ಯುಪಿಎ ಅವಧಿಯ ಲಾಭವನ್ನು ಎನ್​ಡಿಎ ಪಡೆಯುತ್ತಿದೆ: ಸೋನಿಯಾ ಗಾಂಧಿ

ನವದೆಹಲಿ: ಯುಪಿಎ ಅವಧಿಯ ಕಾರ್ಯಕ್ರಮಗಳ ಲಾಭವನ್ನು ಎನ್​ಡಿಎ ಸರ್ಕಾರ ಪಡೆಯುತ್ತಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ನೇತೃತ್ವದ ಯುಪಿಎ ಸರ್ಕಾರ ಆರಂಭಿಸಿದ್ದ ಯೋಜನೆಗಳನ್ನು ತನ್ನ ಯೋಜನೆಗಳು ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧವನ್ನು ಖಂಡಿಸಿದ ಅವರು, ನೋಟು ನಿಷೇಧವನ್ನು ಯಶಸ್ವಿ ನಿರ್ಧಾರ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಇದುವರೆಗೆ ನೋಟು ನಿಷೇಧದ ನಂತರ ಚಲಾವಣೆಯಲ್ಲಿದ್ದ ಎಷ್ಟು ಪ್ರಮಾಣದ ಹಣ ವಿನಿಮಯವಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ ಎಂದರು. ಅಲ್ಲದೇ, ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಜಿಡಿಪಿ ಪ್ರಗತಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದಂತೆ ಆರ್ಥಿಕ ಬೆಳವಣಿಗೆಯ ಮೇಲೆ ನೋಟ್ ಬ್ಯಾನ್ ನಿರ್ಧಾರ ವ್ಯತಿರಿಕ್ತ ಪರಿಣಾಮ ಬೀರಿರುವುದನ್ನು ಸಾಬೀತುಪಡಿಸಿದೆ ಎಂದರು.

ಮೇಕ್ ಇನ್ ಇಂಡಿಯಾ ಅಭಿಯಾನ ಕುರಿತು ಪ್ರತಿಕ್ರಿಯಿಸಿದ ಅವರು, ಹೊಸದಾಗಿ ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ಆಕರ್ಷಿಸುವಲ್ಲಿ ಕೂಡ ಕೇಂದ್ರ ಸರ್ಕಾರ ಸೋತಿದೆ. ಈ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಹಾಗೂ ದೇಶದಾದ್ಯಂತ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಮಹಿಳೆಯರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಶೋಷಿತರು ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು 2019ರವರೆಗೆ ಪೂರೈಸಲು ಸಾಧ್ಯವಿಲ್ಲ. ಈಗ 2022ರ ಕುರಿತು ಬಿಜೆಪಿ ಮಾತನಾಡತೊಡಗಿದೆ ಎಂದು ಕಿಡಿಕಾರಿದರು.

ದನಕರುಗಳ ಸಾಗಣೆ ಮತ್ತು ಮಾರಾಟದ ಕುರಿತ ಕೇಂದ್ರ ಸರ್ಕಾರದ ನೂತನ ನೀತಿಯ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ಜನರ ಜೀವನ ಮತ್ತು ಆಹಾರದ ಹವ್ಯಾಸಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ತನ್ನ ಬಲವನ್ನು ಭಿನ್ನ ಧ್ವನಿಗಳನ್ನು ಹತ್ತಿಕ್ಕಲು ಬಳಸುತ್ತಿದೆ ಎಂದರು.

ಎನ್​ಡಿಎ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಸರ್ಕಾರದ ಹಣವನ್ನು ಉಪಯೋಗಿಸಿಕೊಂಡು ಬಿಜೆಪಿ ಸಂಭ್ರಮ ಆಚರಿಸುತ್ತಿದೆ. ಆದರೆ, ಈ ಮೂರು ವರ್ಷಗಳು ದೇಶದ ಜನರ ಭ್ರಮನಿರಸನದ ವರ್ಷಗಳು ಎಂದು ಸಂಸದ ಗುಲಾಂ ನಬಿ ಆಜಾದ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಈ ಅವಧಿಯಲ್ಲಿ ಭಯ ಮತ್ತು ಬೆದರಿಕೆಯನ್ನು ಮೋದಿ ಸರ್ಕಾರ ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *