ಕಲುಷಿತ ನೀರು: ಉತ್ತರಪ್ರದೇಶ ಸರ್ಕಾರಕ್ಕೆ ಎನ್​​ಜಿಟಿ ನೊಟೀಸ್

ನವದೆಹಲಿ: ಅಂತರ್ಜಲವನ್ನು ಕಲುಷಿತಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೊಟೀಸ್ ನೀಡಿದೆ. ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಂಭಲ್​​ನ ಜಿಲ್ಲಾ ಮ್ಯಾಜಿಸ್ಟ್ರೇಟ್​​ಗೆ ಕೂಡ ನೊಟೀಸ್ ನೀಡಲಾಗಿದೆ. ಕುಡಿಯುವ ನೀರು ದೊಡ್ಡ ಪ್ರಮಾಣದಲ್ಲಿ ಕಲುಷಿತಗೊಂಡಿರುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಎನ್​​ಜಿಟಿ, ಮುಂದಿನ ವಿಚಾರಣೆಯ ಒಳಗೆ ಈ ಕುರಿತು ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಕಲುಷಿತ ನೀರು ಸೇವನೆಯಿಂದಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಕೂಡ ಎನ್​ಜಿಟಿ ಅಭಿಪ್ರಾಯಪಟ್ಟಿದೆ. ಈ ಕುರಿತು ದೂರುದಾರರು ಅತ್ಯಂತ ಕಲುಷಿತ ನೀರು ಸೇವಿಸುತ್ತಿರುವ ಮಕ್ಕಳ ಛಾಯಾ ಚಿತ್ರಗಳನ್ನು ಒದಗಿಸಿದ್ದರು. ಅಲ್ಲದೇ, ಈ ನೀರುಗಳಲ್ಲಿ ಕ್ರಿಮಿಗಳಿರುವುದಕ್ಕೂ ಸಾಕ್ಷಿ ಒದಗಿಸಿದ್ದರು.

ಕಳೆದ ಸೋಮವಾರ ಉತ್ತರಪ್ರದೇಶದ ಗಾಜಿಯಾಬಾದ್, ಮೀರತ್, ಮುಜಾಫರ್​​ನಗರ್, ಶಾಮ್ಲಿ, ಭಾಗ್ಪತ್ ಮತ್ತು ಸಹರನ್​​ಪುರ ಜಿಲ್ಲೆಗಳಲ್ಲಿ ಸ್ವಚ್ಛ ಕುಡಿಯುವ ನೀರು ಒದಗಿಸುವಂತೆ ಜಲ ನಿಗಮಕ್ಕೆ ಎನ್​​ಜಿಟಿ ನೊಟೀಸ್ ಜಾರಿಗೊಳಿಸಿತ್ತು.

ಘಾಜಿಯಾಬಾದ್, ಮೀರತ್, ಮುಜಾಫರ್​​ನಗರ, ಶಾಮ್ಲಿ, ಭಾಗ್ಪತ್ ಮತ್ತು ಸಹರನ್​ಪುರ ಜಿಲ್ಲೆಗಳಲ್ಲಿ ಬಲವಂತವಾಗಿ ಕಲುಷಿತ ನೀರನ್ನು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​​ಗಳು, ಭಾಗ್ಪತ್​​ನ ವೈದ್ಯಕೀಯ ಅಧಿಕಾರಿಗಳು ಮತ್ತು ಜಲನಿಗಮದ ಇಂಜಿನಿಯರ್​ಗಳಿಗೆ ಹಸಿರು ನ್ಯಾಯ ಮಂಡಳಿ ಸಮನ್ಸ್​​ ನೀಡಿತ್ತು.

ನಿವೃತ್ತ ವಿಜ್ಞಾನಿ ಡಾ. ಚಂದ್ರ ವೀರ್ ಸಿಂಗ್ ಅಂತರ್ಜಲ ಸಂಪೂರ್ಣವಾಗಿ ಕಲುಷಿತಗೊಂಡಿದೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಬಗೆಗೆ ಕಾಳಜಿ ವಹಿಸದೆ, ಅವರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಮತ್ತು ಜಲ ನಿಗಮವನ್ನು ಹಸಿರು ನ್ಯಾಯ ಮಂಡಳಿ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ತನಿಖೆ ನಡೆಸುವಂತೆ ಸಮಿತಿಯೊಂದನ್ನೂ ಎನ್​​ಜಿಟಿ ನೇಮಿಸಿದೆ. ಮುಖ್ಯ ಕಾರ್ಯದರ್ಶಿ, ಮುಖ್ಯಸ್ಥ ಮತ್ತು ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ, ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದು, ಕುಡಿಯುವ ನೀರನ್ನು ಪರಿಶೀಲಿಸುವಂತೆ ಸೂಚಿಸಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

 

0

Leave a Reply

Your email address will not be published. Required fields are marked *