ಗೋ ಕಿರಿಕಿರಿ: ಮೇಘಾಲಯ ಬಿಜೆಪಿ ತೊರೆದ ಮತ್ತೊಬ್ಬ ಮುಖಂಡ

ಪಶ್ಚಿಮ ಗರೊ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂನತ ಗೋಹತ್ಯೆ ನಿಯಮ ವಿರೋಧಿಸಿ ಮೇಘಾಲಯ ಬಿಜೆಪಿ ಮತ್ತೊಬ್ಬ ಮುಖಂಡ ಬಚು ಮರಕ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ಗರೋದ ಜಿಲ್ಲಾಧ್ಯಕ್ಷ ರಾಜೀನಾಮೆ ಸಲ್ಲಿಸಿದ 4 ದಿನಗಳ ನಂತರ ಮರಕ್ ಕೂಡ ಪಕ್ಷಕ್ಕೆ ರಾಜೀನಾಮೆ ನಿಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸ್ವಪಕ್ಷೀಯರಲ್ಲಿರುವ ಅಸಹನೆ ಮತ್ತೊಮ್ಮೆ ಸ್ಫೋಟಿಸಿದೆ.

ಗರೋ ನಾಗರಿಕರ ಭಾವನೆಗಳೊಂದಿಗೆ ನಾನು ರಾಜಿಯಾಗುವುದಿಲ್ಲ. ಒಬ್ಬ ಗರೋ ಆಗಿ ನಮ್ಮ ಸಮುದಾಯದ ಹಿತಾಸಕ್ತಿಯನ್ನು ರಕ್ಷಿಸುವುದು ನನ್ನ ಜವಾಬ್ದಾರಿ. ಗೋಮಾಂಸ ಸೇವನೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಭಾಗ. ಬಿಜೆಪಿ ಜಾತ್ಯತೀತ ಸಿದ್ಧಾಂತದಡಿಯಲ್ಲಿ ನಮ್ಮ ಮೇಲೆ ಗೋಮಾಂಸ ಸೇವನೆಗೆ ನಿಷೇಧ ಹೇರುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಮರಕ್ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ತಮ್ಮ ರಾಜೀನಾಮೆಯನ್ನು ರಾಜ್ಯಾಧ್ಯಕ್ಷ ಶಿಬುನ್ ಲಿಂಗಡೋ ಅವರಿಗೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷಗಳನ್ನು ಪೂರೈಸಿರುವ ಹೊತ್ತಿನಲ್ಲಿ ದನದ ಮಾರಾಟದ ಕುರಿತು ನೂತನ ನಿಯಮ ಜಾರಿಗೆ ತಂದಿತ್ತು. ಇದನ್ನು ವಿರೋಧಿಸಿ ಇತ್ತೀಚೆಗೆ ಬಿಚಿ (ರೈಸ್ ಬೀರ್​) ಪಾರ್ಟಿಯನ್ನು ಗರೋದಲ್ಲಿ ಆಯೋಜಿಸಿದ್ದರು. ಇದರ ಫೋಟೋವನ್ನು ಫೇಸ್​ಬುಕ್​​ನಲ್ಲಿ ಅಪ್​ಲೋಡ್ ಕೂಡ ಮಾಡಿದ್ದರು. ಕೇಂದ್ರ ಸರ್ಕಾರದ ನಿರ್ಧಾರ ಸಾಕಷ್ಟು ವಿಮರ್ಶೆಗೆ ಗುರಿಯಾಗಿತ್ತು.

ಕಳೆದ ವಾರ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಬರ್ನಾರ್ಡ್​​​ ಜೂನ್ 10ರಂದು ತುರಾದಲ್ಲಿ ಗೋಮಾಂಸ ಪಾರ್ಟಿಯನ್ನು ಆಯೋಜಿಸಿದ್ದಾರೆ. ಈ ಪಾರ್ಟಿಗೆ ತಾವು ಕೂಡ ಹಾಜರಾಗುವುದಾಗಿ ಮರಕ್ ತಿಳಿಸಿದ್ದಾರೆ. ಅಲ್ಲದೇ, ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ನಿರ್ಧಾರದ ವಿರುದ್ಧ ಧ್ವನಿ ಎತ್ತುವ ಸಲುವಾಗಿ ಈ ಪಾರ್ಟಿಯಲ್ಲಿ ಭಾಗವಹಿಸುವುದಾಗಿ ಅವರು ಹೇಳಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *