ಮನೇಸರ್ ಸಾಮೂಹಿಕ ಅತ್ಯಾಚಾರ: ತಪ್ಪೊಪ್ಪಿಕೊಂಡ ಒಬ್ಬ ಆರೋಪಿ

ಮನೇಸರ್: ಹರಿಯಾಣದ ಮನೇಸರ್​​ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಆರೋಪಿ ಅತ್ಯಾಚಾರ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಗುರುಗ್ರಾಮ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬನನ್ನು ಬಂಧಿಸಲಾಗಿದೆ. ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗುರುಗ್ರಾಮದ ಪೊಲೀಸ್ ಕಮೀಷನರ್ ಸಂದೀಪ್ ಖಿರ್​ವಾರ್ ತಿಳಿಸಿದ್ದಾರೆ. ಘಟನೆ ಸಂಬಂಧ ಇನ್ನಿಬ್ಬರ ಗುರುತು ಪತ್ತೆಯಾಗಿದ್ದು, ಅವರನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳ ರೇಖಾಚಿತ್ರವನ್ನು ಪೊಲೀಸರು ನಿನ್ನೆ ಬಿಡುಗಡೆ ಮಾಡಿದ್ದರು. ಕಳೆದ ವಾರ ಒಂಭತ್ತು ತಿಂಗಳ ಮಗುವನ್ನು ಆಟೋದಿಂದ ಹೊರತಳ್ಳಿ, ಮಹಿಳೆಯ ಮೇಲೆ ಅಮಾನವೀಯವಾಗಿ ಎರಗಿದ್ದ ಮೂವರು ಸಾಮೂಹಿವಾಗಿ ಅತ್ಯಾಚಾರ ಎಸಗಿದ್ದರು. ಘಟನೆಯಲ್ಲಿ ಮಗು ಸಾವಿಗೀಡಾದ ದುರ್ಘಟನೆ ಕೂಡ ನಡೆದಿತ್ತು.

22 ವರ್ಷದ ಮಹಿಳೆ ತನ್ನ ಗಂಡನೊಂದಿಗೆ ಜಗಳ ಆಡಿಕೊಂಡು ಖಂಡ್ಸಾದ ತಮ್ಮ ಪೋಷಕರ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ, ಮೇ 29ರಂದು ಮಧ್ಯರಾತ್ರಿ ಕಾಮುಕರು ದುಷ್ಕೃತ್ಯ ಎಸಗಿದ್ದರು. ಘಟನೆ ನಡೆದ ದಿನ ಮೂವರು ಪ್ರಯಾಣಿಸುತ್ತಿದ್ದ ಆಟೋವನ್ನು ಮಹಿಳೆ ಏರಿದ್ದರು. ಅತ್ಯಾಚಾರ ಎಸಗುವ ಸಂದರ್ಭದಲ್ಲಿ ಮಗು ಅತ್ತ ಕಾರಣಕ್ಕಾಗಿ ಆಟೋದಿಂದ ಕೆಳಗೆಸೆದು ಚಲಿಸುತ್ತಿದ್ದ ಆಟೋದಲ್ಲೇ ಕಾಮುಕರು ಅತ್ಯಾಚಾರ ಎಸಗಿದ್ದರು. ಅತ್ಯಾಚಾರ ಮತ್ತು ಕೊಲೆ ನಡೆಸಿರುವುದಾಗಿ ಮಹಿಳೆ ಮನೇಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

0

Leave a Reply

Your email address will not be published. Required fields are marked *