ಬಾಬ್ರಿ ಮಸೀದಿ ಧ್ವಂಸಕ್ಕೆ 25: ಚುನಾವಣೆಯ ಪ್ರಚಾರದಲ್ಲಿ ಧ್ವಂಸ, ತ್ರಿವಳಿ ವಿಷಯ ಪ್ರಸ್ತಾಪಿಸಿದ ಮೋದಿ

ಗಾಂಧಿನಗರ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಎಡಪಕ್ಷಗಳು ಕರಾಳ ದಿನವನ್ನು ಆಚರಿಸಿದರೆ, ಸಂಘ ಪರಿವಾರದ ಬೆಂಬಲಿಗ ಕೆಲ ಸಂಘಟನೆಗಳು ಶೌರ್ಯ ದಿನಕ್ಕೆ ಕರೆನೀಡಿದ್ದವು. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಬಿಗಿ ಬಂದೋಬಸ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಈ ನಡುವೆ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ, 2019ರ ಲೋಕಸಭೆ ಚುನಾವಣೆವರೆಗೆ ವಿಚಾರಣೆಯನ್ನು ಮುಂದೂಡಿ ಎಂದು ಮನವಿ ಮಾಡಿದ್ದ ವಕೀಲ ಕಪಿಲ್ ಸಿಬಲ್ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ರಾಮ ಮಂದಿರ ವಿಚಾರಕ್ಕೂ 2019ರ ಚುನಾವಣೆಗೂ ಸಂಬಂಧ ಕಲ್ಪಿಸುವುದು ಏಕೆ? ಎಂದು ಪ್ರಶ್ನಿಸಿದ ಅವರು, ವಿವಾದದ ಕುರಿತು ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿದೆ. ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ ಮುಸಲ್ಮಾನ ಸಮಾಜದ ಪರವಾಗಿ ವಾದಿಸಲಿ ಅಥವಾ ಬಾಬ್ರಿ ಮಸೀದಿ ಪರವಾಗಿ ವಾದಿಸಲಿ. ನಮಗೆ ಯಾವುದೇ ವಿರೋಧವಿಲ್ಲ. ಆದರೆ, ಈ ವಿಷಯವನ್ನು ಲೋಕಸಭೆ ವಿಚಾರಣೆವರೆಗೆ ನಡೆಸಬೇಡಿ ಎನ್ನುವುದು ಯಾಕೆ? ಇದರ ಹಿಂದಿನ ರಾಜಕಾರಣವನ್ನು ನೀವೇ ಅರಿಯಿರಿ ಎಂದು ಜನರಿಗೆ ಕರೆ ನೀಡಿದರು.

ಇನ್ನು ತಲಾಖ್ ಕುರಿತು ಪ್ರತಿಕ್ರಿಯಿಸಿದ ಅವರು, ತ್ರಿವಳಿ ತಲಾಖ್ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮೌನವಾಗಿರುವುದಿಲ್ಲ ಎಂದರು. ಈ ಮೂಲಕ ಗುಜರಾತ್​​ ಚುನಾವಣಾ ಪ್ರಚಾರದಲ್ಲಿ ತ್ರಿವಳಿ ತಲಾಖ್ ವಿರುದ್ಧ ಮತ್ತೆ ಗುಡುಗಿದ್ದಾರೆ. ಎಲ್ಲವನ್ನೂ ಚುನಾವಣಾ ದೃಷ್ಟಿಯಿಂದ ನೋಡುವುದಿಲ್ಲ. ತಲಾಖ್ ವಿಷಯ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದೆ ಎಂದರು. ಅಲ್ಲದೇ, ಮಾನವೀಯತೆ ಮೊದಲು, ಚುನಾವಣೆ ಅನಂತರ ಎಂದು ಅಭಿಪ್ರಾಯಪಟ್ಟರು.

ಜೊತೆಗೆ ತ್ರಿವಳಿ ತಲಾಖ್ ವಿಷಯ ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದ ಅವರು, ಸರ್ಕಾರ ಈ ಕುರಿತು ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಎಂದರು. ಪತ್ರಿಕೆಗಳು ಉತ್ತರಪ್ರದೇಶ ಚುನಾವಣೆಯ ಸಂದರ್ಭದಲ್ಲಿ ಮೋದಿಯವರು ತಲಾಖ್ ವಿಷಯಕ್ಕೆ ಸಂಬಂಧಿಸಿದಂತೆ ಮೌನವಾಗಿದ್ದರು ಎಂದವು. ಆದರೆ, ಈ ಕುರಿತು ಪ್ರಸ್ತಾಪಿಸಿದರೆ ಚುನಾವಣೆಯಲ್ಲಿ ನಷ್ಟವಾಗುತ್ತದೆ. ಆದ್ದರಿಂದ ಈ ಕುರಿತು ಮಾತನಾಡಬೇಡಿ ಎಂದು ಜನ ನನಗೆ ಸೂಚಿಸಿದ್ದರು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಆದರೆ, ಯಾವ ಜನ ಅವರಿಗೆ ಆಗ ಮಾತನಾಡದಂತೆ ಹೇಳಿದ್ದರು ಮತ್ತು ಈಗ ಗುಜರಾತ್​​ನಲ್ಲಿ ಮಾತಾನಾಡಿ ಎಂದು ಹೇಳಿದ್ದು ಯಾರು ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.

ಇಂದು ಗುಜರಾತ್​ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ, ಬಾಬ್ರಿ ಮಸೀದಿ ಧ್ವಂಸ ಮತ್ತು ರಾಮಮಂದಿರ ನಿರ್ಮಾಣ ಹಾಗೂ ತ್ರಿವಳಿ ತಲಾಖ್ ವಿಷಯಗಳನ್ನು ಪ್ರಸ್ತಾಪಿಸಿದರು. ಈ ಮೂಲಕ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಧರ್ಮ, ಜಾತಿ ವಿಷಯಗಳನ್ನು ಪ್ರಸ್ತಾಪಿಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪ್ರಧಾನಿಯೇ ಉಲ್ಲಂಘಿಸಿದ ಆರೋಪ ಎದುರಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *