ನವದೆಹಲಿ : ಸುಳ್ಳು ಜಾಹೀರಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ಕೆಂಗಣ್ಣಿಗೆ ಗುರಿಯಾಗಿದ್ದ ಬಾಬಾ ರಾಮದೇವ್ (Ramdev) ಮತ್ತು ಆಚಾರ್ಯ ಬಾಲಕೃಷ್ಣ (Acharya Balkrishna) ನ್ಯಾಯಾಲಯದ ಕ್ಷಮೆಯಾಚಿಸಿದ್ದಾರೆ. ಇನ್ನು ಮುಂದೆ ಸುಳ್ಳು ಜಾಹೀರಾತು ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಆಫಿಡೆವಿಟ್ ಸಲ್ಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ರಾಮದೇವ್ ಅವರು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದರು. ನ್ಯಾಯಾಲಯದ ಮುಂದೆ ಕುದ್ದು ಹಾಜರಾಗುವಂತೆಯೂ ಸೂಚನೆ ನೀಡಲಾಗಿತ್ತು.
ಈಗ ಕೆಲವು ತಿಂಗಳುಗಳ ಹಿಂದೆ ನ್ಯಾಯಾಲಯದ ತೀರ್ಪು ಬಂದಿದ್ದರೂ ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ತನ್ನ ಜಾಹೀರಾತುಗಳನ್ನು ನಿಲ್ಲಿಸಿರಲಿಲ್ಲ. ನ್ಯಾಯಾಲಯಕ್ಕೆ ಆಫಿಡೆವಿಟ್ ಸಲ್ಲಿಸಿರಲಿಲ್ಲ. ಇದನ್ನ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಎಚ್ಚರಿಕೆಯನ್ನು ನೀಡಿತ್ತು. ಇದಾದ ನಂತರ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಎಚ್ಚರಗೊಂಡು ಆಫಿಡೆವಿಟ್ ಸಲ್ಲಿಸಿದರು.
ತಾವು ಆಯುರ್ವೇದವನ್ನು ಪ್ರಚಾರ ಮಾಡುವ ಉದ್ದೇಶದಿಂದ ಈ ಜಾಹೀರಾತುಗಳನ್ನು ನೀಡಿದ್ದಾಗಿ ಅವರು ತಿಳಿಸಿದ್ದಾರೆ. ಇನ್ನು ಮುಂದು ಸುಳ್ಳು ಜಾಹೀರಾತು ನೀಡುವುದಿಲ್ಲ ಎಂಬ ಭರವಸೆಯನ್ನು ಅವರು ನ್ಯಾಯಾಲಯಕ್ಕೆ ನೀಡಿದ್ದಾರೆ.







