ಮೋದಿ ರಷ್ಯಾ ಭೇಟಿ: ಅಣು ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ

ಸೇಂಟ್ ಪೀಟರ್ಸ್​ ಬರ್ಗ್​​: ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕು ರಾಷ್ಟ್ರಗಳ ವಿದೇಶ ಪ್ರವಾಸದ ಪೈಕಿ ನಾಳಿನ ರಷ್ಯಾ ಭೇಟಿ ವೇಳೆ ಮಹತ್ವದ ಅಣು ವಿದ್ಯುತ್ ಸ್ಥಾವರದ ವಿಚಾರನ್ನು ಪ್ರಸ್ತಾಪಿಸಲು ವೇದಿಕೆ ಸಿದ್ಧವಾಗಿದೆ. ಭಾರತ – ರಷ್ಯಾ ನಡುವೆ ವಾರ್ಷಿಕ ಸಭೆ ನಡೆಯಲಿದ್ದು, ಈವೇಳೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಇನ್ನು ನರೇಂದ್ರ ಮೋದಿಯವರಿಗೆ ರಷ್ಯಾ ಅಧ್ಯಕ್ಷ್ ವ್ಲಾಡಿಮಿರ್ ಪುಟಿನ್ ನಾಳೆ ಪ್ರಧಾನಿಯವರಿಗೆ ಔತಣ ಕೂಟ ಏರ್ಪಡಿಸಿದ್ದಾರೆ.

ರಷ್ಯಾ ನೆರವಿನೊಂದಿಗೆ ದೇಶದಲ್ಲಿ ಬೃಹತ್ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಕುರಿತು ಮಹತ್ವದ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ. ಇನ್ನು ಭೇಟಿ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ, ಐತಿಹಾಸಿಕ ಸೇಂಟ್ ಪೀಟರ್ಸ್​ಬರ್ಗ್​​ ತಲುಪಿದ್ದೇನೆ. ದ್ವಿಪಕ್ಷೀಯ ಸಂಬಂಧದ ಬೆಸುಗೆಯ ವಿಷಯದಲ್ಲಿ ಈ ಭೇಟಿ ಫಲಪ್ರದವಾಗುವ ವಿಶ್ವಾಸವಿದೆ ಎಂದಿದ್ದಾರೆ.

ಭೇಟಿಯ ಕಡೆಯ ಕ್ಷಣಗಳಲ್ಲಿ ತಮಿಳುನಾಡಿನ ಕೂಡಂಕುಳಂನ 5 ಮತ್ತು 6ನೇ ಅಣು ವಿದ್ಯುತ್ ಸ್ಥಾವರಗಳ ಕುರಿತ ಒಪ್ಪಂದದ ಅನುವಾದದ ಕಾರ್ಯದಲ್ಲಿ ಭಾರತೀಯ ಅಧಿಕಾರಿಗಳು ನಿರತರಾಗಿದ್ದಾರೆ.

ರಿಯಾಕ್ಟರ್​​ಗಳನ್ನು ಭಾರತೀಯ ಅಣು ವಿದ್ಯುತ್ ನಿಗಮ(ಎನ್​​ಪಿಸಿಐಎಲ್​) ಮತ್ತು ರಷ್ಯಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಅಟೊಮಸ್ಟ್ರೊಯೆಕ್ಸ್ಪೋರ್ಟ್​​ ಕಂಪನಿ ಸಹಯೋಗದಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ.

ಈ ವೇಳೆ ವಿಜ್ಞಾನ – ತಂತ್ರಜ್ಞಾನ, ರೈಲು ಮಾರ್ಗ, ಸಾಂಸ್ಕೃತಿಕ ವಿನಿಮಯ, ವ್ಯಾಪಾರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 12 ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಈ ಸಮಯದಲ್ಲಿ ಎರಡೂ ದೇಶಗಳ ಖಾಸಗಿ ಉದ್ಯಮಿಗಳು ಕೂಡ ಭಾಗವಹಿಸಲಿದ್ದಾರೆ. ಅಲ್ಲದೇ, ಮೋದಿ ಮತ್ತು ಪುಟಿನ್ ಅವರು ಜಂಟಿ ಹೇಳಿಕೆ ನೀಡಲಿದ್ದಾರೆ.

ಅಣು ಒಪ್ಪಂದಕ್ಕೆ ಸಹಿ ಹಾಕಿದಲ್ಲಿ ಭಾರತ ವಿದ್ಯುತ್ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಇಟ್ಟಂತಾಗುತ್ತದೆ. ಕಳೆದ ಅಕ್ಟೋಬರ್​ನಲ್ಲಿ ಗೋವಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆಯಲ್ಲಿ ಕೂಡ ಈ ಕುರಿತು ಚರ್ಚಿಸಲಾಗಿತ್ತು. 8 ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಈ ಕುರಿತು ಚರ್ಚೆ ನಡೆಯಲಿದೆ.

ಸದ್ಯಕ್ಕೆ 22 ನ್ಯೂಕ್ಲಿಯರ್ ರಿಯಾಕ್ಟರ್​ಗಳಿಂದ 6780 ಮೆಘಾವ್ಯಾಟ್ ಉತ್ಪಾದನೆಯಾಗುತ್ತಿದೆ. ಅಣು ಒಪ್ಪಂದ ಅಂತಿಮವಾದಲ್ಲಿ ಎರಡೂ ಘಟಕಗಳಿಂದ 1,000 ಮೆಘಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ.

ಅಕ್ಟೋಬರ್ 2015ರಲ್ಲಿ ನೀಡಿದ ಜಂಟಿ ಹೇಳಿಕೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಅಣು ಒಪ್ಪಂದಕ್ಕೆ ಸಹಿ ಹಾಕುವ ಭರವಸೆ ವ್ಯಕ್ತವಾಗಿತ್ತು. ಅಂತರ್​ ಸಚಿವಾಲಯಗಳ ಚರ್ಚೆಯ ನಂತರ ಯೋಜನೆಯ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಈ ಕುರಿತ ಕೆಲವು ನಿರ್ಬಂಧಗಳ ವಿಷಯದಲ್ಲಿ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇಬ್ಬರೂ ನಾಯಕರ ನಡುವೆ ಸಾಕಷ್ಟು ಹೊಂದಾಣಿಕೆ ಏರ್ಪಟ್ಟಿದೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಪಂಕಜ್ ಸರನ್ ಹೇಳಿದ್ದಾರೆ. ಇಬ್ಬರೂ ನಾಯಕರು ದ್ವಿಪಕ್ಷೀಯ ಮಾತುಕತೆಯ ವೇಳೆ ಭವಿಷ್ಯದ ನೀಲನಕ್ಷೆಯನ್ನು ಸಿದ್ಧಗೊಳಿಸಲಿದ್ದಾರೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಚೀನಾ ಮತ್ತು ಪಾಕಿಸ್ತಾನದೊಂದಿಗೆ ರಷ್ಯಾ ಆರ್ಥಿಕ ಮತ್ತು ರಾಜಕೀಯ ಸಂಬಂಧಗಳನ್ನು ಬೆಸೆದ ಪರಿಣಾಮದಿಂದಾಗಿ ಉಭಯ ದೇಶಗಳ ಪಾರಂಪರಿಕ ಬೆಸುಗೆಯಲ್ಲಿ ನಿರ್ಣಾಯಕವಾದ ಬಿರುಕು ಮೂಡಿತ್ತು. ಪಾಕಿಸ್ತಾನದೊಂದಿಗೆ ರಷ್ಯಾ ಮುಕ್ತ ಒಪ್ಪಂದಕ್ಕೂ ಭಾರತಕ್ಕೂ ಸಂಬಂಧವಿಲ್ಲ ಎಂದು ಕೂಡ ಹೇಳಲಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *