ಕೇರಳ: ಗೋ ಮಾರಾಟ, ಸಾಗಣೆ ಮತ್ತು ಹತ್ಯೆ ಕುರಿತು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ನೂತನ ಅಧಿಸೂಚನೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ಅಧಿಸೂಚನೆ ಸಂವಿಧಾನದ 14, 19 ಮತ್ತು 21ನೇ ವಿಧಿಯ ಉಲ್ಲಂಘನೆ ಎಂದು ದೂರುದಾರರ ವಾದಿಸಿದರು. ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ್ಯಾ. ಪಿ ಬಿ ಸುರೇಶ್ ಕುಮಾರ್, ಗೋ ಮಾಂಸ ಸೇವನೆ, ಗೋಹತ್ಯೆ ಮತ್ತು ದನಗಳ ಮಾರಾಟವನ್ನು ಕೇಂದ್ರ ಸರ್ಕಾರ ನಿಷೇಧಿಸಿಲ್ಲ ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ತಮ್ಮ ಅರ್ಜಿಯನ್ನು ವಜಾಗೊಳಿಸುವ ಸಾಧ್ಯತೆ ಇರುವುದರಿಂದ ದೂರುದಾರರು ಅರ್ಜಿಯನ್ನು ಹಿಂತೆಗೆದುಕೊಂಡರು.
ಕೇರಳ ಯುವ ಕಾಂಗ್ರೆಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಜಿ ಸುನಿಲ್ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹಸುಗಳ ಸಂರಕ್ಷಣೆ, ರಕ್ಷಣೆ ಮತ್ತು ಸುಧಾರಣೆ ಇತ್ಯಾದಿ ವಿಷಯಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತವೆ. ಈ ವಿಷಯಗಳಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸುವಂತಿಲ್ಲ ಎಂದು ಕೂಡ ಅವರು ವಾದಿಸಿದ್ದರು. ಪ್ರಾಣಿಗಳ ರಕ್ಷಣೆ ಕಾಯ್ದೆ(ಪಿಸಿಎಎ) ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡುತ್ತದೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದರು.
ಇಂದು ಮುಂಜಾನೆ ಅರ್ಜಿಯ ವಿಚಾರಣೆಗೂ ಮುನ್ನ ಕೇರಳ ಸಿಎಂ ಪಿಣರಾಯಿ ವಿಜಯನ್ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ವಿಷಯದ ಕುರಿತು ಪತ್ರ ಬರೆಯುವುದಾಗಿ ಹೇಳಿದ್ದರು. ಅಲ್ಲದೇ, ಅಭಿಪ್ರಾಯ ಸಂಗ್ರಹಿಸುವುದಾಗಿ ಕೂಡ ಹೇಳಿದ್ದರು. ಕೇರಳದಲ್ಲಿ ಗೋಮಾಂಸಕ್ಕೆ ಸಂಬಂಧಿಸಿದಂತೆ 6,000 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ವಹಿವಾಟು ನಡೆಯುತ್ತದೆ. ಈ ಉದ್ಯಮವನ್ನು ಲಕ್ಷಾಂತರ ಜನ ಅವಲಂಬಿಸಿದ್ದಾರೆ ಎಂದು ಕೂಡ ಅವರು ಹೇಳಿದ್ದರು.
ಪ್ರಾಣಿ ರಕ್ಷಣೆ ಕಾಯ್ದೆಗೆ ಮೇ 23ರಂದು ಕೇಂದ್ರ ಸರ್ಕಾರ ತಿದ್ದುಪಡಿ ತಂದಿತ್ತು. ನೂತನ ನಿಯಮದ ಪ್ರಕಾರ, ಎತ್ತು, ಕರು, ಹಸು, ಎಮ್ಮೆ ಮತ್ತು ಒಂಟೆಗಳ ಮಾರಾಟಕ್ಕೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಮಾರುಕಟ್ಟೆಯಲ್ಲಿ ಮಾರಾಟ ಮತ್ತು ಕೊಳ್ಳುವುದಕ್ಕೆ ಕೂಡ ಅನೇಕ ನಿಯಮಗಳನ್ನು ಅನುಸರಿಸಬೇಕು ಎಂದು ಅಧಿಸೂಚನೆ ಹೊರಡಿಸಲಾಗಿದೆ.
ಅಲ್ಲದೇ, ಕಸಾಯಿಖಾನೆಗಳಿಗೆ ಹಸುಗಳನ್ನು ಮಾರುವಂತಿಲ್ಲ ಹಾಗೂ ರೈತರಿಗೆ ಮಾತ್ರ ಹಸುಗಳನ್ನು ಮಾರಾಟ ಮಾಡಬೇಕು ಎಂಬ ನಿಯಮವನ್ನು ರೂಪಿಸಿತ್ತು. ನಂತರ ಉಂಟಾಗಿದ್ದ ಗೊಂದಲ ಪರಿಹರಿಸಲು ಮುಂದಾಗಿದ್ದ ಕೇಂದ್ರ ಸರ್ಕಾರ, ದನಗಳ ಫಾರ್ಮ್ಗಳಿಂದ ಕಸಾಯಿಖಾನೆಗಳ ಮಾಲೀಕರು ದನಗಳನ್ನು ಕೊಳ್ಳಬಹುದು ಎಂದು ಸ್ಪಷ್ಟೀಕರಣ ನೀಡಿತ್ತು.
ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ