಿಯಿಂದ ಈಶಾನ್ಯ ಭಾರತದತ್ತ ಮೋರಾ ಚಂಡಮಾರುತ ಪಯಣಿಸುತ್ತಿದ್ದು, ತ್ರಿಪುರಾ, ಮಿಜೋರಾಂ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.

ಈ ಬಾರಿ ಶೇ. 96ರಷ್ಟು ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 50 ವರ್ಷಗಳ ಸರಾಸರಿಯ ಪ್ರಕಾರ ಈ ಬಾರಿ 89 ಸೆಂಟಿಮೀಟರ್ ಮಳೆಯಾಗಲಿದೆ. ಈಶಾನ್ಯ ಮಳೆ ಮಾರುತಗಳಿಂದ ದೇಶದಲ್ಲಿ ಶೇ. 70ರಷ್ಟು ಮಳೆಯಾಗುತ್ತದೆ. ಈ ಬಾರಿ ಸಕಾಲಕ್ಕೆ ಮಾರುತಗಳು ಪ್ರವೇಶಿಸಿರುವುದು ಸಕಾರಾತ್ಮಕ ಅಂಶವಾಗಿದೆ. ಜೂನ್ – ಜುಲೈ ಅವಧಿಯಲ್ಲಿ ದೇಶದ ರೈತರು, ಭತ್ತ, ಕಬ್ಬು, ಹತ್ತಿ ಮೊದಲಾದ ವಾಣಿಜ್ಯ ಬೆಳೆಗಳಿಗೆ ನಾಟಿ ಮಾಡುತ್ತಾರೆ. ಸಕಾಲಕ್ಕೆ ಮಳೆ ಬಿದ್ದಿರುವುದರಿಂದಾಗಿ ದೇಶದ ಕೃಷಿ ಆರ್ಥಿಕತೆಗೆ ಸ್ವಾಭಾವಿಕವಾಗಿಯೇ ಉತ್ತೇಜನ ಸಿಕ್ಕಂತಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *