ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಷಾ ನಾಳೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ರೋಡ್ ಶೋ ಬೆಂಗಳೂರಿನಲ್ಲಿ ಸಭೆ ಹಾಗೂ ಕೋರ್ ಕಮೀಟಿ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಚುನಾವಣೆಯ ನಾಮಪತ್ರಗಳ ಸಲ್ಲಿಕೆ ಪ್ರಾರಂಭವಾಗಿರುವ ಈ ಸಂದರ್ಭದಲ್ಲಿ ಬಿಜೆಪಿಯ ಮುಂದೆ ಹಲವು ರೀತಿಯ ಸವಾಲುಗಳಿವೆ. ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಭಿನ್ನಾಭಿಪ್ರಾಯಗಳು ಬಹುದೊಡ್ಡ ಸವಾಲಾಗಿದೆ. ಹಲವಾರು ಕ್ಷೇತ್ರಗಳಲ್ಲಿನ ಆಂತರಿಕ ಬಿಕ್ಕಟ್ಟನ್ನು ಶಮನಗೊಳಿಸುವುದು ಅಮಿತ್ ಷಾ ಅವರಿಗೆ ಸಾಧ್ಯವೆ ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ.
ಅವರ ಮುಂದಿರುವ ಬಹುದೊಡ್ಡ ಸಮಸ್ಯೆ ಜೆಡಿಎಸ್ ನ ಜೊತೆಗಿನ ಮೈತ್ರಿ ಮತ್ತು ಅದು ಸೃಷ್ಟಿಸಿರುವ ಸಮಸ್ಯೆಗಳು.
ಮಂಡ್ಯ ಕ್ಷೇತ್ರದಲ್ಲಿ ಹಾಲಿ ಸಂಸದೆ ಸುಮಲತಾ ಅವರ ಮನವೊಲಿಸಬೇಕಾಗಿದೆ. ಅವರು ಮತ್ತೆ ಸ್ವತಂತ್ರವಾಗಿ ಸ್ಪರ್ಧಿಸದಂತೆ ನೋಡಿಕೊಳ್ಳಬೇಕಾಗಿದೆ. ಮೈಸೂರಿನಲ್ಲಿ ಪ್ರತಾಪ ಸಿಂಹ ಅವರಿಗೆ ಟಿಕೆಟ್ ತಪ್ಪಿರುವುದು ಒಕ್ಕಲಿಗ ಸಮುದಾಯದ ಬೇಸರಕ್ಕೆ ಕಾರಣವಾಗಿದೆ. ಇದನ್ನು ಸರಿಪಡಿಸಬೇಕು.
ಇನ್ನು ದಾವಣೆಗೆರೆ ಮತ್ತು ಬೆಳಗಾವಿ ಕ್ಷೇತ್ರಗಳಲ್ಲೂ ಅತೃಪ್ತಿ ಇದೆ. ದಾವಣೆಗೆರೆ ಕ್ಷೇತ್ರದಲ್ಲಿ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿರುವುದು ರೇಣುಕಾಚಾರ್ಯ ಅವರ ಬಳಗಕ್ಕೆ ಇಷ್ಟವಾಗಿಲ್ಲ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಸ್ಥಳೀಯ ಲಿಂಗಾಯತ ನಾಯಕರು ಕೋಪಗೊಂಡಿದ್ದಾರೆ. ರಾಯಚೂರಿನಲ್ಲಿ ಟಿಕೆಟ್ ಪಡೆದಿರುವ ರಾಜ ಅಮರೇಶ್ವರ ನಾಯಕ ಅವರ ಜೊತೆ ಯಾರೂ ಕೈಜೋಡಿಸುತ್ತಿಲ್ಲ.
ಇದಕ್ಕಿಂತ ಮುಖ್ಯವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ವಿರುದ್ಧ ಲಿಂಗಾಯತ ಸ್ವಾಮೀಜಿಗಳು ತಿರುಗಿ ಬಿದ್ದಿದ್ದಾರೆ. ಜೊತೆಗೆ ದಿಂಗಾಲೇಶ್ವರ ಸ್ವಾಮೀಜಿ ತಾವು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.
ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿ ಆಗಿದೆ. ಅವರನ್ನು ಪಕ್ಷ ಸಮಾಧಾನ ಪಡಿಸುತ್ತಿಲ್ಲ.
ತುಮಕೂರಿನಲ್ಲಿ ಮಾಧುಸ್ವಾಮಿ ಯಾವುದೇ ಕಾರಣಕ್ಕೂ ವಿ. ಸೋಮಣ್ಣ ಅವರನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಸಂಸದ ಅನಂತಕುಮಾರ್ ಹೆಗಡೆ, ಟಿಕೆಟ್ ಪಡೆದಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಬೆಂಬಲ ನೀಡುವ ಸಾಧ್ಯತೆ ತುಂಬಾ ಕಡಿಮೆ.
ಉಡುಪಿ ಚಿಕ್ಕಮಗಳೂರು ಮತ್ತು ಮಂಗಳೂರು ಕ್ಷೇತ್ರದಲ್ಲೂ ಬಿಜೆಪಿಗೆ ವ್ಯತಿರಿಕ್ತವಾದ ಬೆಳವಣಿಗೆಗಳು ಆಗುತ್ತಿವೆ. ಇಲ್ಲಿನ ಕೆಲವು ಕಟ್ಟಾ ಹಿಂದುತ್ವವಾದಿಗಳು ಬಿಜೆಪಿಗೆ ಬೆಂಬಲಿಸದಿರುವ ತೀರ್ಮಾನ ಕೈಗೊಂಡಿದ್ದಾರೆ.
ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದು ಅಮಿತ್ ಷಾ ಅವರಿಗೆ ಸುಲಭ ಅಲ್ಲ. ಅವರ ಮಾದರಿಯ ರಾಜಕಾರಣ ಉತ್ತರ ಭಾರತದಲ್ಲಿ ಪರಿಣಾಮ ಬೀರಬಹುದೇ ಹೊರತೂ ಕರ್ನಾಟಕದಲ್ಲಿ ಅಲ್ಲ. ಇಲ್ಲಿನ ರಾಜಕಾರಣದ ರೀತಿ ರಿವಾಜುಗಳೇ ಬೇರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿಯನ್ನು ಅಮಿತ್ ಷಾ ಒಹಿಸಿಕೊಟ್ಟಿದ್ದಾರೆ. ಆದರೆ ಯಡಿಯೂರಪ್ಪ ಅವರಿಗೆ ಮೊದಲಿನ ಶಕ್ತಿ ಇಲ್ಲ. ವಿಜಯೇಂದ್ರ ಇನ್ನೂ ಯುವಕರು. ಅವರಿಗೆ ರಾಜಕೀಯ ಅನುಭವ ಕಡಿಮೆ.
ಮಾಧ್ಯಮಗಳಿಂದ ಚಾಣಕ್ಯ ಎಂದು ಬಿರುದು ಪಡೆದಿರುವ ಅಮಿತ್ ಶಾ ಬಳಿ ಇರುವ ಚಾಣಕ್ಯ ನೀತಿ ಎಂದರೆ ಐ ಟಿ, ಇಡಿ ಮೊದಲಾದ ಸೆಂಟ್ರಲ್ ಎಜೆನ್ಸಿಗಳನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವುದು ಮಾತ್ರ.
ನಾಳೆ ಅಮಿತ್ ಶಾ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಾರೆಯೆ ? ಬಿಜೆಪಿಗೆ ಗೆಲುವಿನ ದಾರಿ ತೋರಿಸುತ್ತಾರೆಯೆ ? ನೋಡಬೇಕು.







