ಕಪಿಲ್ ಮೋಹನ್ ಫಾದರ್ ಆಫ್ – ವೃದ್ಧ ಸನ್ಯಾಸಿ

ಅವರೊಬ್ಬ ನಿವೃತ್ತ ಬ್ರಿಗೇಡಿಯರ್. ಆದ್ರೆ ಅವರನ್ನು ಜಗತ್ತು ಗುರುತಿಸುವುದೇ ಓಲ್ಡ್​ ಮಾಂಕ್ ಪಿತಾಮಹ ಎಂದು. ಸೇನೆಗಾಗಿ ಅತ್ಯುತ್ತಮ ಮದ್ಯ ತಯಾರಿಸಬೇಕು ಅಂದುಕೊಂಡಿದ್ದ ಅವ್ರು ಕೊನೆಗೆ ಪಾನ ಪ್ರಪಂಚವನ್ನು ಅಕ್ಷರಶಃ ಆಳಿದ್ರು. ಆದ್ರೆ, ಪದ್ಮಶ್ರೀ ಪುರಸ್ಕೃತ ಮದ್ಯಲೋಕದ ಅನಭಿಷಿಕ್ತ ದೊರೆ ಇನ್ನಿಲ್ಲ.

ಭಾರತದಲ್ಲಿ ಅತ್ಯಂತ ಹೆಚ್ಚು ಬೇಡಿಕೆಯ ಮದ್ಯ ಓಲ್ಡ್ ಮಾಂಕ್. ಜಗತ್ತಿನಾದ್ಯಂತ ಅತಿ ಹೆಚ್ಚು ಬೇಡಿಕೆ ಹೊಂದಿರುವ ಈ ರಮ್​​ ಭಾರತದ ಮದ್ಯ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿತ್ತು. ಆ ಯಶಸ್ಸಿನ ಹಿಂದಿದ್ದ ಮಹತ್ವಾಕಾಂಕ್ಷಿ ಮಾತ್ರ ಬಾಟಲಿ ಖಾಲಿ ಮಾಡಿ ಎದ್ದು ನಡೆದಿದ್ದಾರೆ. ಹೌದು! ಓಲ್ಡ್ ಮಾಂಕ್ ಅನ್ನುವ ದೇವರಸವನ್ನು ಸೃಷ್ಟಿಸಿದ ಮಾಯಾವಿ ಕಪಿಲ್ ಮೋಹನ್ ಇನ್ನು ನೆನಪು ಮಾತ್ರ.

ಭಾರತೀಯ ಮದ್ಯ ಲೋಕದಲ್ಲಿ ತನ್ನದೇ ಪ್ರಭಾವ ಬೆಳೆಸಿಕೊಂಡಿದ್ದ, ಮದ್ಯ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದ್ದ ಲಿಕ್ಕರ್ ಕಿಂಗ್ ಕೊನೆಗೂ ವ್ಯಾಪಾರ ಮುಗಿಸಿದ್ದಾರೆ. ಓಲ್ಡ್ ಮಾಂಕ್ ಅನ್ನುವ ದೇವತಾ ಪಾನೀಯ ಕೊಟ್ಟ ಕಪಿಲ್ ಮೋಹನ್ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಕಪಿಲ್ ಮೋಹನ್, ಜನವರಿ 6ರಂದು ಗಾಝಿಯಾಬಾದ್​​​ ಮೋಹನ್​ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿ ಇಹದ ವ್ಯಾಪಾರ ಮುಗಿಸಿದ್ದಾರೆ. ಹೀಗಾಗಿ ಒಂದು ಸುದೀರ್ಘ ಯಶಸ್ವಿ ಅಧ್ಯಾಯ ಮುಗಿದಂತಾಗಿದೆ.

ಭಾರತದಲ್ಲಿ ಎಲ್ಲೇ ರಮ್ ಅನ್ನುವ ಪದ ಕಿವಿಗೆ ಬಿದ್ದರೆ ಕಣ್ಣ ಮುಂದೆ ಬರುವ ಚಿತ್ರಣ ಓಲ್ಡ್ ಮಾಂಕ್​ನದ್ದು. ನಿವೃತ್ತ ಬಿಗೇಡಿಯರ್ ಕಪಿಲ್ ಮೋಹನ್​ರ ಕನಸಿನ ಕೂಸು ಓಲ್ಡ್ ಮಾಂಕ್ ಪಾನೀಯ. ಕಪಿಲ್ ಮೋಹನ್, ಮೋಹನ್ ಮೇಕಿನ್ ಲಿಮಿಟೆಡ್ ಅನ್ನುವ ಡಿಸ್ಟಿಲ್ಲರಿ ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯ ಕಟ್ಟಿದವರು. ಮೋಹನ್ ಮೇಕಿನ್​ನ ಚೇರ್​ಮನ್ ಆಗಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಅವಧಿಯಲ್ಲಿ ಅವರ ಪ್ರಯೋಗಗಳ ಫಲಶೃತಿಯೇ ಭಾರತದ ಪಾನಪ್ರಪಂಚದಲ್ಲಿ ಈಗಲೂ ಮಿನುಗುತ್ತಿರುವ ಓಲ್ಡ್ ಮಾಂಕ್ ಅನ್ನುವ ಅದ್ಭುತ ಸೋಮರಸ.

ಓಲ್ಡ್ ಮಾಂಕ್ ಕಡಿಮೆ ದರದ ಬಡವರ ಪಾನೀಯ. ಹುಟ್ಟಿದಾಗಿಂದ ಇಲ್ಲಿಯವರೆಗೆ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೆ ಶ್ರೇಷ್ಟತೆ ಕಾಪಾಡಿಕೊಂಡ ಮದ್ಯ. ಹೀಗಾಗಿಯೇ ಇಂದು ಭಾರತದ ರಮ್ ಪ್ರಿಯರ ಮೆಚ್ಚಿನ ಬ್ರಾಂಡ್ ಆಗಿ ಗುರುತಿಸಿಕೊಂಡಿರುವ ಓಲ್ಡ್ ಮಾಂಕ್, ಭಾರತೀಯ ಮದ್ಯ ಮಾರುಕಟ್ಟೆಯಲ್ಲಿ ಮೋನೋಪಲಿ ಸಾಧಿಸಿದ್ದು ಈಗ ಇತಿಹಾಸ.

ಕಪಿಲ್ ಮೋಹನ್ ಓಲ್ಡ್ ಮಾಂಕ್ ಅನ್ನು ಸೃಷ್ಟಿಸಿದ್ದು 19 ಡಿಸೆಂಬರ್ 1954ರಂದು. ವೆನಿಲ್ಲಾ ಸ್ವಾದದ ಕನಿಷ್ಠ 7 ವರ್ಷವಾದ್ರೂ ಹಳೆಯ ಕಚ್ಚಾ ಪದಾರ್ಥ ಬಳಸಿ ಸಂಸ್ಕರಿಸಲಾದ ಶೇ.42.8ರಷ್ಟು ಆಲ್ಕೋಹಾಲ್ ಹೊಂದಿರುವ ಓಲ್ಡ್ ಮಾಂಕ್, ರಾಷ್ಟ್ರದ ಬಹುತೇಕ ಮಧ್ಯಮವರ್ಗದ ಹಾಗೂ ಕೆಳವರ್ಗದವರ ಅಚ್ಚುಮೆಚ್ಚಿನ ಡ್ರಿಂಕ್. ಓಲ್ಡ್ ಮಾಂಕ್ ಸೃಷ್ಟಿಯಾದ ನಂತರ ಇಲ್ಲಿಯವರೆಗೆ ನಡೆದುಬಂದ ಹಾದಿ ಅದ್ಭುತ. ಗುಣಮಟ್ಟದ ಜೊತೆ ರಾಜಿಯಾಗದೇ ಇದ್ದಿದ್ದೇ ಭಾರತದ ಪಾನೀಯ ಪ್ರಪಂಚದಲ್ಲಿ ಓಲ್ಡ್ ಮಾಂಕ್ ಕ್ರಾಂತಿಗೆ ಕಾರಣ.

ಕಪಿಲ್ ಮೋಹನ್​, ಮಾಲ್ಟ್ ಹೌಸ್​ಗಳು, ಗ್ಲಾಸ್ ಕಾರ್ಖಾನೆಗಳು, ಉಪಹಾರದ ರೆಡಿ ಫುಡ್, ಹಣ್ಣಿನಿಂದ ತಯಾರಿಸಿದ ಆಹಾರ ಉತ್ಪನ್ನ ಹಾಗೂ ಜ್ಯೂಸ್, ಶೀತಲ ಸಂಗ್ರಹಾಗಾರ, ಎಂಜಿನಿಯರಿಂಗ್ ಕಾರ್ಖಾನೆಗಳನ್ನೂ ಹೊಂದಿದ್ದರು. ಆದ್ರೆ ಅವರಿಗೆ ಹಣ, ಘನತೆ, ಕೀರ್ತಿ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ ಓಲ್ಡ್ ಮಾಂಕ್.

ವಾ/ಓ6: ಮೋಹನ್ ಮೆಕಿನ್ ಲಿಮಿಟೆಡ್ ಮೂಲತಃ ಹೊಸದಾಗಿ ಹುಟ್ಟಿದ ಸಂಸ್ಥೆಯಲ್ಲ..ಆಗ ಸೈನ್ಯದಿಂದ ನಿವೃತ್ತರಾಗಿದ್ದ ಬ್ರಿಗೇಡಿಯರ್ ಕಪಿಲ್ ಮೋಹನ್, ಸೈನಿಕರಿಗಾಗಿ ಅತ್ಯುತ್ತಮವಾದ ಮದ್ಯವೊಂದನ್ನು ತಯಾರಿಸುವ ಕನಸು ಕಂಡಿದ್ದರು.. ಆಗ ಅವರ ಗಮನಕ್ಕೆ ಬಂದಿದ್ದೆ ಅದಾಗಲೇ ಮದ್ಯ ಮಾರುಕಟ್ಟೆಯಲ್ಲಿ ಒಂದು ಮೇಲುಗೈ ಸಾಧಿಸಿದ್ದ ಡೈಯರ್ ಬ್ರೇವರೀಸ್.. ಏಷ್ಯಾದಲ್ಲಿ ಪ್ರಾರಂಭವಾದ ಮೊದಲ ಅತಿ ದೊಡ್ಡ ಬ್ರೇವರಿಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹಾಗೂ 1855ರಲ್ಲೇ ಶುರುವಾಗಿದ್ದ ಡೈಯರ್ ಬ್ರೇವರೀಸ್​ನ ಸಂಸ್ಥಾಪಕ ಎಡ್ವರ್ಡ್ ಡೈಯರ್.. 1887ರಲ್ಲಿ ಇನ್ನೊಬ್ಬ ದಿಗ್ಗಜ ಹೆಚ್​.ಜಿ ಮೇಕಿನ್ ಈ ಸಂಸ್ಥೆಗೆ ಪಾಲುದಾರರಾದ್ರೂ ಹೀಗಾಗಿ ಡೈಯರ್ ಮೇಕಿನ್ ಬ್ರೇವರೀಸ್ ಆಗಿ ಅದು ಬದಲಾಯ್ತು.. ಸ್ವಾತಂತ್ರ್ಯ ಬಂದ ನಂತರ ಉದ್ಯಮಿ ನರೇಂದ್ರ ನಾಥ್ ಮೋಹನ್ ಈ ಡೈಯರ್ ಮೇಕಿನ್ ಬ್ರೇವರೀಸ್​ನ ಪ್ರಮುಖ ಶೇರುಗಳನ್ನು ಪಡೆದುಕೊಂಡರು; ಹೀಗಾಗಿ ಸಂಸ್ಥೆಯ ಹೆಸರು ಮೋಹನ್ ಮೇಕಿನ್ ಆಗಿ ಬದಲಾಯಿತು.. ಆದ್ರೆ ಮೋಹನ್ ಮೇಕಿನ್​ನ ಸಂಪೂರ್ಣ ಕಾರ್ಯವೈಖರಿ ಹುರುಪು ಪಡೆದು ಚಟುವಟಿಕೆ ಗರಿಗೆದರಿದ್ದು ಕಪಿಲ್ ಮೋಹನ್ ಸಂಸ್ಥೆಯ ನೇತೃತ್ವ ವಹಿಸಿದ ನಂತರ.

ಕಪಿಲ್ ಮೋಹನ್​ರ ನೇತೃತ್ವದಲ್ಲಿ ಮೋಹನ್ ಮೇಕಿನ್ ಲಿಮಿಟೆಡ್ ಮೂರು ಪ್ರಮುಖ ಡಿಸ್ಟಿಲ್ಲರೀಸ್, ಎರಡು ಬ್ರೇವರಿಗಳನ್ನು ಹಾಗೂ ದೇಶಾದ್ಯಂತ ಹೊಸ ಹೊಸ ಫ್ರಾಂಚೈಸಿಗಳನ್ನು ಹುಟ್ಟುಹಾಕಿತು. ಓಲ್ಡ್ ಮಾಂಕ್ ಅನ್ನುವ ರಾಜಪೇಯ ಹುಟ್ಟಿದ ನಂತರ ಕಪಿಲ್ ಮೋಹನ್ ಹಿಂತಿರುಗಿ ನೋಡಲೇ ಇಲ್ಲ. ಸದ್ಯ ವಿಶ್ವದಾದ್ಯಂತ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮೂರನೆಯ ಹಾಗೂ ರಾಷ್ಟ್ರದಲ್ಲಿ ಅತಿ ಹೆಚ್ಚು ಬೇಡಿಕೆಯ ಮೊದಲ ರಮ್ ಆಗಿ ಗುರುತಿಸಿಕೊಂಡಿರುವ ಓಲ್ಡ್ ಮಾಂಕ್, ಸರಿಸುಮಾರು ವಾರ್ಷಿಕ 400 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತದೆ.

ವಿಶ್ವ ಮಾರುಕಟ್ಟೆಯಲ್ಲಿ ಸೋಲೋ ನಂಬರ್ 1 ಹಾಗೂ ಗೋಲ್ಡನ್ ಈಗಲ್ ಹೊರತುಪಡಿಸಿದ್ರೆ ಅತಿ ಹೆಚ್ಚು ಬೇಡಿಕೆ ಇರೋದು ಓಲ್ಡ್ ಮಾಂಕ್​ ಮದ್ಯಕ್ಕೆ. ಭಾರತದಲ್ಲಿ ನಿರ್ಮಾಣವಾಗಿ ವಿಶ್ವ ಮಾರುಕಟ್ಟೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡ ಮದ್ಯಗಳ ಪಟ್ಟಿಯಲ್ಲಿ ಓಲ್ಡ್ ಮಾಂಕ್​ಗೆ ಯಾವಾಗಲೂ ಮೊದಲ ಸ್ಥಾನ. 2002ರಲ್ಲಿ ಯೂರೋಮೀಟರ್ ನಡೆಸಿದ ಸಮೀಕ್ಷೆಯ ಪ್ರಕಾರ ಓಲ್ಡ್ ಮಾಂಕ್ ಸುಮಾರು 3 ಮಿಲಿಯನ್ ಕೇಸ್​ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿತ್ತು.

90, 180, 375, 500, 750 ಮಿ.ಲೀ. ಹಾಗೂ 1 ಲೀಟರ್ ಬಾಟಲಿಗಳಲ್ಲಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಓಲ್ಡ್​ ಮಾಂಕ್ ಅತ್ಯಂತ ಗರಿಷ್ಠ ಗುಣಮಟ್ಟದ ಹಾಗೂ ಕಡಿಮೆ ದರದ ಮದ್ಯ. ಓಲ್ಡ್ ಮಾಂಕ್ ಸುಪ್ರೀಂ, ಗೋಲ್ಡ್ ರಿಸರ್ವ್, ತ್ರಿಬಲ್ ಎಕ್ಸ್, ಡಿಲಕ್ಸ್ ತ್ರಿಬಲ್ ಎಕ್ಸ್, ವೈಟ್ ರಮ್ ಹಾಗೂ ಲೆಜೆಂಡ್​ ರಮ್​ ಇದರ ಉಳಿದ ಬೈ ಪ್ರಾಡೆಕ್ಟ್ಸ್​​ಗಳು.

ಇನ್ನೊಂದು ಆಶ್ಚರ್ಯದ ಸಗತಿ ಅಂದ್ರೆ ಕೆಲವು ನಿಯತಕಾಲಿಕೆಗಳ ಪ್ರಕಾರ ಕಪಿಲ್ ಮೋಹನ್ ಹಾಗೂ ಸಂಸ್ಥೆ ಜಾಹಿರಾತುಗಳಲ್ಲಿ ನಂಬಿಕೆ ಹೊಂದಿರಲಿಲ್ಲ. 2012ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಪಿಲ್ ಮೋಹನ್, ನಾನು ಈ ಖುರ್ಚಿಯಲ್ಲಿರುವ ತನಕ ಜಾಹಿರಾತು ಮಾಡುವುದಿಲ್ಲ, ನಾನು ಮಾರುಕಟ್ಟೆಗೆ ಬಿಡುವ ಅಂತಿಮ ಉತ್ಪನ್ನವೇ ನಮ್ಮ ಜಾಹಿರಾತು. ನೀವು ಅದನ್ನು ಬಳಸಿ ಬೇರೆಯ ಉತ್ಪನ್ನಗಳಿಗೆ ಹೋಲಿಸಿ. ಅದೇ ಅತ್ಯುತ್ತಮ ಜಾಹಿರಾತು ಅಂದಿದ್ದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಹೆಸರು ಹೊಂದಿರುವ ಓಲ್ಡ್ ಮಾಂಕ್ ಮದ್ಯವನ್ನು ರಷ್ಯಾ, ಅಮೆರಿಕಾ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಸ್ಟೋನಿಯಾ, ಫಿನ್​​ಲ್ಯಾಂಡ್, ನ್ಯೂಜಿಲ್ಯಾಂಡ್, ಕೆನಡಾ, ಕೀನ್ಯಾ, ಜಾಂಬಿಯಾ, ಕೆಮರೂನ್, ಸಿಂಗಾಪುರ ಹಾಗೂ ಮಲೇಶಿಯಾಗಳಲ್ಲಿ ಹೆಚ್ಚಾಗಿ ಬಳಸಲಾಗ್ತಿದೆ.

ಇಂಪ್ಯಾಕ್ಟ್ ಇಂಟರ್​ನ್ಯಾಷನಲ್​ನ 2008ರ ಘೋಷಣೆಯ ಅನ್ವಯ ಓಲ್ಡ್ ಮಾಂಕ್ ಬ್ರಾಂಡ್ ವಿಶ್ವದ 100 ಅತ್ಯುತ್ತಮ ಮದ್ಯದ ಬಾಂಡ್​ಗಳಲ್ಲಿ ಒಂದಾಗಿತ್ತು ಹಾಗೂ ಭಾರತದ 5ನೆಯ ಜನಪ್ರಿಯ ಲಿಕ್ಕರ್ ಅನ್ನುವ ಹೆಗ್ಗಳಿಗೆ ಪಾತ್ರವಾಗಿತ್ತು. ಇದಕ್ಕೆ ಆಗ ನಿಗದಿಯಾಗಿದ್ದ ಮಾರುಕಟ್ಟೆಯ ಮೌಲ್ಯವೇ ಸುಮಾರು 240 ಮಿಲಿಯನ್ ಅಮೆರಿಕನ್ ಡಾಲರ್. 1982ರಲ್ಲಿ ಈ ಓಲ್ಡ್ ಮಾಂಕ್ ಪಾನೀಯಕ್ಕೆ ಮಾಂಡೆ ವಿಶ್ವ ಆಯ್ಕೆಯ ಗೋಲ್ಡ್ ಮೆಡಲ್ ಲಭಿಸಿತ್ತು.

ಒಬ್ಬ ಅದ್ಭುತ ವ್ಯಾಪಾರಿಯಾಗಿದ್ದ ಮಾಜಿ ಯೋಧ ಕಪಿಲ್ ಮೋಹನ್​ರ ವ್ಯಾವಹಾರಿಕ ಯಶಸ್ಸು ಗುರುತಿಸಿದ್ದ ಭಾರತ ಸರ್ಕಾರ 2010ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಓಲ್ಡ್ ಮಾಂಕ್ ಭಾರತದ ಐಕಾನಿಕ್ ಬ್ರಾಂಡ್ ಅನ್ನುವುದಕ್ಕೆ ಕಪಿಲ್ ಮೋಹನ್ ನಿಧನಕ್ಕೆ ಟ್ವಿಟರ್​ನಲ್ಲಿ ವ್ಯಕ್ತವಾಗ್ತಿರುವ ಶ್ರದ್ಧಾಂಜಲಿಗಳೇ ಸಾಕ್ಷಿ. ಕಪಿಲ್ ಮೋಹನ್ ನಿಧನಕ್ಕೆ ಶ್ರದ್ಧಾಂಜಲಿ ಎಂಬಂತೆ ಇಂದು ರಾತ್ರಿ ತಮ್ಮ ಬ್ರಾಂಡ್ ಅಲ್ಲದಿದ್ದರೂ, ಓಲ್ಡ್ ಮಾಂಕ್ ತೆಗೆದುಕೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ ಟ್ವೀಟರ್ರಿಗರು.  ಅದೇನೆ ಇರಲಿ, ದೇಶ ವಿದೇಶಗಳ ಮಾರುಕಟ್ಟೆಯನ್ನು ಕೊಳ್ಳೆ ಹೊಡೆದ, ಅಪಾರ ಜನಪ್ರಿಯತೆ ಗಳಿಸಿದ ಮದ್ಯವೊಂದನ್ನು ದಶಕಗಳ ಕಾಲ ತಯಾರಿಸಿದ ಕಪಿಲ್ ಮೋಹನ್​​ಗೆ ಒಂದು ಶ್ರದ್ಧಾಂಜಲಿ ಅರ್ಪಿಸಲೇಬೇಕು.

ಕಪಿಲ್ ಮೋಹನ್ ಒಬ್ಬ ನಿವೃತ್ತ ಸೇನಾಧಿಕಾರಿಯಾಗಿದ್ದವರು. ತಮ್ಮ ಸೈನಿಕರಿಗೆ ಅತ್ಯುತ್ತಮ ಮದ್ಯ ಕೊಡಬೇಕು ಅನ್ನುವುದು ಅವರ ಅದಮ್ಯ ಆಸೆಯಾಗಿತ್ತು. ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ ಕಪಿಲ್ ಮೋಹನ್ ಯಾವತ್ತೂ ಆ ಮದ್ಯದ ಗುಣಮಟ್ಟ ಹಾಗೂ ರುಚಿ ಕೆಡಿಸಲಿಲ್ಲ. ಲಾಭದ ಆಸೆಗೆ ಬಿದ್ದು ಕಲಬೆರಕೆ ಮಾಡಲಿಲ್ಲ. ಹೀಗಾಗಿಯೇ ಓಲ್ಡ್ ಮಾಂಕ್ ಪಾನ ಪ್ರಿಯರು ಕಪಿಲ್ ಮೋಹನ್ ನಿಧನಕ್ಕೆ ಕಂಬನಿಗರೆದಿದ್ದಾರೆ.

ವಿಶ್ವಾಸ್ ಭಾರದ್ವಾಜ್, ನ್ಯೂಸ್ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *