ಚಂಡೀಘಡ: ಹರಿಯಾಣದ ರೇವಾರಿ ಜಿಲ್ಲೆಯಲ್ಲಿ ಸಿಬಿಎಸ್ಇ ಟಾಪರ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. 19 ವರ್ಷದ ಯುವತಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ 24 ಗಂಟೆಗಳಾದರೂ ಯಾವುದೇ ಆರೋಪಿಯನ್ನು ಬಂಧಿಸದೆ ಇರುವುದನ್ನು ಖಂಡಿಸಿ ಮತ್ತು ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ, ಪೋಷಕರು ಮತ್ತು ನಾಗರಿಕರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ಎಡಿಜಿಪಿ ಎ ಎಸ್ ಚಾವ್ಲಾ ನಾಜ್ನೀನ್ ಭಸಿನ್ ನೇತೃತ್ವದಲ್ಲಿ ಎಸ್ಐಟಿ ತಂಡವನ್ನು ರಚಿಸಲಾಗಿದೆ ಎಂದರು.
ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ವೈದ್ಯ ಸುದರ್ಶನ್ ಪನ್ವಾರ್ ಹೇಳಿದ್ದಾರೆ. ಅವಳ ಎಕ್ಸ್-ರೇ, ಅಲ್ಟ್ರಾಸೌಂಡ್ ಪರೀಕ್ಷೆ ಸಾಮಾನ್ಯವಾಗಿದೆ. ಅವಳ ಆರೋಗ್ಯ ಪರಿಸ್ಥಿತಿ ಕುರಿತು ನಿಗಾ ಮುಂದುವರೆಸಲಾಗುವುದು ಎಂದು ಜಿಲ್ಲಾಸ್ಪತ್ರೆಯ ಅಧೀಕ್ಷಕರಾಗಿರುವ ಸುದರ್ಶನ್ ಮಾಹಿತಿ ನೀಡಿದ್ದಾರೆ.
ನಂತರ ರೆವಾರಿ ಜಿಲ್ಲಾಸ್ಪತ್ರೆಯಲ್ಲಿರುವ ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿಯಾದ ನಂತರ ಪ್ರತಿಕ್ರಿಯಿಸಿದ ಎಸ್ಐಟಿ ಮುಖ್ಯಸ್ಥೆ ನಾಜ್ನೀನ್ ಭಸಿನ್ ಸಂತ್ರಸ್ತೆಯೊಂದಿಗೆ ನಾನು ಮಾತನಾಡಿದ್ದೇನೆ. ಮುಖ್ಯ ಆರೋಪಿಯ ಗುರುತು ಪತ್ತೆ ಹಚ್ಚಲಾಗಿದೆ. ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಈ ನಡುವೆ ರಾಷ್ಟ್ರೀ ಮಹಿಳಾ ಹಕ್ಕು ಆಯೋಗ ಪ್ರಕರಣ ಸಂಬಂಧ ವಿವರವಾದ ವರದಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ವೈದ್ಯಕೀಯ ವರದಿ ಅತ್ಯಾಚಾರ ನಡೆದಿರುವುದನ್ನು ಸಮರ್ಥಿಸಿದೆ. ಆರೋಪಿಗಳನ್ನು ಬಂಧಿಸಲು ಅನೇಕ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಕುರಿತು ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ಕೊಡುವುದಾಗಿ ಅವರು ಘೋಷಿಸಿದರು.
ಒಂದು ವೇಳೆ ಸೇನಾಧಿಕಾರಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಕೂಡ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅತ್ಯಾಚಾರದ ದೂರು ದಾಖಲಿಸಲಾಗುವುದು ಎಂದು ನೈಋತ್ಯ ಕಮ್ಯಾಂಡಿಂಗ್ ಅಧಿಕಾರಿ ಲೆ. ಜ. ಚೆರಿಷ್ ಮ್ಯಾಥ್ಸನ್ ಹೇಳಿದ್ದಾರೆ. ನಾವು ಅಪರಾಧಿಗಳು ಅವಿತುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ನಿರಾಶೆಗೊಂಡ ಮತ್ತು ನಿರುದ್ಯೋಗಿ ಮಕ್ಕಳು ಇಂತಹ ಘಟನೆಗೆ ಜವಾಬ್ದಾರರು ಎಂದು ಬಿಜೆಪಿ ಶಾಸಕಿ ಪ್ರೇಮ್ ಲತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದು, ಹರಿಯಾಣ ರಾಜ್ಯದಲ್ಲಿ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಆದರೆ, ವಿವಾದಾತ್ಮಕ ಹೇಳಿಕೆಗಳ ಸರಣಿ ಮುಂದುವರೆಯುತ್ತಿದೆ.