ಉತ್ತರ-ದಕ್ಷಿಣ ಒಳನಾಡಿನಲ್ಲಿ ಮುಂಗಾರು

ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಎರಡು ದಿನದ ಹಿಂದೆಯೇ ಮುಂಗಾರು ಪ್ರವೇಶಿಸಿತ್ತು. ಜೂನ್ 7 ರಿಂದ ವರುಣ ದಕ್ಷಿಣ ಒಳನಾಡಿನ ಎಲ್ಲೆಡೆ ತನ್ನ ಕೃಪೆ ತೋರಿದ್ದಾನೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ, ಬೀದರ್ ಜಿಲ್ಲೆಯ ಹುಮ್ನಾಬಾದ್, ಕಲಬುರಗಿ ಜಿಲ್ಲೆಯ ಅಫ್ಜಲ್ ಪುರ, ಕಲ್ಗಿ, ಕೋಲಾರ ಜಿಲ್ಲೆಯ ರಾಯಲಪಡು, ಮಂಗಳೂರು, ಉಡುಪಿ ಜಿಲ್ಲೆಯ ಕೋಟಾ, ಕೊಪ್ಪಳ, ಬಾಗಲಕೋಟೆ ಜಿಲ್ಲೆಯ ಇಳಕಲ್, ಯಾದಗಿರಿ ಜಿಲ್ಲೆಯ ಸೈದಾಪೂರ್, ಬಳ್ಳಾರಿ ಜಿಲ್ಲೆಯ ಕುರುಗೋಡಿನಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದೆ. ಶಿವಮೊಗ್ಗ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿಯೂ ಮಳೆಯಾಗುತ್ತಿದೆ. ಜೂನ್ 7 ರಂದು ರಾಜ್ಯದ ರಾಜಧಾನಿ ಬೆಂಗಳೂರಿಗೂ ವರುಣನ ಪ್ರವೇಶವಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಅತಿಯಾದ ಬಿಸಿಲಿನಿಂದ ಬಳಲಿದ್ದ ಜನತೆಗೆ ವರುಣನ ಆಗಮನ ಖುಷಿ ತಂದಿದೆ. ಎಲ್ಲೆಡೆ ಆಹ್ಲಾದಕರ ವಾತಾವರಣವಿದೆ.  ಈ ಬಾರಿ ರಾಜ್ಯದಲ್ಲಿ ಮುಂಗಾರುಮಳೆ ಕೊರತೆ ಆಗದು. ಇದು ಹವಾಮಾನ ಇಲಾಖೆ ತಜ್ಞರ ಭರವಸೆಯ ಮಾತು. ರಾಷ್ಟ್ರದಲ್ಲಿ ಜೂನ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಶೇಕಡ 98ರಷ್ಟು ಮಳೆ ಆಗಲಿದೆ. ದಕ್ಷಿಣ ಭಾರತದಲ್ಲಿ ಶೇಕಡ 99 ರಷ್ಟು ಮಳೆಯಾಗಲಿದೆ.

ಮಧ್ಯಭಾರತದಲ್ಲಿ ಶೇಕಡ 100ರಷ್ಟು ಮಳೆ ಬೀಳಲಿದೆ. ಜೂನ್ ನಿಂದ ಸೆಪ್ಟೆಂಬರ್ ತನಕ ಮುಂಗಾರುಮಳೆಗೆ ಪೂರಕವಾದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾಣ ತಜ್ಞರು ಹೇಳಿದ್ದಾರೆ. ಜುಲೈನಲ್ಲಿ ಮುಂಗಾರು ಹಂಗಾಮಿನ ವಾಡಿಕೆಯ ಶೇಕಡ 96ರಷ್ಟು, ಆಗಸ್ಟ್ ನಲ್ಲಿ ವಾಡಿಕೆ ಪ್ರಮಾಣದ ಶೇಕಡ 98ರಷ್ಟು ಮಳೆ ಬೀಳಲಿದೆ. ನಾಲ್ಕು ದಿನದ ಹಿಂದೆಯೇ ರಾಜ್ಯದ ದಕ್ಷಿಣ ಒಳನಾಡಿಗೆ ಮುಂಗಾರು ಪ್ರವೇಶವಾಗಬೇಕಿತ್ತು. ಆದರೆ ಅರಬ್ಬಿ ಸಾಗರದ ಕೆಲವು ಭಾಗಗಳಲ್ಲಿ ಕಡಿಮೆ ಪ್ರಮಾಣದ ಗಾಳಿ ಒತ್ತಡ ಇದ್ದ ಕಾರಣ ಮುಂಗಾರು ಮಾರುತಗಳು ಸ್ಥಗಿತಗೊಂಡಿದ್ದವು.

ಈಗ ಗಾಳಿ ಪ್ರಮಾಣ ಸಾಮಾನ್ಯ ಸ್ಥಿತಿಗೆ ಮರಳಿರುವುದರಿಂದ ಮುಂಗಾರು ಮಳೆ ನೋಡಗಳು ವೇಗ ಪಡೆದುಕೊಂಡಿವೆ. ಇದರಿಂದಾಗಿ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಆರಂಭಗೊಂಡಿದೆ. ಈ ಬಾರಿ ರಾಜ್ಯದ ಕೆಲವೆಡೆ ಮುಂಗಾರುಪೂರ್ವ ಮಳೆ ಉತ್ತಮವಾಗಿ ಆಗಿತ್ತು. ಇದರಿಂದ ಆ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾಗಿತ್ತು. ಈಗ ಎಲ್ಲೆಡೆ ಮುಂಗಾರು ಮಳೆ ಆಗುತ್ತಿದೆ. ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ವಿವಿಧ ಬೆಳೆಗಳ ಬಿತ್ತನೆ-ನಾಟಿಗೆ ರೈತರು ಸಜ್ಜಾಗಿದ್ದಾರೆ.
ಕುಮಾರ ರೈತ

0

Leave a Reply

Your email address will not be published. Required fields are marked *