ಮುಸ್ಲಿಮರು ಮಾಂಸ ಸೇವನೆ ಬಿಡಬೇಕು: ಆರ್​ಎಸ್​​ಎಸ್​ ನಾಯಕ

ನವದೆಹಲಿ: ಪ್ರವಾದಿ ಮಹಮದ್ ಅವರು ಮಾಂಸವನ್ನು ಎಂದಿಗೂ ಸೇವಿಸಿರಲಿಲ್ಲ. ಪ್ರವಾದಿ ಮತ್ತು ಅವರ ಕುಟುಂಬ ಮಾಂಸಾಹಾರವನ್ನು ಸೇವಿಸಿರಲಿಲ್ಲ. ಅಲ್ಲದೇ, ಮಾಂಸ ಸೇವನೆ ರೋಗ, ಹಾಲಿನ ಸೇವನೆ ಚಿಕಿತ್ಸೆ ಎಂದು ಅವರು ಹೇಳಿದ್ದರು ಎಂದು ಆರ್​​ಎಸ್​ಎಸ್​​ ಮುಖಂಡ ಇಂದ್ರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಮುಸ್ಲಿಮರು ಮಾಂಸ ಸೇವನೆಯನ್ನು ಕೈಬಿಡಬೇಕು ಎಂದು ಕರೆನೀಡಿದ್ದಾರೆ.

ನವದೆಹಲಿ ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇವರ ವಿರುದ್ಧ ಪ್ರತಿಭಟನೆ ನಡೆಸಿದರು. ಆರ್​ಎಸ್​​ಎಸ್​ ಮೂಲದ ಮುಸ್ಲಿಂ ರಾಷ್ಟ್ರೀಯ ಮಂಚ್​​ ಆಯೋಜಿಸಿದ್ದ ಇಫ್ತಿಯಾರ್ ಕೂಟಕ್ಕೆ ಇಂದ್ರೇಶ್ ಕುಮಾರ್ ಅವರಿಗೆ ಆಮಂತ್ರಣ ನೀಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ರಂಜಾನ್​​ ತಿಂಗಳಲ್ಲಿ ಗಿಡ ನೆಡಿ ಮತ್ತು ತಮ್ಮ ಮನೆಗಳಲ್ಲಿ ತುಳಸಿ ಗಿಡವನ್ನು ಬೆಳೆಸಿ ಎಂದು ಕೂಡ ಅವರು ಕರೆ ನೀಡಿದ್ದಾರೆ. ಈ ನಡುವೆ ಇಂದ್ರೇಶ್ ಕುಮಾರ್ ಅವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿರುವುದನ್ನು ವಿರೋಧಿಸಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಇಮ್ರಾನ್​ ಖಾನ್ ಕುಲಪತಿ ತಲತ್ ಅಹಮದ್ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ, ಇಂದ್ರೇಶ್ ಕುಮಾರ್ ಅನೇಕ ಸ್ಫೋಟ ಪ್ರಕರಣಗಳ ಆರೋಪಿ. ಅಂಥವರು ನಮ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಬಾರದು. ಆದ್ದರಿಂದ ಅವರ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಪೊಲೀಸರು ಮತ್ತು ಸೇನಾ ಪಡೆ ಜಾಮಿಯ ಆವರಣವನ್ನು ಪ್ರವೇಶಿಸಿದೆ. ಶಾಂತಿಯುತ ಪ್ರತಿಭಟನೆ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದೆಹಲಿ ಪೊಲೀಸರು ಸಕಾರಣವಿಲ್ಲದೇ. ಆರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂದು ಕಬೀರ್ ದಾಸ್ ಫೇಸ್​​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಸಿದ್ದಾರೆ.

ಇನ್ನು ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿನಿ ಸೇರಿ ಒಟ್ಟು ನಾಲ್ಕು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್​​ ಮಾಡಲಾಗಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಆದರೆ, ಪೊಲೀಸರು ಲಾಠಿಚಾರ್ಜ್​​ ಮಾಡಿರುವುದನ್ನು ನಿರಾಕರಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಕೂಡ ಸ್ಪಷ್ಟೀಕರಣ ನೀಡಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯ, ಭೋಪಾಲ್ ಮೈದಾನದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಈ ಸ್ಥಳವನ್ನು ಮುಸ್ಲಿಂ ರಾಷ್ಟ್ರೀಯ ಮಂಚ್​​ಗೆ ಬಾಡಿಗೆ ನೀಡಲಾಗಿದೆ. ಇದೇ ಸಂಘಟನೆ ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಈ ಘಟನೆಯಲ್ಲಿ ವಿಶ್ವವಿದ್ಯಾಲಯದ ಪಾತ್ರವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ಮೈದಾನವನ್ನು ಎಂಆರ್​ಎಂಗೆ ಬಾಡಿಗೆ ನೀಡಲಾಗಿದೆ. ಇದರಲ್ಲಿ ಎಂಆರ್​ಎಂ ಅಥವಾ ಯಾವುದೇ ವಿದ್ಯಾರ್ಥಿಗಳ ಪಾತ್ರವಿಲ್ಲ. ಅಲ್ಲಿ ನೆರೆದಿದ್ದವರೆಲ್ಲ ಸ್ಥಳೀಯರು ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *