ಕೊಡಗು ರಂಗ ಸಪ್ತಾಹ: ಕೊಡಗಿಗೆ ಹರಿದ ನೆರವಿನ ಮಹಾಪೂರ

ಬೆಂಗಳೂರು: ಸುತ್ತಲೂ ಗಾಢವಾದ ಕತ್ತಲೆ ಕವಿದಿರುತ್ತೆ. ಧೋ ಎಂದು ಜೋರಾಗಿ ಸುರೀತಾ ಇರುತ್ತೆ. ಏನಾಗಿಹೋಯ್ತು ಅಂತ ಎದ್ದು ನೋಡುವಷ್ಟರಲ್ಲಿ ಇಡೀ ಮನೆ ನೀರಿನಲ್ಲಿ ಕೊಚ್ಚಿ ಹೋಗೋಕೆ ಆರಂಭವಾಗಿರುತ್ತೆ. ಆ ಭೀಕರ ಪ್ರವಾಹದಲ್ಲಿ ಒಂದು ಕುಟುಂಬದ ತಾಯಿ ಮಗ ಕೊಚ್ಚಿಹೋಗಿಬಿಡ್ತಾರೆ. ಏಳು ದಿನಗಳ ಕಾಲ ನಿರಂತರವಾಗಿ ಹಿಡುಕಾಟ ನಡೆಸಿದ್ರೂ ಅವರ ಪತ್ತೆಯಾಗೋದಿಲ್ಲ. ಎಂಟನೇ ದಿನಕ್ಕೆ ಅವರಿಬ್ಬರ ಶವವೂ ಸಿಗುತ್ತೆ ಆ ಎರಡೂ ಶವಗಳೂ ಒಬ್ಬರ ಕೈಯನ್ನು ಇನ್ನೊಬ್ಬರು ಹಿಡಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುತ್ತೆ ಎಂದು ಕೊಡಗಿನ ಪ್ರವಾಹದ ಸ್ಥಿತಿಯನ್ನು ನಟ ಸಂಚಾರಿ ವಿಜಯ್ ನೆನಪಿಸಿಕೊಳ್ಳುತ್ತಿದ್ದಂತೆ ವೇದಿಕೆಯಲ್ಲಿದ್ದ ಸಂತ್ರಸ್ತ ಕುಟುಂಬದವರಿಗೆ ಆ ಪರಿಸ್ಥಿತಿ ನೆನಪಾದಂತಾಗಿ ಒಮ್ಮೆ ನಡುಗಿಹೋಗಿ ಕಣ್ಣಂಚಲ್ಲಿ ನೀರು ಜಿನುಗಿತ್ತು. ಇದು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪೀಪಲ್ ಫಾರ್ ಪೀಪಲ್ ಸಂಸ್ಥೆ ಆಯೋಜಿಸಿರುವ ಕೊಡಗಿಗಾಗಿ ರಂಗಸಪ್ತಾಹದಲ್ಲಿ ಕಂಡುಬಂದ ದೃಶ್ಯ.

ರಂಗ ಸಪ್ತಾಹದ ೫ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಮೃತ ಚಂದ್ರಾವತಿ ಕುಟುಂಬದವರು ತಮ್ಮ ಬದುಕು ಸರ್ವನಾಶವಾದ ಬಗೆಯನ್ನು ಮನಕಲಕುವಂತೆ ತೋಡಿಕೊಂಡರು‌. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ರವೀಂದ್ರಗೌಡ ಅವರು ಕೊಡಗಿನ ಸಂತ್ರಸ್ತ ಜನಕ್ಕೆ ಯಾವುದೇ ರೀತಿ ವೈದ್ಯಕೀಯ ನೆರವು ನೀಡಲು ಬದ್ಧ ಎಂಬ ಭರವಸೆ ನೀಡಿದರು. ಅಲ್ಲದೇ 10 ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಹೊಣೆಹೊರುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಹಾಜರಿದ್ದ ವಾಕ್ ಶ್ರವಣ ತಜ್ಞರಾದ ಎಂಎಸ್ ಜಿ ನಾಯಕ್ ಮಾತನಾಡಿ, ಕೊಡಗಿನ ವಿಕೋಪದಲ್ಲಿ ವಾಕ್ ಶ್ರವಣ ದೋಷ ಉಂಟಾದವರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಭರವಸೆ ನೀಡಿದರು. ಇನ್ನು ಸುಚಿತ್ರ ಫಿಲಂ ಸೊಸೈಟಿಯ ಮುಖ್ಯಸ್ಥರೂ, ನಟರೂ ಆದ ಬಿ.ಸುರೇಶ್ ಅವರು, “ನನ್ನ ಪ್ರತೀ ತಿಂಗಳ ಸಂಬಳದ ಶೇ.10ರಷ್ಟನ್ನು ಕೊಡಗಿನ ಸಹಾಯಾರ್ಥ ಪೀಪಲ್ ಫಾರ್ ಪೀಪಲ್ ಸಂಸ್ಥೆಗೆ ನೀಡುತ್ತಿದ್ದೇನೆ, ಮುಂದೆಯೂ ನೀಡುತ್ತೇನೆ. ಕೊಡಗಿನ ಸಂತ್ರಸ್ತರ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಹಾಗಾಗಿ ವಾರಾಂತ್ಯದಲ್ಲಿ ಬೇರೆಲ್ಲೋ ಹೋಗಿ ಕಾಲಕಳೆಯುವ ಬದಲು ಕೊಡಗಿನ ಸಂತ್ರಸ್ತರ ಜೊತೆ ಹೋಗಿ ಕಳೆಯಿರಿ. ಅವರ ನೋವಿಗೆ ಸ್ಪಂದಿಸಿ” ಎಂದು ಕರೆ ನೀಡಿದರು. ಅಲ್ಲದೇ, ರಂಗ ಸಪ್ತಾಹ ಮಾತ್ರವಲ್ಲದೇ ಚಿತ್ರೋತ್ಸವವನ್ನೂ ಹಮ್ಮಿಕೊಂಡು ಅದರಿಂದ ಬರುವ ಹಣವನ್ನೂ ಕೊಡಗಿಗಾಗಿ ಬಳಸಿಕೊಳ್ಳಿ, ಅದಕ್ಕೆ ಅಗತ್ಯವಿರುವ ಚಲನಚಿತ್ರಗಳನ್ನು ಒದಗಿಸುವ ಜವಾಬ್ದಾರಿ ತಮ್ಮದು ಎಂದು ಹೇಳಿದರು.

ಇನ್ನು ಲಯನ್ಸ್ ಕ್ಲಬ್​​ನ ಬಾಬಾ ಸಾಹೇಬ್ ಅವರು ವೇದಿಕೆಯಲ್ಲಿಯೇ 1.60 ಲಕ್ಷ ರೂ. ಚೆಕ್ ಅನ್ನು ಪೀಪಲ್ ಫಾರ್ ಪೀಪಲ್ ಸಂಸ್ಥೆಗೆ ನೀಡಿದರು. ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಮಾತನಾಡಿ, ನಾವು ಕಲಾವಿದರ ಸಂಘದಿಂದ ಹಣ ಸಂಗ್ರಹಿಸಿ ಸರ್ಕಾರಕ್ಕೆ ಚೆಕ್ ಹಸ್ತಾಂತರಿಸಿ ನಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಂಡು ಸುಮ್ಮನಾಗಿದ್ದೆವು. ಪೀಪಲ್ಸ್ ಫಾರ್ ಪೀಪಲ್​ ಮಾಡುತ್ತಿರುವ ಕೆಲಸವನ್ನು ನೋಡಿದರೆ ನಮ್ಮ ತಪ್ಪಿನ ಅರಿವಾಗಿದೆ. ನಾನು ನಿಮ್ಮ ತಂಡದ ಜೊತೆಗೆ ಇರುತ್ತೇನೆ ಎಂದು ಭರವಸೆ ನೀಡಿದರು. ಜೆಡಿಎಸ್ ಮುಖಂಡರಾದ ತನ್ವೀರ್ ಅಹಮದ್, ಎಸ್ ಎಸ್ ಡಿಜಿಟಲ್ ವರ್ಕ್ಸ್ ನ ಸಂಸ್ಥಾಪಕರಾದ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜ್ಞಾನೇಂದ್ರ ಕುಮಾರ್ ನಿರೂಪಿಸಿ, ನಟ ಸಂಚಾರಿ ವಿಜಯ್ ಸ್ವಾಗತಿಸಿ, ಚಕ್ರವರ್ತಿ ಚಂದ್ರಚೂಡ್ ಪ್ರಸ್ತಾವನೆ ಸಲ್ಲಿಸಿದರು.

1+

Leave a Reply

Your email address will not be published. Required fields are marked *