ಗಿಲ್ಬಿಟ್ – ಬಾಲ್ಟಿಸ್ತಾನ್ ಪ್ರದೇಶವನ್ನು ಚೀನಾಗೆ ಬಿಟ್ಟುಕೊಡಲಿದೆಯೇ ಪಾಕ್?

ಇಸ್ಲಮಾಬಾದ್: 70 ವರ್ಷಗಳ ಹಿಂದೆ ಭಾರತದಿಂದ ಕಿತ್ತುಕೊಂಡಿದ್ದ ಗಿಲ್ಬಿಟ್ – ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನ ಚೀನಾಗೆ ಮಾರಲು ಮುಂದಾಗಿದೆ. ಗಿಲ್ಬಿಟ್ – ಬಾಲ್ಟಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರಿಗರು ಪಾಕಿಸ್ತಾನದ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದಾರೆ. ಚೀನಾದ ಕೆಂಪು ಸೇನೆಗೆ ಈ ಪ್ರದೇಶವನ್ನು ಮಾರಲು ಪಾಕ್ ಸನ್ನದ್ಧವಾಗಿದೆ. ಉದ್ದೇಶಿತ ಚೀನಾ – ಪಾಕ್ ಆರ್ಥಿಕ ಕಾರಿಡಾರ್ ಯೋಜನೆಯನ್ನು ವಿರೋಧಿಸಿದ ಬಹುತೇಕರು ಕೊಲೆಯಾಗಿದ್ದಾರೆ ಅಥವಾ ಅಂಥವರನ್ನು ಬಂಧಿಸಲಾಗಿದೆ. ಅಲ್ಲದೇ, ಸಿಪಿಇಸಿ ಯೋಜನೆಯನ್ನು ಶತಾಯಗತಾಯ ಜಾರಿಗೆ ತರುವ ಉದ್ದೇಶದಿಂದ ಪಾಕಿಸ್ತಾನ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಸಿಪಿಇಸಿ ಯೋಜನೆಗಾಗಿ ಸಾವಿರಾರು ಜನರಿಗೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಈ ಕಠಿಣ ನಿಯಮದಿಂದಾಗಿ ಯಾರೊಬ್ಬರೂ ಉಸಿರೆತ್ತದಂಥ ಕ್ರಮಕ್ಕೆ ಪಾಕ್ ಮುಂದಾಗಿದೆ ಎಂದು ಗಿಲ್ಬಿಟ್ – ಬಾಲ್ಟಿಸ್ತಾನ್ ಥಿಂಕರ್ಸ್ ಫೋರಮ್​​ನ ಮುಖ್ಯಸ್ಥ ವಜಹತ್ ಹಸನ್ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಹಂತದಲ್ಲಿ ಚೀನಾ ಮತ್ತು ಪಾಕ್ ಸೇನಾಪಡೆಗಳು ಬಲವಂತವಾಗಿ ಜನರ ಒಡೆತನದ ಭೂಮಿಯನ್ನು ಕಬಳಿಸುವ ಸಾಧ್ಯತೆ ಇದೆ. ಭಾರತ – ಪಾಕ್ ವಿಭಜನೆಯ ವೇಳೆ ಪಾಕ್ ಈ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಿತ್ತು. ಚೀನಾ – ಪಾಕಿಸ್ತಾನದ ಸೇನಾನೆಲೆಗಳನ್ನು ಇಲ್ಲಿ ಸ್ಥಾಪಿಸಲಾಗುವುದು ಎಂದು ಬಲವರಿಸ್ತಾನ್ ನ್ಯಾಷನಲ್ ಫ್ರಂಟ್​​ನ ಮುಖ್ಯಸ್ಥ ಹಮೀದ್ ಖಾನ್ ಹೇಳಿದ್ದಾರೆ. ಅಲ್ಲದೇ, ಸಿಪಿಇಸಿ ಯೋಜನೆಯನ್ನು ಬೆಂಬಲಿಸುವ ಸಲುವಾಗಿ ಇಲ್ಲಿನ ಜನರ ಸಾಂವಿಧಾನಿಕ ಹಕ್ಕನ್ನು ಪಾಕಿಸ್ತಾನ ಮುಳುಗಿಸುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *