ತೆಲಂಗಾಣದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ: ಅಮಿತ್ ಶಾ

ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಮತ್ತು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ರಾಜ್ಯದಲ್ಲಿ ವಿಭಜಕ ಪಡೆಗಳು ಬಲಿಷ್ಠವಾಗಿವೆ ಎಂದು ಅವರು ಪರೋಕ್ಷವಾಗಿ ಹಂಗಾಮಿ ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದರು. ಸ್ವಾರ್ಥಕ್ಕಾಗಿ 9 ತಿಂಗಳಿಗೂ ಮುನ್ನ ವಿಧಾನಸಭೆಯನ್ನು ವಿಸರ್ಜಿಲಾಗಿದೆ ಎಂದ ಅವರು, ಕೆ ಸಿ ರಾವ್ ಅವರು ಒಂದು ದೇಶ ಒಂದು ಚುನಾವಣೆಯನ್ನು ಬೆಂಬಲಿಸಿದ್ದರು. ಆದರೆ, ಅವರ ಪಕ್ಷ ನಿಲುವನ್ನು ಬದಲಿಸಿದೆ ಎಂದರು. ಈ ಮೂಲಕ ಚಿಕ್ಕ ರಾಜ್ಯವನ್ನು ಚುನಾವಣಾ ವೆಚ್ಚಕ್ಕೆ ದೂಡಲಾಗಿದೆ. ತೆಲಂಗಾಣ ಸಿಎಂ ಅವರನ್ನು ನಾನು ಕೇಳಲು ಬಯಸುತ್ತೇನೆ ಎಂದ ಅವರು, ನೀವು ಏಕೆ ಅನವಶ್ಯಕ ಹೊರೆಯನ್ನು ಹೊರಿಸಲಾಗಿದೆ ಎಂದು ಅವರು ಪ್ರಶ್ನಿಸಿದರು.

ಅಲ್ಪಸಂಖ್ಯಾತರಿಗೆ ಶೇ. 12ರಷ್ಟು ಮೀಸಲಾತಿ ನೀಡುವುದು ಓಲೈಕೆ ರಾಜಕಾರಣವಲ್ಲವೇ? ಎಂದು ಪ್ರಶ್ನಿಸಿದ ಅವರು, ನಮ್ಮ ದೇಶದ ಸಂವಿಧಾನ ಧರ್ಮ ಆಧರಿತ ಮೀಸಲಾತಿಗೆ ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದು ಫರ್ಮಾನು ಹೊರಡಿಸಿದರು. ಒಂದು ವೇಳೆ ಇದೇ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ, ವೋಟ್ ಬ್ಯಾಂಕ್ ರಾಜಕಾರಣ ರಾಜ್ಯದಲ್ಲಿ ಮುಂದುವರೆ ಯುತ್ತದೆ ಎಂದು ಅವರು ಚಂದ್ರಶೇಖರ್ ರಾವ್ ವಿರುದ್ಧ ಕಿಡಿಕಾರಿದರು.

ಕಳೆದ ವಾರ ಅವಧಿಗೂ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿದ್ದ ಕೆ.ಸಿ.ರಾವ್, ಬಿಜೆಪಿ ಸದ್ಯಕ್ಕೆ ಗೆದ್ದಿರುವ 5 ಕ್ಷೇತ್ರಗನ್ನು ಹೊರತುಪಡಿಸಿ ಉಳಿದ ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರು. ಈ ಮೂಲಕ ಬಿಜೆಪಿಯೊಂದಿಗೆ ಮೈತ್ರಿಯ ಅವಕಾಶವನ್ನು ಮುಕ್ತವಾಗಿಟ್ಟಿದ್ದರು. ಈ ನಡುವೆ ಟಿಡಿಪಿ, ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿ ರಚನೆಯ ಕಸರತ್ತು ರಾಜ್ಯದಲ್ಲಿ ನಡೆದಿದ್ದು, ಟಿಆರ್​ಎಸ್​ ಅನ್ನು ಮಣಿಸಲು ತೆರೆಮರೆಯ ಕಸರತ್ತು ನಡೆಯುತ್ತಿದೆ. ಈ ನಡುವೆ ಇಂದು ಹೈದರಾಬಾದ್​ನಲ್ಲಿ ಸಭೆ ನಡೆಸಿದ ಅಮಿತ್ ಶಾ ಚಂದ್ರಶೇಖರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ನಡೆ ಯಾವುದಾಗಲಿದೆ ಎಂಬ ಕುತೂಹಲ ಮೂಡಿದೆ.

0

Leave a Reply

Your email address will not be published. Required fields are marked *