ಗೋ ಮಾರಾಟ ಅಧಿಸೂಚನೆಗೆ ತಡೆ ನೀಡಿದ ಮದ್ರಾಸ್ ಹೈ ಕೋರ್ಟ್​​

ಚೆನ್ನೈ: ಮೇ 23ರಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಹಸುಗಳ ಮಾರಾಟಕ್ಕೆ ಸಂಬಂಧಿಸಿದ ಅಧಿಸೂಚನೆಗೆ ಇಂದು ಮದ್ರಾಸ್ ಹೈಕೋರ್ಟ್​​ನ ಮಧುರೈ ಪೀಠ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿದೆ. ಅಲ್ಲದೇ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ ವಿ ಮುರಳೀಧರನ್ ಮತ್ತು ನ್ಯಾ. ಸಿ ವಿ ಕಾರ್ತಿಕೇಯನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಸೆಲ್ವ ಗೋಮತಿ ಮತ್ತು ಆಶಿಶ್ ಇಲಾಕಿ ಬಾಬಾ ಅವರು ಹೊಸ ನಿಯಮದ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ತಂದ ಹೊಸ ನಿಯಮಗಳ ಪ್ರಕಾರ ಹಸುಗಳ ಮಾರಾಟಕ್ಕೆ ಕೇವಲ 25 ಕಿ.ಮೀ. ಗಳ ವ್ಯಾಪ್ತಿಯನ್ನು ನಿಗದಿಗೊಳಿಸಲಾಗಿತ್ತು.

ಅಲ್ಲದೇ, ದನಕರುಗಳನ್ನು ಮಾರುವ ವೇಳೆ ಮಾರಾಟಗಾರರು ಮತ್ತು ಖರೀದಿದಾರರು ಗುರುತಿನ ಚೀಟಿ ಮತ್ತು ಒಡೆತನದ ದಾಖಲೆಗಳನ್ನು ಹೊಂದಿರಬೇಕು. ಹಸು ಕೊಂಡವರು ಕೊಂಡ ದಾಖಲೆಗಳ 5 ಪ್ರತಿಗಳನ್ನು ಹೊಂದಿರಬೇಕು. ಈ ದಾಖಲೆಗಳ ಒಂದು ಪ್ರತಿ ಸ್ಥಳೀಯ ಕಂದಾಯ ಅಧಿಕಾರಿಗೆ, ಎರಡನೇ ಪ್ರತಿ ಹಸು ಖರೀದಿ ಮಾಡಿದ ವ್ಯಕ್ತಿಯ ಜಿಲ್ಲೆಯ ಸ್ಥಳೀಯ ಪಶು ವೈದ್ಯರಿಗೆ, ಮೂರನೇ ಪ್ರತಿಯನ್ನು ಜಾನುವಾರು ಮಾರುಕಟ್ಟೆ ಸಮಿತಿಗೆ ನೀಡಬೇಕು. ಒಂದು ಪ್ರತಿ ಮಾರಾಟಗಾರನ ಬಳಿ ಹಾಗೂ ಒಂದು ಪ್ರತಿ ಖರೀದಿಸಿದವನ ಬಳಿ ಇರಬೇಕು ಎಂಬ ತಿದ್ದುಪಡಿಯನ್ನು ತರಲಾಗಿತ್ತು.

ಈ ದೂರನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಎಂ ಅಜ್ಮಲ್ ಖಾನ್ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ ಕೇಂದ್ರ ಸರ್ಕಾರದ ವಕೀಲ ಕೆ ಆರ್ ಲಕ್ಷ್ಮಣ್ ಅವರಿಗೆ ಸಹಾಯಕ ಸಾಲಿಸಿಟರ್ ಜಿ ಆರ್ ಸ್ವಾಮಿನಾಥನ್ ಅವರು ಹಾಜರಿರುವಂತೆ ಸೂಚಿಸಿದೆ.

ಚಳವಳಿಗಾರ್ತಿ ಮತ್ತು ವಕೀಲೆಯಾಗಿರುವ ಎಸ್ ಸೆಲ್ವಂಗೋಮತಿ ಮತ್ತು ಆಶಿಶ್ ಇಲಾಕಿ ಬಾಬಾ ಎಂಬುವವರು ಕೇಂದ್ರ ಸರ್ಕಾರದ ಅಧಿಸೂಚನೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಪ್ರಾಣಿ ಹಿಂಸೆ ತಡೆ (ಪಿಸಿಎ) 1960 ಕಾಯ್ದೆಗೆ ತಂದಿರುವ ತಿದ್ದುಪಡಿ ಅಸಂಗತ. ಸೆಕ್ಷನ್ 28ರ ಪ್ರಕಾರ ಗೋಹತ್ಯೆ ವಿಷಯ ರಾಜ್ಯ ವ್ಯಾಪ್ತಿಗೆ ಒಳಪಡುತ್ತದೆ. ಜೊತೆಗೆ ಯಾವುದೇ ಪ್ರಾಣಿಯ ಹತ್ಯೆ ಅಪರಾಧವಲ್ಲ ಎಂದು ಕೂಡ ಅವರು ವಾದಿಸಿದ್ದರು.

ಪಿಸಿಎ ಕಾಯ್ದೆಯಡಿ ಪ್ರಾಣಿಗಳ ಮಾರಾಟ ಮತ್ತು ವಧೆಗೆ ಅವಕಾಶವಿದೆ. ಅಲ್ಲದೇ, ಈ ವಿಷಯಕ್ಕೆ ಸಂಬಂಧಿಸಿದಂತೆ ಆಜ್ಞೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದಿದ್ದಾರೆ. ಈ ತಿದ್ದುಪಡಿಯಿಂದಾಗಿ ಸಂವಿಧಾನದ 19(1)(ಜಿ) ಪರಿಚ್ಛೇದದಡಿಯಲ್ಲಿ ವ್ಯವಹಾರ, ವೃತ್ತಿ ಮತ್ತು ಮಾರಾಟದಡಿಯಲ್ಲಿ ನೀಡಿರುವ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಕೂಡ ಅವರು ವಾದಿಸಿದ್ದಾರೆ.

ರೈತರು ಮತ್ತು ವ್ಯಾಪಾರಿಗಳು ಹಸುಗಳ ಮಾರಾಟ ಕ್ಷೇತ್ರದಲ್ಲಿದ್ದಾರೆ. ಕೇಂದ್ರದ ಈ ನಿರ್ಧಾರದಿಂದಾಗಿ ಕಸಾಯಿಖಾನೆ ಮಾಲೀಕರು ಮತ್ತು ಅವುಗಳಲ್ಲಿ ದುಡಿಯುತ್ತಿರುವವರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ವಾದಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ಕುರಿತು ನಾಲ್ಕು ವಾರಗಳ ಒಳಗೆ ಉತ್ತರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೊಟೀಸ್ ನೀಡಿದೆ.

ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು ಮತ್ತು ಅರುಣಾಚಲ ಪ್ರದೇಶಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ನಡುವೆ ಮದ್ರಾಸ್ ಹೈಕೋರ್ಟ್​​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *