ನಾಳೆ 11ಕ್ಕೆ ಬಹುಮತ ಸಾಬೀತು ಪಡಿಸಿ ಎಂದು ಸುಪ್ರೀಂ ಕೋರ್ಟ್​​​​​​​: ಇಂದು ಸುಪ್ರೀಂ ಕೋರ್ಟ್​ನಲ್ಲಿ ನಡೆದಿದ್ದೇನು?

ದೆಹಲಿ: ರಾಷ್ಟ್ರದ ಕುತೂಹಲ ಕೆರಳಸಿದ್ದ ರಾಜ್ಯದ ಬಹುಮತ ಸಾಬೀತು ಪ್ರಕರಣ ಕುತೂಹಲಕರ ತಿರುವು ಪಡೆದಿದೆ. ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್ – ಜೆಡಿಎಸ್ ಸುಪ್ರೀಂ ಕೋರ್ಟ್​​ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ನಾಳೆ ಸಂಜೆ 4 ಗಂಟೆಗೆ ಸದನದಲ್ಲಿ ಬಹುಮತ ಸಾಬೀತುಪಡಿಸಿ ಎಂದು ಆದೇಶಿಸಿದೆ. ಇಂದು ನ್ಯಾ. ಎ ಕೆ ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠದಿಂದ ವಿಚಾರಣೆ ನಡೆದಿದ್ದು, ಪೀಠದಲ್ಲಿ ನ್ಯಾ. ಎಸ್ ಎ ಬೊಬ್ಡೆ, ನ್ಯಾ. ಅಶೋಕ್ ಭೂಷಣ್ ಅವರೂ ಇದ್ದರು.

ಇಂದು ವಿಚಾರಣೆ ವೇಳೆ ಬಿಜೆಪಿ ಪರ ವಕೀಲ ಮುಕುಲ್ ರೋಹಟ್ಗಿ, ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಸುಪ್ರೀಂ ಕೋರ್ಟ್ ಸೂಚನೆಯಂತೆ ಇಂದು ಪ್ರಮಾಣ ಪತ್ರ ಸಲ್ಲಿಸಿದ ಮುಕುಲ್ ರೋಹಟ್ಗಿಯವರ ಪತ್ರದಲ್ಲಿ ಬೆಂಬಲಿಗ ಶಾಸಕರ ಸಹಿಗಳೇ ಇರಲಿಲ್ಲ ಎಂದು ವರದಿಯಾಗಿದೆ. ನಂತರ ಅನೇಕ ಸೂಕ್ಷ್ಮ ಅಂಶಗಳೊಡನೆ ವಿಚಾರಣೆ ನಡೆಸಿದ ಪೀಠ, ಇನ್ನಷ್ಟು ಅವಕಾಶ ಕೊಟ್ಟರೆ ಬಹುಮತ ಸೃಷ್ಟಿಸುತ್ತೀರಾ? ಎಂದು ಬಿಜೆಪಿ ವಕೀಲರಿಗೆ ಪ್ರಶ್ನಿಸಿತು. ಈ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತು.

ವಿಚಾರಣೆಗೂ ಮುನ್ನ ಪ್ರತಿಕ್ರಿಯಿಸಿದ ಮುಕುಲ ರೋಹಟ್ಗಿ, ಬಿಜೆಪಿ ಬೆಂಬಲಿಗ ಶಾಸಕರ ಪತ್ರವನ್ನು ಕೋರ್ಟ್​​ಗೆ ನೀಡುತ್ತೇವೆ ಎಂದರು. ಅಲ್ಲದೇ, ಬಹುಮತವನ್ನು ಸದನದಲ್ಲಿ ಸಾಬೀತು ಮಾಡಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಲ್ಲದೇ, ಕುದುರೆ ವ್ಯಾಪಾರ ವದಂತಿಯನ್ನು ತಳ್ಳಿಹಾಕಿದರು.

ಸುಪ್ರೀಂ ಕೋರ್ಟ್​​ನಲ್ಲಿ ವಾದ ಮಂಡಿಸಿದ ರೋಹಟ್ಗಿ, ಸದನದಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸಲಿದೆ ಎಂದರು. ಬಿಜೆಪಿ ಅತಿ ದೊಡ್ಡ ಪಕ್ಷ ಎಂದ ಅವರು, ಬಿಎಸ್​ವೈ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಬಹುಮತಕ್ಕೆ ಅವಶ್ಯಕ ಬೆಂಬಲ ಇದೆ. ಸದನದಲ್ಲಿ ಬಹುಮತ ಸಾಬೀತು ಮಾಡಲಾಗುವುದು ಎಂದು ವಾದ ಮಂಡಿಸಿದರು.

ಆದರೆ, ಮುಕುಲ್ ಸಲ್ಲಿಸಿದ ಪತ್ರದಲ್ಲಿ ಅವಾಂತರ ಸಂಭವಿಸಿತ್ತು. ಶಾಸಕರ ಹೆಸರಿಲ್ಲದ ಪಟ್ಟಿಯನ್ನು ಬಿಜೆಪಿ ಪರ ವಕೀಲಸರು ಸಲ್ಲಿಸಿದ್ದರು. ಇದಕ್ಕೂ ಮುನ್ನ ಬಿಜೆಪಿ 111 ಬೆಂಬಲಿಗರು ನಮಗೆ ಇದ್ದಾರೆ ಎಂದು ಹೇಳಿಕೊಂಡಿತ್ತು. ಆದರೆ, ಸಹಿ ಇಲ್ಲದ ಪತ್ರ ಸಲ್ಲಿಸಿ ಬಿಜೆಪಿ ಮುಜುಗರಕ್ಕೆ ಒಳಗಾಗಿದೆ.

ಕೂಲಂಕಷ ವಿಚಾರಣೆ ನಡೆಸಿದ ನ್ಯಾ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ, ಇದು ಕೇವಲ ನಂಬರ್ ಗೇಮ್ ಎಂದು ಅಭಿಪ್ರಾಯಪಟ್ಟಿತು. ಬಹುಮತ ಇರುವವರಿಗೆ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದ ಕೋರ್ಟ್​​, ದೂರುದಾರರಿಗೆ ಎರಡು ಆಯ್ಕೆ ನೀಡಿತು. ರಾಜ್ಯಪಾಲರ ನಿರ್ಧಾರದ ಕುರಿತು ಕೂಲಂಕಷ ವಿಚಾರಣೆ ಮತ್ತು ಸದನದಲ್ಲಿ ಬಹುಮತ ಸಾಬೀತಿಗೆ ಸೂಚನೆಯನ್ನು ಕೋರ್ಟ್​​ ಪರಾಮರ್ಶಿಸಿತು.

ಅಲ್ಲದೇ, ಬಿಜೆಪಿ ಶಾಸಕರ ಸಹಿ ಇರುವ ಪತ್ರ ಎಲ್ಲಿದೆ? ಕಾಲಾವಕಾಶ ನೀಡಿದರೆ ಬಹುಮತ ಸೃಷ್ಟಿಸುತ್ತೀರಾ? ಎಂದು ಬಿಜೆಪಿ ವಕೀಲರಿಗೆ ತ್ರಿಸದಸ್ಯ ಪೀಠ ಪ್ರಶ್ನಿಸಿತು. ಈ ಮೂಲಕ ಬಿಜೆಪಿಗೆ ತೀವ್ರ ಹಿನ್ನಡೆಯಾಗುವ ಸೂಚನೆ ಸಿಕ್ಕಿತ್ತು.

ಕಾಂಗ್ರೆಸ್ ಪರ ವಾದ ಮಂಡಿಸಿದ ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಯಡಿಯೂರಪ್ಪ ಬಹುಮತ ಇದೆ ಎಂದಿದ್ದಾರೆ. ಆದರೆ, ಬೆಂಬಲಿಗರ ಸಹಿ ಇರುವ ಪತ್ರ ಸಲ್ಲಿಸಿಲ್ಲ ಎಂದರು. ಬಿ ಎಸ್ ಯಡಿಯೂರಪ್ಪನವರದು ಕೇವಲ ಮೌಖಿಕ ಹೇಳಿಕೆ ಎಂದು ಅಭಿಪ್ರಾಯಪಟ್ಟರು. ಅಲ್ಲದೇ, ಕಾಂಗ್ರೆಸ್ – ಜೆಡಿಎಸ್ ಶಾಸಕರಿಗೆ ಸೂಕ್ತ ಭದ್ರತೆಯ ಅಗತ್ಯ ಇದೆ ಎಂದ ಸಿಂಘ್ವಿ ಬಹುಮತ ಸಾಬೀತು ವೇಳೆ ಸೂಕ್ತ ಭದ್ರತೆ ಒದಗಿಸಿ ಎಂದು ಮನವಿ ಮಾಡಿದರು. ಅಲ್ಲದೇ., ಭದ್ರತೆ ನೀಡುವಂತೆ ಆದೇಶ ಹೊರಡಿಸಿ ಎಂದು ಸುಪ್ರೀಂ ಕೋರ್ಟ್​​ಗೆ ಮನವಿ ಮಾಡಿದರು.

ಸುಪ್ರೀಂ ಕೋರ್ಟ್​​ ನಾಳೆ ಬಹುಮತ ಸಾಬೀತುಪಡಿಸಿ ಎಂಬ ನಿರ್ದೇಶನವನ್ನು ಬಿಜೆಪಿ ಪರ ವಕೀಲ ಮುಕುಲ್ ವಿರೋಧಿಸಿದರು. ಅಲ್ಲದೇ, ಇನ್ನಷ್ಟು ಕಾಲಾವಕಾಶ ಒದಗಿಸಿ ಎಂದು ಅವರು ಕೋರ್ಟ್​​ಗೆ ಮನವಿ ಮಾಡಿದರು. ಮುಕುಲ್ ಮನವಿಯನ್ನು ವಿರೋಧಿಸಿದ ಅಭಿಷೇಕ್, ಇನ್ನಷ್ಟು ಅವಕಾಶ ಕೊಟ್ಟರೆ, ಬಿಎಸ್​ ಯಡಿಯೂರಪ್ಪ ಅಕ್ರಮವಾಗಿ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತಪಡಿಸಿದರು.

ಈ ನಡುವೆ ಸದನದಲ್ಲಿ ಬಹುಮತ ಸಾಬೀತಪಡಿಸುವವರೆಗೆ ಬಿಎಸ್​ವೈ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್​​ನಿಂದ ಮಹತ್ವದ ಆದೇಶ ಹೊರಡಿಸಿತು. ವರ್ಗಾವಣೆ ಸೇರಿದಂತೆ ಅನೇಕ ನಿರ್ಧಾರ ಕೈಗೊಂಡಿದ್ದ ಬಿಎಸ್​ವೈಗೆ ಈ ಮೂಲಕ ಮತ್ತೊಂದು ಹಿನ್ನಡೆಯಾಯಿತು.

ಈ ನಡುವೆ, ಆಂಗ್ಲೋ ಇಂಡಿಯನ್ ಸದಸ್ಯರ ನೇಮಕಕ್ಕೆ ಮುಂದಾಗಿದ್ದ ಬಿಎಸ್​ವೈ ನಿರ್ಧಾರಕ್ಕೆ ಕೂಡ ಹಿನ್ನಡೆಯಾಗಿದ್ದು, ಕಾಂಗ್ರೆಸ್ – ಜೆಡಿಎಸ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದ್ದು, ಆಂಗ್ಲೋ – ಇಂಡಿಯನ್ ಸದಸ್ಯರ ನೇಮಕಕ್ಕೆ ತಡೆ ನೀಡಿದೆ.

ಸುಪ್ರೀಂ ಕೋರ್ಟ್​​​ ಆದೇಶವನ್ನು ಕಾಂಗ್ರೆಸ್ ಸ್ವಾಗತಿಸಿದ್ದು, ಕೋರ್ಟ್​​​​ ಸಾಂವಿಧಾನಿಕ ನೈತಿಕತೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದೆ ಎಂದು ಕಾಂಗ್ರೆಸ್ ನಾಯಕ ಅಶ್ವನಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಕೋರ್ಟ್​​​ನಿಂದ ವಿಶ್ವಾಸಾರ್ಹತೆ ಹೆಚ್ಚಿದೆ. ಬಿಜೆಪಿಯ ಅಧಿಕಾರ ಕಿತ್ತುಕೊಳ್ಳುವ ಕ್ರಮಕ್ಕೆ ಹಿನ್ನಡೆಯಾಗಿದೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿ ಎಸ್ ಯಡಿಯೂರಪ್ಪ, ನಮಗೆ ಎಲ್ಲ ಶಾಸಕರ ಬೆಂಬಲ ಇದೆ. ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದರು. ನಾಳೆ ಅಧಿವೇಶನ ಕರೆಯುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸುತ್ತೇನೆ. ನಾಳೆ ನಾನು ವಿಶ್ವಾಸಮತ ಸಾಬೀತುಪಡಿಸುವುದು ಶೇ. 100ಕ್ಕೆ ನೂರರಷ್ಟು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶದನ ಪ್ರಕಾರ, ನಾಳೆ ನಾವು ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದಿರುವ ಯಡಿಯೂರಪ್ಪ, ನಾಳೆ ಬೆಳಿಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು. ಅಲ್ಲದೇ, ಸದನದಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಬಿ ಎಸ್ ಯಡಿಯೂರಪ್ಪನವರಿಗೆ 104 ಶಾಸಕರ ಬೆಂಬಲವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಿಎಸ್​ವೈ ರಾಜ್ಯಪಾಲರಿಗೆ 7 ದಿನಗಳ ಅವಕಾಶ ಕೋರಿದ್ದರು. ಅವರ ಬಳಿ 104 ಜನರ ಹೆಸರನ್ನು ಹೊರತುಪಡಿಸಿದರೆ ಮತ್ಯಾರ ಬೆಂಬಲವೂ ಇಲ್ಲ. ಆದರೆ, ರಾಜ್ಯಪಾಲರು ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ಇದು ಅಸಂವಿಧಾನಿಕ ಎಂದರು.

ಇಂದಿನ ಸುಪ್ರೀಂ ಕೋರ್ಟ್​ ಆದೇಶದಿಂದ ಕರ್ನಾಟಕ ರಾಜ್ಯಪಾಲರ ನಡೆ ಅಸಂವಿಧಾನಿಕ ಎಂಬುದು ಸಾಬೀತಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಕೆಟ್ಟ ಮಾರ್ಗದಲ್ಲಿ ಸರ್ಕಾರ ರಚಿಸಿತ್ತು ಎಂದಿರುವ ಅವರು, ಬಹುಮತ ಸಾಬೀತಿಗೆ ಅಗತ್ಯ ಸಂಖ್ಯೆ ಬಿಜೆಪಿಗೆ ಇರಲಿಲ್ಲ. ಸರ್ಕಾರ ರಚನೆ ತಪ್ಪು ಎಂದು ಕೋರ್ಟ್​​​​​ ಹೇಳಿದೆ. ಕಾನೂನಾತ್ಮಕವಾಗಿ ಬಿಜೆಪಿಯ ಅಧಿಕಾರವನ್ನು ತಡೆ ಹಿಡಿಯಲಾಗಿದೆ ಎಂದಿದ್ದಾರೆ. ಅಲ್ಲದೇ, ಬಿಜೆಪಿಗರು ಅಧಿಕಾರಕ್ಕಾಗಿ ಹಣ ಮತ್ತು ತೋಳ್ಬಲ ಬಳಸುತ್ತಾರೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ನಾವು ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದರು. ಅಲ್ಲದೇ, ನಾಳಿನ ವಿಶ್ವಾಸ ಮತ ಯಾಚನೆಗೆ ನಾವು ಸಿದ್ಧರಿದ್ದೇವೆ ಎಂದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *