ದೇಶದಲ್ಲಿ ಹಿಂಸೆ, ಆಕ್ರೋಶ ತಾಂಡವವಾಡುತ್ತಿವೆ: ರಾಹುಲ್ ಗಾಂಧಿ

ಬರ್ಕಲಿ: ಭಾರತದಲ್ಲಿ ಹಿಂಸೆ, ಆಕ್ರೋಶ ಮತ್ತು ರಾಜಕೀಯ ಧ್ರುವೀಕರಣಗಳು ತಾಂಡವವಾಡುತ್ತಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಮೆರಿಕದ ಬರ್ಕ್‌ಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇತ್ತೀಚೆಗೆ ಹಲ್ಲೆಗೈದು ಕೊಲ್ಲುವ ಪ್ರವೃತ್ತಿಯಲ್ಲಿ ಏರಿಕೆಯಾಗಿದೆ. ಅಲ್ಲದೇ, ಸ್ವಯಂ ಘೋಷಿತ ಗೋರಕ್ಷಕರಿಂದ ದೇಶದಲ್ಲಿ ಹಿಂಸಾಚಾರ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯ ಧ್ರುವೀಕರಣ ಅಪಾಯಕಾರಿ. ದ್ವೇಷ, ಆಕ್ರೋಶ ಮತ್ತು ಹಿಂಸೆ ನಮ್ಮನ್ನು ನಾಶಗೊಳಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಅಲ್ಲದೇ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಅಮೆರಿಕದಲ್ಲೂ ಪ್ರಸ್ತಾಪಿಸಿ, ಪ್ರಗತಿಪರ ಪತ್ರಕರ್ತರನ್ನು ಗುಂಡಿಟ್ಟು ಮತ್ತು ಜನರನ್ನು ಹಲ್ಲೆಯ ಮೂಲಕ ಸಾಯಿಸಲಾಗುತ್ತಿದೆ ಎಂದರು. ಜೊತೆಗೆ ದಲಿತರನ್ನು ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ನೆವದಲ್ಲಿ, ಮುಸ್ಲಿಮರನ್ನು ಗೋಮಾಂಸ ತಿಂದರೆಂಬ ಆರೋಪದಡಿ ಹತ್ಯೆಗೈಯಲಾಗುತ್ತಿದೆ ಎಂದರು. ದೇಶದಲ್ಲಿ ಹಿಂಸೆ ವಿಜೃಂಭಿಸುವುದು ಅಪಾಯದ ಹಾದಿ. ಅಹಿಂಸೆಯ ಪ್ರತಿಪಾದಕರ ಮೇಲೆ ಕೂಡ ದಾಳಿಗಳನ್ನು ನಡೆಸಲಾಗುತ್ತಿದೆ. ಆದರೆ, ಮಾನವೀಯತೆಯ ಮುಂದುವರಿಕೆಗೆ ಅಹಿಂಸೆಯೇ ಅತ್ಯುತ್ತಮ ಮಾರ್ಗ ಎಂದರು.

ಗರಿಷ್ಠ ಮುಖಬೆಲೆಯ ₹ 500 ಮತ್ತು ₹1,000 ನೋಟುಗಳ ನಿಷೇಧವನ್ನು ಖಂಡಿಸಿದ ಅವರು, ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ. 86ರಷ್ಟು ಹಣವನ್ನು ನಿಷೇಧಿಸುವ ಸಂದರ್ಭದಲ್ಲಿ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಅಲ್ಲದೇ, ಈ ವಿಷಯವನ್ನು ಸಚಿವ ಸಂಪುಟದ ಸಭೆಯಲ್ಲಾಗಲಿ ಅಥವಾ ಸಂಸತ್ತಿನಲ್ಲಾಗಲೀ ಪ್ರಸ್ತಾಪಿಸಿರಲಿಲ್ಲ ಎಂದು ದೂರಿದರು. ನೋಟುಗಳ ನಿಷೇಧದಿಂದಾಗಿಯೇ ದೇಶದ ಜಿಡಿಪಿಯಲ್ಲಿ ಶೇ. 2ರಷ್ಟು ಕುಸಿತವಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ತರಾತುರಿಯಲ್ಲಿ ಜಿಎಸ್‌ಟಿ ಜಾರಿಗೊಳಿಸಿರುವುದರಿಂದಾಗಿ ಭಾರೀ ನಷ್ಟವಾಗಿದೆ ಎಂದರು.

0

Leave a Reply

Your email address will not be published. Required fields are marked *