ಗೋ ಕಿರಿಕಿರಿ: ಬಿಜೆಪಿ ತೊರೆದ ಮೇಘಾಲಯ ಮುಖಂಡ

ಶಿಲ್ಲಾಂಗ್: ದನಗಳ ಮಾರಾಟದ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಸ್ವಪಕ್ಷೀಯರಿಂದಲೇ ವಿರೋಧ ಎದುರಾಗಿದೆ. ನಮಗೆ ದನದ ಮಾಂಸವೇ ಪ್ರಧಾನ ಆಹಾರ. ಆದ್ದರಿಂದ ಗೋ ಮಾಂಸ ನಿಷೇಧವನ್ನು ನಾವು ಬೆಂಬಲಿಸುವುದಿಲ್ಲ ಎಂದು ಮೇಘಾಲಯ ಬಿಜೆಪಿ ಮುಖಂಡ ಬರ್ನಾರ್ಡ್​​ ಮರಕ್ ಹೇಳಿದ್ದಾರೆ. ಅಲ್ಲದೇ, ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.  

ಬಿಜೆಪಿ ತನ್ನ ಸಿದ್ಧಾಂತವನ್ನು ನಮ್ಮ ಮೇಲೆ ಹೇರುತ್ತಿರುವ ಕಾರಣದಿಂದಾಗಿ ಪಕ್ಷ ತೊರೆಯುತ್ತಿರುವುದಾಗಿ ಪಶ್ಚಿಮ ಗರೋ ಜಿಲ್ಲಾಧ್ಯಕ್ಷ ಬರ್ನಾರ್ಡ್​​ ಎನ್ ಮರಕ್ ಘೋಷಿಸಿದ್ದಾರೆ. ತಮ್ಮ ಸಂಪ್ರದಾಯದ ಪ್ರಕಾರ, ಎನ್​ಡಿಎ ಸರ್ಕಾರದ ಮೂರನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಿದರೆ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಗೋ ಮಾಂಸದ ದರವನ್ನು ಇಳಿಸುವುದಾಗಿ ನೀಡಿದ್ದ ಭರವಸೆಯನ್ನು ಕೂಡ ಅವರು ನೆನಪಿಸಿದ್ದಾರೆ. ಗೋ ಮಾಂಸ ಸೇವನೆ ಕುರಿತು ಜನರಲ್ಲಿರುವ ಅನುಮಾನಗಳ ಕುರಿತು ಜೂನ್ ಎರಡನೇ ವಾರದಲ್ಲಿ ಸಭೆ ಕರೆಯಲಾಗಿದೆ. ಆದರೆ, ಬಿಜೆಪಿ ರಾಜ್ಯದಲ್ಲಿ ಗೋಮಾಂಸ ನಿಷೇಧವನ್ನು ಹೇರಲು ಹುನ್ನಾರ ನಡೆಸುತ್ತಿದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಕ್ಷ ಗರೋದಲ್ಲಿ ತೀವ್ರವಾಗಿ ಬೆಳೆಯುತ್ತಿದೆ. ಆದರೆ, ಬಹುತೇಕರು ಪಕ್ಷಕ್ಕೆ ರಾಜೀನಾಮೆ ನೀಡುವ ಚಿಂತನೆಯಲ್ಲಿದ್ದಾರೆ ಎಂದು ಬರ್ನಾರ್ಡ್ ಹೇಳುತ್ತಾರೆ. ದಕ್ಷಿಣ ತುರಾ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಿದ್ಧತೆಯಲ್ಲಿ ಕೂಡ ಅವರು ತೊಡಗಿಕೊಂಡಿದ್ದಾರೆ.

ಉತ್ತರ ಗರೋದ ಬಿಜೆಪಿಯ ಜಿಲ್ಲಾಧ್ಯಕ್ಷ ಬಚು ಸಿ ಮರಕ್ ಗೋ ಮಾಂಸದ ಪಾರ್ಟಿ ನಡೆಸಿರುವ ಫೋಟೋ ಒಂದನ್ನು ನಿನ್ನೆ ಫೇಸ್​​ಬುಕ್​​ನಲ್ಲಿ ಶೇರ್ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮೇಘಾಲಯ ಉಸ್ತುವಾರಿ ನಳಿನ್ ಕೊಹ್ಲಿ, ಮರಕ್ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುತ್ತದೆ ಅಥವಾ ಅವರ ರಾಜೀನಾಮೆಯನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ. ವೈಯಕ್ತಿಕ ಲಾಭಕ್ಕಾಗಿ ಪಕ್ಷದ ಯಾವುದೇ ಸದಸ್ಯರ ಇಂಥ ವರ್ತನೆಗಳನ್ನು ಸಹಿಸಿಕೊಳ್ಳುವುದಿಲ್ಲ. ಮೋದಿಯವರ ಎಲ್ಲರೊಂದಿಗೆ ಅಭಿವೃದ್ಧಿ ಅಜೆಂಡಾದ ಪ್ರಕಾರ ಪಕ್ಷ ನಡೆದುಕೊಳ್ಳಲಿದೆ ಎಂದು ಕೂಡ ಅವರು ಹೇಳಿದ್ದಾರೆ.

ಮೇಘಾಲಯದ 80 ವಿಧಾನಸಭಾ ಕ್ಷೇತ್ರಗಳ ಪೈಕಿ, ಗರೋ ಪರ್ವತ ಪ್ರದೇಶಗಳಲ್ಲಿ 26 ವಿಧಾನಸಭೆ ಕ್ಷೇತ್ರಗಳಿವೆ. ಕೇಂದ್ರ ಸರ್ಕಾರದ ಗೋ ಮಾರಾಟದ ಮೇಲಿನ ನಿರ್ಬಂಧ ನಿರ್ಧಾರ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಗರೋದ ಕೆಲವು ಬಿಜೆಪಿ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳೆದ ಮೇ 23ರಂದು ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರ, ಹಸು, ಎಮ್ಮೆಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವುದಕ್ಕೆ ನಿರ್ಬಂಧ ವಿಧಿಸಿತ್ತು. ಅಲ್ಲದೇ, ರೈತರಿಗೆ ಮಾತ್ರ ಮಾರುವ ಮತ್ತು ಕೊಳ್ಳುವ ಅವಕಾಶ ನೀಡಿತ್ತು. ಈ ನಿರ್ಧಾರದ ವಿರುದ್ಧ ದೇಶದಾದ್ಯಂತ ಭಾರೀ ಟೀಕೆ ವ್ಯಕ್ತವಾಗಿತ್ತು.

ಮೇಘಾಲಯದಲ್ಲಿ ಕ್ರಿಶ್ಚಿಯನ್ ಸಮುದಾಯದವರ ಪ್ರಾಬಲ್ಯವಿದೆ. ಜೊತೆಗೆ ಗೋ ಮಾಂಸ ಅವರ ಸಾಮಾನ್ಯ ಆಹಾರವಾಗಿದೆ. ಖಾಸಿಸ್, ಗರೋಸ್ ಮತ್ತು ಜೈಂತಿಯಾಸ್ ಬುಡಕಟ್ಟುಗಳಲ್ಲಿ ಕೂಡ ಗೋ ಮಾಂಸ ಸೇವನೆ ಜಾರಿಯಲ್ಲಿದೆ.

ಎನ್​ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೂರನೇ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ಸ್ವಪಕ್ಷೀಯರೇ ಬಿಜೆಪಿ ವಿರುದ್ಧ ಬಂಡಾಯ ಏಳುತ್ತಿದ್ದಾರೆ. ಸಂಭ್ರಮಾಚರಣೆ ನಡೆಸುವಂತೆ ದೇಶದಾದ್ಯಂತ ಪ್ರಧಾನಿ ಸೇರಿದಂತೆ, ಸಂಸದರು, ಸಚಿವರಿಗೆ ನಿರ್ದೇಶನ ನೀಡಲಾಗಿದೆ. ಆದರೆ, ಇದೀಗ ಮೇಘಾಲಯದಲ್ಲಿ ಗೋವಿನ ವಿಷಯದ ಕುರಿತ ಕೇಂದ್ರದ ನಿರ್ಧಾರದ ವಿರುದ್ಧ ಒಬ್ಬರು ರಾಜೀನಾಮೆ ನೀಡಿದ್ದು, ಇನ್ನಷ್ಟು ನಾಯಕರು ಪಕ್ಷ ತೊರೆಯಲು ಸಿದ್ಧರಾಗುತ್ತಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *