ಮಹಾರಾಷ್ಟ್ರ: ಎರಡನೇ ದಿನಕ್ಕೆ ಕಾಲಿಟ್ಟ ರೈತರ ಮುಷ್ಕರ

ಮುಂಬೈ: ಸಾಲ ಮನ್ನಾ ಮತ್ತು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರದಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಹಾಲನ್ನು ರಸ್ತೆಗೆ ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಶಿರಡಿಯಲ್ಲಿ ಟ್ಯಾಂಕರ್​ಗಟ್ಟಲೇ ಹಾಲನ್ನು ರಸ್ತೆಗೆ ಸುರಿದು ರೈತರು ಪ್ರತಿಭಟಿಸಿದ್ದರು. ಇಂದು ಕೂಡ ರಸ್ತೆಗೆ ಹಾಲು ಸುರಿಯುವುದನ್ನು ಮುಂದುವರೆಸಿದ್ದಾರೆ. ರೈತರನ್ನು ನಿಯಂತ್ರಿಸುವ ಸಲುವಾಗಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆದಿದೆ. ಘಟನೆ ಸಂಬಂಧ ಕೆಲವರನ್ನು ಬಂಧಿಸಲಾಗಿದೆ.

ಇನ್ನು ರೈತರ ಪ್ರತಿಭಟನೆಗೆ ಸಾಮಾಜಿಕ ಕಾರ್ಯರ್ತ ಅಣ್ಣಾ ಹಜಾರೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ರೈತ ಮುಖಂಡರು ಮತ್ತು ಸರ್ಕಾರದ ಮಧ್ಯೆ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸಲು ತಾವು ಸಿದ್ಧವಾಗಿರುವುದಾಗಿ ಘೋಷಿಸಿದ್ದಾರೆ.

ರೈತರು ಪ್ರತಿಭಟನೆಯಲ್ಲಿ ನಿರತರಾಗಿರುವುದರಿಂದಾಗಿ ಮುಂಬೈ, ಪುಣೆ ಮೊದಲಾದ ನಗರಗಳಲ್ಲಿ ನಾಗರಿಕರು ತರಕಾರಿ, ಹಣ್ಣು ಮೊದಲಾದ ವಸ್ತುಗಳಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಕೂಡ ಹಣ್ಣು, ತರಕಾರಿ ಮತ್ತು ಸೊಪ್ಪುಗಳ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಅಲ್ಲದೇ, ತರಕಾರಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುವವರ ಜೀವನದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರು ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ.

ನಿನ್ನೆ ಆರಂಭವಾದ ರೈತರ ಮುಷ್ಕರವನ್ನು ತಡೆಯಲು ಸರ್ಕಾರದ ಹಿರಿಯ ಅಧಿಕಾರಿಗಳು ಯತ್ನಿಸಿದ್ದರು. ರೈತರು ಮತ್ತು ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿಯನ್ನೂ ರಚಿಸಲಾಗಿತ್ತು. ಕಿಸಾನ್ ಕ್ರಾಂತಿ ಮೋರ್ಚಾ ಸದಸ್ಯರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಆದರೆ, ಮಾತುಕತೆ ವಿಫಲವಾಗಿತ್ತು. ಈ ವೇಳೆ ಪ್ರತಿಭಟನೆಯನ್ನು ಮುಂದೂಡುವಂತೆ ಸರ್ಕಾರ ರೈತರಿಗೆ ಮನವಿ ಮಾಡಿತ್ತು. ಆದರೆ, ಈ ಮನವಿಯನ್ನು ರೈತರು ತಿರಸ್ಕರಿಸಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *