ಮಂದ್ಸೋರ್ ಭೇಟಿ ಹಿನ್ನೆಲೆ: ರಾಹುಲ್ ಗಾಂಧಿ ವಶಕ್ಕೆ ಪಡೆದ ಪೊಲೀಸರು

ಮಂದ್ಸೋರ್: ಗಲಭೆಪೀಡಿತ ಮಧ್ಯಪ್ರದೇಶದ ಮಂದ್ಸೋರ್ ಭೇಟಿ ವೇಳೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ವಶಕ್ಕೆ ಪಡೆದ ಮೂರು ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ. ಮುಂಜಾನೆ ಎಚ್ಚರಿಕೆ ನೀಡಿದಂತೆ ಪೊಲೀಸರು ಮಂದ್ಸೋರ್ ಭೇಟಿಯನ್ನು ತಡೆದಿದ್ದಾರೆ.

ಜೂನ್ 6ರಂದು ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಮಧ್ಯಾಹ್ನದ ಹೊತ್ತಿಗೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಗಲಭೆ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ಆರಂಭದಲ್ಲಿ ಗೋಲಿಬಾರ್ ನಡೆದಿಲ್ಲ ಎಂದಿದ್ದ ಗೃಹ ಸಚಿವ ಭೂಪೇಂದ್ರ ಸಿಂಗ್ ಇಂದು ಗೋಲಿಬಾರ್​ಗೆ 5 ರೈತರು ಬಲಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ನಿನ್ನೆ ಕೂಡ ಮೂರು ಜಿಲ್ಲೆಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರೆದಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ರಾಹುಲ್ ಗಾಂಧಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ಮತ್ತು ಸಾವಿಗೀಡಾದ ರೈತರ ಮನೆಗಳಿಗೆ ಸಾಂತ್ವನ ನೀಡುವ ಉದ್ದೇಶದಿಂದ ಭೇಟಿಯಾಗಲು ತೆರಳಿದ್ದರು.

ಮೋದಿಯವರು ರೈತರ ಸಾಲ ಮನ್ನಾ ಮಾಡುವುದಿಲ್ಲ. ಅವರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವುದಿಲ್ಲ. ಬೆಳೆ ಪರಿಹಾರವನ್ನೂ ನೀಡುವುದಿಲ್ಲ. ರೈತರ ಮೇಲೆ ಗೋಲಿಬಾರ್ ನಡೆಸುತ್ತಾರೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ನಾನು ಮೃತ ರೈತರ ಕುಟುಂಬಳನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಲು ಬಯಸಿದ್ದೆ. ಆದರೆ, ಯಾವುದೇ ಕಾರಣ ನೀಡದೆ ನನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಟವರು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಅವಕಾಶವಾದಿ ಮತ್ತು ಸಿನಿಕತನದ ರಾಜಕಾರಣ ಮಾಡುತ್ತಿದ್ದಾರೆ ಎಂದಿದೆ. ಅಲ್ಲದೇ, ರೈತರನ್ನು ರಾಜಕೀಯ ದಾಳವಾಗಿಸಿಕೊಂಡಿರುವುದು ದುರಾದೃಷ್ಟಕರ ಸಂಗತಿ ಎಂದಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ರೈತರ ನೈಜ ಪ್ರತಿಭಟನೆಯನ್ನು ರಾಜಕೀಯಗೊಳಿಸುತ್ತಿದೆ ಮತ್ತು ಅಪರಾಧೀಕರಿಸುತ್ತಿದೆ. ಶಿವರಾಜ್​​ಸಿಂಗ್ ರೈತ ಸ್ನೇಹಿ. ಮಧ್ಯಪ್ರದೇಶ ಸರ್ಕಾರ ಕೃಷಿ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮೆರೆದಿದೆ. ದೇಶದ ಬೆಳವಣಿಗೆಯಲ್ಲಿ ಶೇ. 20ರಷ್ಟು ಪಾಲು ಮಧ್ಯಪ್ರದೇಶದಿಂದ ಸಂದಾಯವಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭೆಯ ಸೋಲನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಬಿಜೆಪಿ ವಕ್ತಾರ ಜಿ ವಿ ಎಲ್ ನರಸಿಂಹ ರಾವ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *