ಭಯೋತ್ಪಾದನೆ: ಖತಾರ್​ನೊಂದಿಗೆ ಸಂಬಂಧ ಕಡಿದುಕೊಂಡ 6 ರಾಷ್ಟ್ರಗಳು

ಖೈರೋ: ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಆರೋಪದ ಮೇಲೆ ಖತಾರ್​ನೊಂದಿಗೆ 6 ರಾಷ್ಟ್ರಗಳು ಸಂಬಂಧ ಕಡಿದುಕೊಂಡಿವೆ. ಸೌದಿ ಅರೇಬಿಯಾ, ಬಹ್ರೇನ್, ಈಜಿಪ್ಟ್​​, ಯುಎಇ, ಯೆಮೆನ್ ಮತ್ತು ಲಿಬಿಯಾ ಈ ನಿರ್ಧಾರ ಕೈಗೊಂಡ 6 ರಾಷ್ಟ್ರಗಳು. ಇದರ ಬೆನ್ನಲ್ಲೇ ತಮ್ಮ ದೇಶದ ನಾಗರಿಕರು, ಪ್ರವಾಸಿಗಳು ಮತ್ತು ರಾಯಭಾರಿಗಳಿಗೆ 48 ಗಂಟೆಗಳ ಒಳಗೆ ಖತಾರ್​ ತೊರೆಯುವಂತೆ ಯುಎಇ ಸೂಚನೆ ನೀಡಿದೆ.

ಖತಾರ್​​ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಸೌದಿ ಅರೇಬಿಯಾ ಹೇಳಿದೆ. ತನ್ನ ದೇಶದ ಆಂತರಿಕ ಭದ್ರತೆ ಎದುರಾಗಿರುವ ಸವಾಲು ಮತ್ತು ಅಪಾಯಕಾರಿ ಭಯೋತ್ಪಾದನೆ ವಿರೋಧಿಸಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಖತಾರ್​ನೊಂದಿಗೆ ರಸ್ತೆ, ವಾಯು ಮತ್ತು ಸಮುದ್ರ ಮಾರ್ಗಗಳನ್ನೂ ಮುಚ್ಚಲಾಗಿದೆ ಎಂದು ಸೌದಿ ಅರೇಬಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಕಳೆದ ಕೆಲವು ವರ್ಷಗಳಿಂದ ಖತಾರ್​​ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಕೂಡ ಆರೋಪಿಸಿದೆ.

ಖತಾರ್​​ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂದು ಯುಎಇ ಮತ್ತು ಈಜಿಪ್ಟ್​​ ವಿದೇಶಾಂಗ ಸಚಿವಾಲಯಗಳು ಆರೋಪಿಸಿವೆ. ಖತಾರ್​ನೊಂದಿಗಿನ ವಾಯುಮಾರ್ಗವನ್ನು ಮುಚ್ಚಿರುವುದಾಗಿ ಈಜಿಪ್ಟ್ ಕೂಡ ಹೇಳಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಹ್ರೇನ್, ಭದ್ರತೆ ಮತ್ತು ಸ್ಥಿರತೆಗೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಸೌದಿ ಅರೇಬಿಯಾ ನೇತೃತ್ವದ ಅರಬ್ ಸಮೂಹಗಳ ಪೈಕಿ ಯೆಮನ್​​ನಲ್ಲಿ ಎರಡು ವರ್ಷಗಳಿಂದ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ. ಇದಕ್ಕೆ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಉಗ್ರರರು ಹೊಣೆ. ಈ ಸಂಘಟನೆಗಳನ್ನು ಖತಾರ್​ ಬೆಂಬಲಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಆಫ್ಘಾನಿಸ್ತಾನದ ತಾಲಿಬಾನ್ ಉಗ್ರರ ಗುಂಪು ಖತಾರ್​​ ರಾಜಧಾನಿ ದೋಹಾದಲ್ಲಿ 2013ರಲ್ಲಿ ಕಚೇರಿ ತೆರೆದಿತ್ತು. 2022ರಲ್ಲಿ ಫುಟ್​​ಬಾಲ್​ ವಿಶ್ವ ಕಪ್ ಅನ್ನು ಖತಾರ್​ ದೇಶ ಆಯೋಜಿಸುತ್ತಿದೆ. ಅಲ್ಲದೇ, ಅಮೆರಿಕ ನೇತೃತ್ವದ ಇಸ್ಲಾಮಿಕ್ ಸ್ಟೇಟ್ ಗುಂಪುಗಳ ನಿಯಂತ್ರಣ ದೇಶಗಳ ಸದಸ್ಯ ರಾಷ್ಟ್ರ ಕೂಡ ಹೌದು. ಇನ್ನೊಂದು ಮಹತ್ವದ ಸಂಗತಿ ಎಂದರೆ, ಅಮೆರಿಕ ವಾಯು ಸೇನೆ ಕವಾಯತು, ಸಿದ್ಧತೆ ನಡೆಸುವ ಅಲ್ – ಉದೀದ್ ವಾಯುನೆಲೆ ಕೂಡ ಇದೇ ದೇಶದಲ್ಲಿದೆ.

ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮುಸ್ಲಿಂ ರಾಷ್ಟ್ರಗಳಿಗೆ ಭೇಟಿ ನೀಡಿ, ಭಯೋತ್ಪಾದನೆ ವಿರುದ್ಧ ಇಸ್ಲಾಂ ರಾಷ್ಟ್ರಗಳು ಒಗ್ಗೂಡಿ ಹೋರಾಡಬೇಕು ಎಂದು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ಕು ರಾಷ್ಟ್ರಗಳ ನಿರ್ಧಾರ ಮಹತ್ವಪಡೆದುಕೊಂಡಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *