ಬೆಂಗಳೂರು : ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಬೆಂಗಳೂರು ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.
ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಈ ಬಗ್ಗೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದರು.

ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್ ಮಾತನಾಡಿ, ಧರ್ಮ ಪ್ರಚಾರಕ್ಕಾಗಿ ಈ ನಾಡಿಗೆ ಬಂದಿದ್ದ ಹರ್ಮನ್ ಫೆಡ್ರಿಕ್ ಮೋಗ್ಲಿಂಗ್ ಜುಲೈ 01, 1843 ರಂದು ಪ್ರಾರಂಭಿಸಿದ ಕನ್ನಡದ ಮೊಟ್ಟ ಮೊದಲ ‘ಮಂಗಳೂರು ಸಮಾಚಾರ ಪತ್ರಿಕೆ’ ಯು ನಾಲ್ಕು ಪುಟದಿಂದ ಪ್ರಾರಂಭವಾಗಿದ್ದು, ಸುಳ್ಳು ಸುದ್ದಿ ಪ್ರಕಟಿಸಬಾರದು ಎಂಬ ಉದ್ದೇಶವನ್ನು ಹೊಂದಿತ್ತು. 179 ವರ್ಷಗಳಲ್ಲಿ ಕನ್ನಡ ಪತ್ರಿಕೆಗಳು ಬದಲಾಗಿವೆ. ಈಗ ಸಾಮಜಿಕ ಜಾಲ ತಾಣ, ಕೃತಕ ಬುದ್ದಿಮತ್ತೆ ಹುಟ್ಟಿಕೊಂಡಿದ್ದು, ಕನ್ನಡ ಪತ್ರಿಕೋದ್ಯಮ ಚಿಂತಾಜನಕ ಸ್ಥಿತಿಯಲ್ಲಿದೆ. ಪತ್ರಕರ್ತರು ಜನರಿಗೆ ಸಕಾರತ್ಮಕ ಸುದ್ದಿಗಳನ್ನು ತಲುಪಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅವರು ಉಪಸ್ಥಿತರಿದ್ದರು.







