ಹಸುವನ್ನು ರಾಷ್ಟ್ರೀಯ ಪ್ರಾಣಿಯಾಗಿಸಿ, ಕೊಂದವರಿಗೆ ಜೀವಾವಧಿ ಶಿಕ್ಷೆ ನೀಡಿ: ರಾಜಸ್ಥಾನ ಹೈಕೋರ್ಟ್​​

ಜೈಪುರ: ಹಸುವನ್ನು ರಾಷ್ಟ್ರೀಯ ಪ್ರಾಣಿಯಾಗಿಸಬೇಕು ಮತ್ತು ಹಸುವನ್ನು ಕೊಂದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್ ನ್ಯಾ. ಮಹೇಶ್ ಚಂದ್ರ ಶರ್ಮ​​ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಕಳೆದ 23ರಂದು ಪರಿಸರ ಇಲಾಖೆ ದನಗಳ ಮಾರಾಟ ವಿಷಯಕ್ಕೆ ಸಂಬಂಧಿಸಿದಂತೆ ತಂದ ತಿದ್ದುಪಡಿ ವಿರೋಧಿಸಿ ದೇಶದಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾದ ನಡುವೆ, ರಾಜಸ್ಥಾನ ಹೈಕೋರ್ಟ್​​ ಕೇಂದ್ರ ಸರ್ಕಾರಕ್ಕೆ ಈ ಶಿಫಾರಸುಗಳನ್ನು ಮಾಡಿದೆ. ಹಸುವಿನಲ್ಲಿ 33 ಸಾವಿರ ಕೋಟಿ ದೇವರು, ದೇವತೆಗಳು ನೆಲೆಸಿದ್ದಾರೆ. ಜಗತ್ತಿನಲ್ಲಿ ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಹಸು ಎಂದು ರಾಜಸ್ಥಾನ ನ್ಯಾಯಮೂರ್ತಿ ಮನೀಶ್ ಚಂದ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಹಿಂದೂಗಳು ಪವಿತ್ರ ಎಂದು ಭಾವಿಸುವ ಹಸುವನ್ನು ರಾಷ್ಟ್ರೀಯ ಪ್ರಾಣಿಯಾಗಿಸಬೇಕು ಮತ್ತು ಅವುಗಳನ್ನು ಕೊಂದವರಿಗೆ ಜೀವಾವಾಧಿ ಶಿಕ್ಷೆ ವಿಧಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹಿಂಗೋನಿಯಾ ಗೋಶಾಲೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ತಮ್ಮ ಶಿಫಾರಸುಗಳ ಕುರಿತು ಪ್ರತಿಕ್ರಿಯಿಸಿರುವ ರಾಜಸ್ಥಾನ ನ್ಯಾಯಮೂರ್ತಿ ನ್ಯಾ. ಮಹೇಶ್ ಚಂದ್ರ ಶರ್ಮ​​, ನಾನು ಶಿವ ಭಕ್ತ. ಇದು ನನ್ನ ಆತ್ಮದ ಮಾತು. ಇವುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರದಿರಬಹುದು. ಆದರೆ ಇದು ನನ್ನ ಅಭಿಪ್ರಾಯ ಎಂದಿದ್ದಾರೆ.

ಅರ್ಜಿಯ ವಿಚಾರಣೆಯ ವೇಳೆ ಗೋಮೂತ್ರದ 11 ಬಗೆಯ ಲಾಭಗಳನ್ನು ವಿವರಿಸಿದರು. ಅಲ್ಲದೇ, ಭಾರತೀಯ ಮತ್ತು ವಿದೇಶದ ವಿಜ್ಞಾನಿಗಳ ಪ್ರಕಾರ ಹಸುಗಳು ಮನುಷ್ಯರಿಗೆ ಸಹಕಾರಿ. ಜರ್ಮನ್ ಪಂಡಿತ ರುಡಾಲ್ಫ್​​ ಸ್ಟೆನರ್​ ಪ್ರಕಾರ, ಹಸು ಕಾಸ್ಮಿಕ್ ಎನರ್ಜಿಯನ್ನು ಹೀರಿಕೊಳ್ಳುತ್ತದೆ. ಮದ್ರಾಸ್​​ನ ವಿಜ್ಞಾನಿಯೊಬ್ಬರ ಪ್ರಕಾರ ಹಸುವಿನ ಸಗಣಿ ಕಾಲರಾ ರೋಗಾಣುಗಳನ್ನು ಕೊಲ್ಲುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಹಸುವಿನ ಸಗಣಿಯಿಂದ 4,500 ಲೀಟರ್ ಬಯೋಗ್ಯಾಸ್ ಉತ್ಪಾದನೆಯಾಗುತ್ತದೆ. ದನದ ಸಗಣಿಯಿಂದ ಬಯೋಗ್ಯಾಸ್ ಉತ್ಪಾದಿಸಿದರೆ, ದೇಶಕ್ಕೆ 6.80 ಟನ್​​ಗಳಷ್ಟು ಮರಗಳನ್ನು ಉಳಿಸಬಹುದು. ದನಗಳು ಕೃಷಿ ಆರ್ಥಿಕತೆಗೆ ಅಗತ್ಯ. ಅವುಗಳ ರಕ್ಷಣೆಗೆ ಗಂಗಾ – ಯಮುನಾ ನದಿಗಳ ಉಳಿವಿಗೆ ಕ್ರಮಗಳನ್ನು ಕೈಗೊಂಡಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಹಸುಗಳ ಬೆಳವಣಿಗೆಗೆ ಏಷ್ಯಾದಲ್ಲೇ ಅತ್ಯುತ್ತಮ ತಾಣವಾಗಿರುವ ರಾಜಸ್ಥಾನದ ಹಿಂಗೋನಿಯಾ ಗೋಶಾಲೆಯಲ್ಲಿ ಕಳೆದ ವರ್ಷ ಜನವರಿ 1 – ಜುಲೈ 31ರ ಅವಧಿಯಲ್ಲಿ 8,000 ಹಸುಗಳು ಅನಾರೋಗ್ಯ ಮತ್ತು ಆಕಸ್ಮಿಕ ಅಪಘಾತಗಳಿಗೆ ಸಿಲುಕಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಗೋ ಜನತಾ ಸೊಸೈಟಿ ಅರ್ಜಿ ಸಲ್ಲಿಸಿತ್ತು.

ಮೇ 23ರಂದು ಕೇಂದ್ರ ಸರ್ಕಾರ ಹಸು, ಎಮ್ಮೆ, ಗೂಳಿ, ಒಂಟೆಗಳನ್ನೂ ಒಳಗೊಂಡಂತೆ ಅವುಗಳ ಮಾರಾಟ ಮತ್ತು ಸಾಕುವಿಕೆ ಕುರಿತು ಕಠಿಣ ನಿಯಮ ಜಾರಿಗೆ ತಂದಿತ್ತು. ಈ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರದ ನೂತನ ಅಧಿಸೂಚನೆಯನ್ನು 4 ವಾರಗಳ ಕಾಲ ತಡೆಹಿಡಿದಿತ್ತು. ಅಲ್ಲದೇ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *