ಮಧ್ಯಪ್ರದೇಶ ಗೋಲಿಬಾರ್ ವಿರೋಧಿಸಿ ಬಂದ್​

ಮಂದ್​ಸೋರ್​​: ಮಧ್ಯಪ್ರದೇಶದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ನಿನ್ನೆ ನಡೆದಿದ್ದ ಗೋಲಿಬಾರ್ ವಿರೋಧಿಸಿ ಇಂದು ರೈತ ಸಂಘಟನೆಗಳು ಮಧ್ಯಪ್ರದೇಶ ಬಂದ್​ಗೆ ಕರೆ ನೀಡಿವೆ. ನಿನ್ನೆ ಸಾಲ ಮನ್ನಾ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮಂದ್​​ಸೋರ್​​ ಜಿಲ್ಲೆಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಸಂಭವಿಸಿತ್ತು. ಈ ವೇಳೆ ಪೊಲೀಸರು ಗೋಲಿಬಾರ್ ನಡೆಸಿದ್ದರು. ಗೋಲಿಬಾರ್​​ಗೆ ಇಬ್ಬರು ರೈತರು ಸೇರಿದಂತೆ ಒಟ್ಟು ಆರು ಜನ ನಾಗರಿಕರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಇಂದು ಮಧ್ಯಪ್ರದೇಶ ಬಂದ್​ಗೆ ಕರೆ ನೀಡಿವೆ. ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಕರ್ಫ್ಯೂ ವಿಧಿಸಿದೆ.

ಇನ್ನು ನಿನ್ನೆ ನಡೆದ ಹಿಂಸಾಚಾರಕ್ಕೆ ವಿಪಕ್ಷಗಳು ಕಾರಣ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ. ಗೋಲಿಬಾರ್ ನಡೆದಿಲ್ಲ ಎಂದು ಗೃಹ ಸಚಿವ ಭೂಪಿಂದರ್ ಸಿಂಗ್ ಹೇಳಿದ್ದಾರೆ. ಇಂದಿನ ಮಧ್ಯಪ್ರದೇಶ ಬಂದ್​ಗೆ ವಿಪಕ್ಷ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಅಲ್ಲದೇ, ಮಂದ್​ಸೋರ್​ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.

ಪ್ರಕ್ಷುಬ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವದಂತಿಗಳನ್ನು ತಡೆಯುವ ಉದ್ದೇಶದಿಂದಾಗಿ ಇಂದು ಮುಂಜಾನೆಯಿಂದ ಮಂದ್​ಸೋರ್, ರಾತ್ಲಮ್ ಮತ್ತು ನೀಮಚ್​​ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮಂದ್​ಸೋರ್ ಮತ್ತು ಪಿಪ್ಲ್ಯಾ ಮಂದಿ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೊಲೀಸರು ಮತ್ತು ರೈತರ ನಡುವೆ ಗಲಭೆ ಆರಂಭವಾಯಿತು. ಪರಸ್ಪರರ ಮೇಲೆ ಕಲ್ಲು ತೂರಾಟ ನಡೆಯಿತು. ಈ ವೇಳೆ ಪೊಲೀಸರು ಗುಂಡು ಹಾರಿಸಿದರು ಎಂದು ನಿನ್ನೆ ನಡೆದ ಘಟನೆಗಳ ಕುರಿತು ವಿವರಣೆ ನೀಡಿದ್ದಾರೆ.

ನಿನ್ನೆ ಮಧ್ಯಾಹ್ನ 2 ಗಂಟೆಯ ವೇಳೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಗೋಲಿಬಾರ್ ನಡೆಸಿದ್ದರು. ಈ ವೇಳೆ ಇಬ್ಬರು ರೈತರು ಬಲಿಯಾಗಿ, ಅನೇಕರು ಗಾಯಗೊಂಡಿದ್ದಾರೆ ಎಂದು ಉಜ್ಜೈನಿಯ ಕಮೀಷನರ್ ಬಿ ಎಂ ಓಝಾ ತಿಳಿಸಿದ್ದಾರೆ. ಗೋಲಿಬಾರ್​​ ನಂತರ ಪಿಪ್ಲ್ಯಾ ಮಂದಿ ಪೊಲೀಸ್ ಸ್ಟೇಷನ್​ ಅನ್ನು ಜನ ಸುತ್ತುವರೆದಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *