ಎಟಿಎಮ್​​ ಗೆ ಹೇಳಿ ಬೈ ಬೈ.. ಈಗ ಐಟಿಎಮ್​ ಬರಲಿದೆ

ನಾವು ಹಣ ಡ್ರಾ ಮಾಡಿಕೊಳ್ಳಬೇಕೆಂದರೆ ಎಟಿಎಮ್​​ ಗಳನ್ನ ಹುಡುಕಿಕೊಂಡು ಹೋಗಬೇಕು, ಎಟಿಎಮ್​​ ಸಿಕ್ಕರೂ ಅಲ್ಲಿ ಹನುಮನ ಬಾಲದಂತೆ ನಿಂತಿರುವ ಕ್ಯೂನಲ್ಲಿ ನಿಂತು ಹಣ ಡ್ರಾ ಮಾಡಿಕೊಳ್ಳಬೇಕು. ಇನ್ನು ಕೆಲವು ಎಟಿಎಮ್​​ಗಳ ಹೊರಗಂತು ಯಾವಾಗ ನೋಡಿದರು ಔಟ್​​​ ಆಫ್​​ ಸರ್ವಿಸ್​ ಅನ್ನೋ ಬೋರ್ಡ್​​​​ ಜೋತು ಬಿದ್ದಿರುತ್ತದೆ. ಆದರೆ ಈಗ​​​ ಬ್ಯಾಂಕಿಗ್ ಕ್ಷೇತ್ರವನ್ನು 24 ಗಂಟೆಯೂ ತೆರೆದಿರಲು ಒದಗಿಸುವ ವಿನೂತನ ಪ್ರಯತ್ನವನ್ನು ಅಳವಡಿಸಿಕೊಳ್ಳಲು ಬ್ಯಾಂಕ್‌ಗಳು ಚಿಂತನೆ ನಡೆಸಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಇಂಟರ್ಯಾಕ್ಟೀವ್‌ ಟೆಲ್ಲರ್‌ ಮಷಿನ್‌ಗಳನ್ನು ಅಳವಡಿಸಿಕೊಳ್ಳಲು ಬ್ಯಾಂಕ್‌ಗಳು ಮುಂದಾಗಿವೆ.

ಹೌದು, ಬ್ಯಾಂಕಿಂಗ್ ಕ್ಷೇತ್ರ ಕೂಡ ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುತ್ತಿದ್ದು, ಎಟಿಎಂಗಳಿಗೆ ಬದಲಾಗಿ ಐಟಿಎಂ ಮಷಿನ್‌ಗಳ ಮೂಲಕ ದಿನದ 24 ಗಂಟೆಯೂ ಶೇ 90ರಷ್ಟು ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಲು ಮುಂದೆ ಬಂದಿವೆ.

ಇಂಟರ್ಯಾಕ್ಟೀವ್​​ ಟೆಲ್ಲರ್​​​ ಮಷಿನ್​:

ಪ್ರಸ್ತುತ ಇರುವ ಎಟಿಎಮ್​​​​ಗಳ ಬದಲಾಗಿ ಬ್ಯಾಂಕ್ ಸಿಬ್ಬಂದಿ ಜೊತೆ ನೇರವಾಗಿ ವಿಡಿಯೊ ಸಂಪರ್ಕ ಸಾಧಿಸಬಹುದಾದ ಮತ್ತು ಫೋನ್‌ ಮೂಲಕವೂ ಮಾತನಾಡಿಸಿ ಸಮಸ್ಯೆಗಳು, ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಬಹುದಾದ ಫೀಚರ್ಸ್ ಹೊಂದಿರುವ ಈ ಮಷಿನ್‌ಗೆ ಇಂಟರ್ಯಾಕ್ಟೀವ್‌ ಟೆಲ್ಲರ್‌ ಮಷಿನ್ (ಐಟಿಎಂ) ಎಂದು ಹೆಸರಿಟ್ಟಿದ್ದಾರೆ.

ಸುಲಭವಾಗಿ ಉಪಯೋಗಿಸಬಹುದು:

ಬ್ಯಾಂಕ್‌ಗಳು ಪರಿಚಯಿಸುತ್ತಿರುವ ಈ ಐಟಿಎಂಗಳನ್ನು ಭವಿಷ್ಯದ ಬ್ಯಾಂಕ್‌ಗಳೆಂದೇ ಬಿಂಬಿಸಲಾಗುತ್ತಿದ್ದು, ಮೊಬೈಲ್ ವಹಿವಾಟುಗಳಿಗೂ ನೆರವಾಗುವಂಥ ಕ್ಯೂಆರ್ ಕೋಡ್‌ ಸೌಲಭ್ಯವೂ ಸಹ ಇದರಲ್ಲಿದೆ. ಇಷ್ಟು ಮಾತ್ರವಲ್ಲದೆ, ಬಯೊಮೆಟ್ರಿಕ್ ತಂತ್ರಜ್ಞಾನವನ್ನೂ ಅಳವಡಿಸಿರುವುದರಿಂದ ಬ್ಯಾಂಕ್‌ಗಳು ಗ್ರಾಹಕರನ್ನು ಸುಲಭವಾಗಿ ಗುರುತಿಸಲು ಸಾಧ್ಯವಿದೆ.

ನಿಮ್ಮ ಸಮಸ್ಯಗೆ ಐಟಿಎಮ್​​ ನಲ್ಲೆ ಪರಿಹಾರ:

ಐಟಿಎಂಗಳು ಬಳಕೆಗೆ ಬಂದರೆ, ಬ್ಯಾಂಕ್ ಖಾತೆ ಜೊತೆಗೆ ಸಂಪರ್ಕ ಕಲ್ಪಿಸಿರುವ ಆಧಾರ್ ಕಾರ್ಡ್‌, ಪ್ಯಾನ್ ಕಾರ್ಡ್‌ ಇತ್ಯಾದಿ ದಾಖಲೆಗಳನ್ನು ಒದಗಿಸಿ ಕೂಡಲೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ವಿಡಿಯೊ ಮಾನಿಟರ್ ಮುಂದೆ ನಿಮ್ಮ ದಾಖಲೆಗಳನ್ನು ಪ್ರದರ್ಶಿಸಿದರೆ ಸಾಕು ಬ್ಯಾಂಕ್ ಸಿಬ್ಬಂದಿ ಎಲ್ಲವನ್ನು ಪರಿಶೀಲಿಸಿ ನಿಮ್ಮ ಸಮಸ್ಯೆ ಪರಿಹರಿಸುತ್ತಾರೆ.

ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ:

ಭವಿಷ್ಯದ ಬ್ಯಾಂಕ್‌ ಎಂದು ಹೆಸರಾಗಿರುವ ಐಟಿಎಂಗಳ ಮುಖ್ಯ ಉಪಯೋಗವೆಂದರೆ ಬ್ಯಾಂಕ್ ವ್ಯವಹಾರಗಳ ಶೀಘ್ರ ವಹಿವಾಟು. ಬ್ಯಾಂಕ್‌ ಶಾಖೆಗಳಲ್ಲಿ ಕಾಯುವಷ್ಟು ಹೊತ್ತು ಇಲ್ಲಿ ಕಾಯುವ ಅಗತ್ಯವಿರುವುದಿಲ್ಲ. ಚೆಕ್‌, ನಗದು ಪಾವತಿ, ಹಿಂಪಡೆಯುವಿಕೆ ಇತ್ಯಾದಿ ಕೆಲಸಗಳನ್ನು ಬೇಗ ಮುಗಿಸಿಕೊಳ್ಳಬಹುದು. ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ ಕಳೆದರೆ ತಕ್ಷಣವೇ ಪರಿಹಾರ ಲಭ್ಯ.

ಸುರಕ್ಷಿತತೆ ಇರುತ್ತದೆ:

ಐಟಿಎಂ ಕೇಂದ್ರಗಳ ಜೊತೆ ಬ್ಯಾಂಕ್‌ ಸಿಬ್ಬಂದಿ ಸದಾ ಸಂಪರ್ಕದಲ್ಲಿ ಇರುವುದರಿಂದ ಇಲ್ಲಿರುವ ಹಣ ಹೆಚ್ಚು ಸುರಕ್ಷಿತವಾಗಿರುತ್ತದೆ. ಹಾಗಾಗಿ, ಎಟಿಎಂಗಳಿಗೆ ಕನ್ನ ಹಾಕುವಂತೆ ಐಟಿಎಂಗಳಿಗೆ ಕನ್ನ ಹಾಕಲು ಸಾಧ್ಯವಿಲ್ಲ. ಇದಲ್ಲದೆ, ಐಟಿಎಂಗಳಿಂದ ಬ್ಯಾಂಕ್‌ಗಳ ನಿರ್ವಹಣಾ ವೆಚ್ಚ ಕಡಿಮೆಯಾಗಿ ಗುಣಮಟ್ಟದ ಸೇವೆ ಒದಗಿಸಲು ನೆರವಾಗಲಿವೆ ಎಂದು ಹೇಳಲಾಗುತ್ತಿದೆ.

0

Leave a Reply

Your email address will not be published. Required fields are marked *