ಹೊಸಕೆರೆ ಹೊಸ ಸ್ವರೂಪ

ಕೆರೆ ಮಹತ್ವ ಅಪಾರ. ಅದರಿಂದಾಗುವ ಅನುಕೂಲಗಳು ಅಗಣಿತ. ಇದನ್ನರಿತೇ ರಾಜ-ಮಹಾರಾಜರ ಕಾಲದಲ್ಲಿ ಅವುಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದರು. ಈ ರೀತಿ ಬೆಂಗಳೂರಿನಲ್ಲಿ ಆದ ಕೆರೆಗಳು ಹಲವು. ಇವುಗಳು ಕೃಷಿಗೆ, ಜಾನುವಾರುಗಳು – ಪಕ್ಷಿಗಳು ನೀರು ಕುಡಿಯಲು ಅನುಕೂಲವಾಗಿದ್ದವು. ಇಂಥ ನೆರವನ್ನು ನೂರಾರು ವರ್ಷಗಳಿಂದಲೇ ಹೊಸಕೆರೆ ಒದಗಿಸುತ್ತಾ ಬಂದಿತ್ತು.
ಹೊಸಕೆರೆ. ಈ ಹೆಸರು ಕೇಳಿದಾಗ ಹೊಸದಾಗಿ ನಿರ್ಮಾಣ ಆಗಿರುವ ಕೆರೆ ಅನಿಸಬಹುದು. ಇದು ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನು ಆಳಿದ್ದ ಚೋಳರ ಕಾಲದಲ್ಲಿ ನಿರ್ಮಿತವಾದ ಕೆರೆ. ಬೆಂಗಳೂರು ಮಹಾನಗರದಲ್ಲಿ ಹುದುಗಿಹೋದ ಅನೇಕ ಹಳ್ಳಿಗಳಲ್ಲಿ ಹೊಸಕೆರೆ ಹಳ್ಳಿಯೂ ಒಂದು. ಬಹುಶಃ ಈ ಕೆರೆಯಿಂದಲೇ ಆ ಹಳ್ಳಿಗೆ ಈ ಹೆಸರು ಬಂದಿರಬಹುದು. ಬೆಂಗಳೂರು-ಮೈಸೂರು ಹೆದ್ದಾರಿ ಬದಿ ಇರುವ ನಾಯಂಡಹಳ್ಳಿಗೆ ಹತ್ತಿರದಲ್ಲಿವೆ ಆ ಊರು ಮತ್ತು ಕೆರೆ ನಗರ ಬೆಳೆದಂತೆ ಹೊಸಕೆರೆಗೆ ನೀರು ಹರಿದು ಮಾರ್ಗ ಬಂದ್ ಆಗಿತ್ತು. ಇದರಿಂದ ಕೆರೆ ಒಣಗಿತ್ತು. ತ್ಯಾಜ್ಯ ಸುರಿಯುವ ತಾಣವೂ ಆಗಿತ್ತು.
ಈ ಕೆರೆ ಪುನಶ್ಚೇತನ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿತು. ಕಳೆದ ಏಂಟು ತಿಂಗಳ ಹಿಂದೆ ಕೆರೆ ಸ್ವಚ್ಛತೆಗೆ ಚಾಲನೆ ದೊರೆಯಿತು. ಆಗ ಸುಂದರ ಮಂಟಪ ಮತ್ತು ನೀರಿನ ಮಂಟಪ ಪತ್ತೆಯಾಯಿತು. ಮಂಟಪದ ಮೇಲೆ 25 ಅಡಿಗೂ ಹೆಚ್ಚು ಹೂಳು ತುಂಬಿತ್ತು. ಈ ಕಾರಣದಿಂದಲೇ ಅಲ್ಲೊಂದು ಮಂಟಪ ಇದೆ ಎನ್ನುವುದೇ ತಿಳಿದಿರಲಿಲ್ಲ. ಇದರ ಅಸ್ತಿತ್ವ ತಿಳಿಯುತ್ತಿದ್ದ ಹಾಗೆ ಅದರ ಸುತ್ತಲಿರುವ ಮಣ್ಣನ್ನು ಅರ್ಥ್ ಮೂವರ್ ನಿಂದ ಎಚ್ಚರಿಕೆಯಿಂದ ತೆಗೆಯಲಾಯಿತು. ಅದನ್ನು ಸ್ವಚ್ಛಗೊಳಿಸುತ್ತಿದಂತೆ ಅದರ ಸುಂದರ ಸ್ವರೂಪ ಗೋಚರಿಸಿತು.


ನೂರಾರು ವರ್ಷಗಳ ಹಿಂದೆ ನಿರ್ಮಿತವಾದ ಈ ಮಂಟಪ ಇಂದಿಗೂ ಸುಭದ್ರವಾಗಿದೆ. ಕೆರೆಗೆ ನೀರು ಹರಿದು ಬರುವ ಮಾರ್ಗಗಳು ತೆರವಾಗಿವೆ. ಇದರ ಪರಿಣಾಮ ಮೇ ತಿಂಗಳಿನಲ್ಲಿ ಆದ ಮುಂಗಾರುಪೂರ್ವ ಮಳೆಯಿಂದಲೇ ಗೊತ್ತಾಗಿದೆ. ಕೆರೆಗೆ ಸಾಕಷ್ಟು ನೀರು ಹರಿದು ಬಂದಿದೆ. ಹತ್ತರಿಂದ 12 ಅಡಿಗೂ ಹೆಚ್ಚು ಭರ್ತಿಯಾಗಿದೆ. ಹೊಸಕೆರೆ ಸುವ್ಯವಸ್ಥಿತವಾಗಿ ನಿರ್ಮಾಣವಾಗಿದೆ. ಇದರ ಲಕ್ಷಣಗಳು ಇಂದಿಗೂ ಗೋಚರಿಸುತ್ತದೆ. ಇದರ ಅಂಗಳ 56 ಎಕರೆಗೂ ಹೆಚ್ಚು ವಿಸ್ತೀರ್ಣ. ಕೆರೆ ಬಂಡು ಕೂಡ ಬಹು ದೀರ್ಘ ಮತ್ತು ವಿಶಾಲ.
ನೂರಾರು ವರ್ಷಗಳ ಹಿಂದೆ ನಿರ್ಮಾಣವಾದ ಈ ಕೆರೆ ಏರಿ ಇಂದಿಗೂ ಸುಭದ್ರವಾಗಿದೆ. ಅದರ ಅಕ್ಕಪಕ್ಕದಲ್ಲಿ ಸಾಲು ಮರಗಳೂ ಇವೆ. ಕೆಲವು ಮರಗಳ ರೆಂಬೆ-ಕೊಂಬೆಗಳಂತೂ ದೀರ್ಘವಾಗಿ ಹರಡಿಕೊಂಡಿವೆ. ಕೆರೆಗೆ ಬಿಬಿಎಂಪಿ ಹೊಸ ಸ್ವರೂಪ ನೀಡುತ್ತಿದೆ. ಕೆರೆ ಮಧ್ಯೆ ಅಲ್ಲಲ್ಲಿ ನಡುಗಡ್ಡೆಗಳನ್ನು ನಿರ್ಮಿಸಲಾಗುತ್ತಿದೆ.
ಕೆರೆ ಮತ್ತಷ್ಟೂ ಹೊಸ ಸ್ವರೂಪ ಪಡೆದುಕೊಂಡು ಸಂಪೂರ್ಣ ನೀರು ಭರ್ತಿಯಾದ ನಂತರ ಬೋಟಿಂಗ್ ವ್ಯವಸ್ಥೆ ಮಾಡುವ ಯೋಜನೆ ಹೊಂದಲಾಗಿದೆ. ಕೆರೆಗೆ ನೀರು ಹರಿದು ಬಂದಿರುವುದು ಸ್ಥಳೀಯ ನಿವಾಸಿಗಳಿಗೆ ಅಪಾರ ಸಂತಸ ಉಂಟು ಮಾಡಿದೆ. ಇದು ಮತ್ತಷ್ಟು ಅಭಿವೃದ್ಧಿಯಾದರೆ ನಗರದ ಪ್ರಖ್ಯಾತ ವಿಹಾರ ತಾಣ ಆಗುತ್ತದೆ ಎಂಬ ಭಾವನೆಯೂ ಇದೆ. ಮುಖ್ಯವಾಗಿ ಕೆರೆಗೆ ನೀರು ತುಂಬಿದರೆ ಅಂತರ್ಜಲ ವೃದ್ಧಿಸುತ್ತದೆ ಎಂಬ ವಿಶ್ವಾಸ ಅವರಿಗಿದೆ.

ಕುಮಾರ ರೈತ, ವಿಶೇಷ ಪ್ರತಿನಿಧಿ, ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *