ಕಂಬಳಕ್ಕೆ ಮತ್ತೆ ವಿಘ್ನ!

ರಾಷ್ಟ್ರಪತಿ ಸುಗ್ರೀವಾಜ್ಞೆ ಮೂಲಕ ತೆರವಾಗಿದ್ದ ಕಂಬಳ ನಿಷೇಧದ ಆದೇಶಕ್ಕೆ ಇದೀಗ ಮತ್ತೆ ವಿಘ್ನ ಎದುರಾಗೋ ಸಾಧ್ಯತೆಯಿದೆ. ಕಂಬಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ  ನಡೆದ ಮೂಡಬಿದ್ರೆ ಕಂಬಳದಲ್ಲಿ ಭಾರೀ ಪ್ರಾಣಿ ಹಿಂಸೆ ನಡೆದಿದೆ ಅಂತ ಪೇಟಾ ಆರೋಪಿಸಿದೆ. ಅಲ್ಲದೇ ರಹಸ್ಯವಾಗಿ ನಿನ್ನೆ ನಡೆದ ಕಂಬಳ ದೃಶ್ಯಗಳನ್ನ ದಾಖಲಿಸಿ ನಾಳೆ ಸುಪ್ರೀಂ ಕೋರ್ಟ್​ಗೆ ಹಾಜರುಪಡಿಸಲು ಪೇಟಾ ಮುಂದಾಗಿದೆ. ಹೀಗಾಗಿ ಪೇಟಾದ ತಕರಾರು ಮತ್ತೆ ಕಂಬಳ ಕ್ರೀಡೆಗೆ ವಿಘ್ನ ತಂದಿಟ್ಟಿದೆ.

ಬರೋಬ್ಬರಿ ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ನಿನ್ನೆ ಮತ್ತೆ ಅದ್ದೂರಿ ಚಾಲನೆ ಸಿಕ್ಕಿತ್ತು. ರಾಜ್ಯ ಸರ್ಕಾರದ ಹೊಸ ವಿಧೇಯಕ ಮಂಡನೆಯ ಆಧಾರದಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಷೆ ಹೊರಡಿಸಿದ ಬೆನ್ನಲ್ಲೇ ಕಂಬಳಕ್ಕೆ ರಿಲೀಫ್ ಸಿಕ್ಕಿದೆ. ಆದ್ರೆ ನಿನ್ನೆ ದ.ಕ. ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದ ಕಂಬಳದಲ್ಲಿ ಮತ್ತೆ ಕೋಣಗಳಿಗೆ ಹಿಂಸೆ ನೀಢಲಾಗಿದೆ ಅಂತ ಪೇಟಾ ಪ್ರಾಣಿ ದಯಾ ಸಂಘ ಆರೋಪಿಸಿದೆ.

ಕಂಬಳದಲ್ಲಿ 137 ಜೋಡಿ ಕೋಣಗಳು ಭಾಗವಹಿಸಿದ್ದು, ಈ ವೇಳೆ ಕೋಣ ಓಡಿಸುವವರು ಬಾರುಕೋಲು ಹಿಡಿದು ಕೋಣಗಳಿಗೆ ಬಾರಿಸುವ ದೃಶ್ಯಗಳನ್ನು ಸೆರೆ ಹಿಡಿದಿದ್ದೇವೆ ಎಂದು ಪೇಟಾ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಕೋಣಗಳಿಗೆ ಮೂಗುದಾರವನ್ನು ಕಟ್ಟಿ ಹಿಂಸೆ ನೀಡಲಾಗಿದೆ. ಹಬ್ಬದ ಹೆಸರಿನಲ್ಲಿ ಮತ್ತೆ ಕೋಣಗಳನ್ನು ಹಿಂಸಿಸಲಾಗಿದೆ ಅಂತ ಪೇಟಾ ಆರೋಪಿಸಿದೆ.

ಈ ಸಂಬಂಧ ಸ್ವತಃ ಪೇಟಾದ ಕಾರ್ಯಕರ್ತರೇ ನಿನ್ನೆ ಇಡೀ ದಿನ ಕಂಬಳ ನಡೆದ ಸ್ಥಳದಲ್ಲಿ ಬೀಡು ಬಿಟ್ಟು ರಹಸ್ಯವಾಗಿ ಕೆಲ ಫೋಟೋ ಮತ್ತು ವಿಡಿಯೋಗಳನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಹಿಂಸೆ ನಡೆದಿದೆ ಎನ್ನಲಾದ ಐದು ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಉಳಿದ ಫೋಟೋ ಮತ್ತು ವಿಡಿಯೋ ದಾಖಲೆಗಳನ್ನು ಇಂದು ಸುಪ್ರೀಂ ಕೋರ್ಟ್​​ಗೆ ಸಲ್ಲಿಸುವುದಾಗಿ ಹೇಳಿತ್ತು. ಹೀಗಾಗಿ ನಾಳೆ ಮತ್ತೆ ನ್ಯಾಯಾಲಯ ಕಂಬಳಕ್ಕೆ ತಾತ್ಕಾಲಿಕ ನಿಷೇಧ ವಿಧಿಸುವ ಆತಂಕ ಎದುರಾಗಿದೆ.

ಪೇಟಾ ಸಂಸ್ಥೆ ಪತ್ರಿಕಾ ಹೇಳಿಕೆ

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮನೋರಂಜನೆಯ ಹೆಸರಿನಲ್ಲಿ ಪ್ರಾಣಿ ಹಿಂಸೆ ಸಲ್ಲದು. ಆದರೆ ನಿನ್ನೆ ಮೂಡಬಿದ್ರೆಯಲ್ಲಿ ನಡೆದ ಕಂಬಳದ ವೇಳೆ ಕೋಣಗಳಿಗೆ ಕೋಲಿನಿಂದ ಹೊಡೆದು ಹಲ್ಲೆ ಮಾಡಲಾಗಿದೆ. ಅಲ್ಲದೇ ಮೂಗುದಾರ ಕಟ್ಟಿ ಹಿಂಸಿಸಲಾಗಿದೆ. ಇದೆಲ್ಲವನ್ನು ಪೇಟಾ ಸಾಕ್ಷ್ಯ ಸಮೇತ ದಾಖಲು ಮಾಡಿದ್ದು, ಇಂದು ಸುಪ್ರೀಂ ಕೋರ್ಟ್​​ಗೆ ಸಲ್ಲಿಕೆ ಮಾಡಲು ತೀರ್ಮಾನಿಸಿಲಾಗಿದೆ.

ಇನ್ನು ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಹಲವು ವರ್ಷಗಳಿಂದ ಸಾಂಗವಾಗಿ ನಡೀತಾ ಇತ್ತು. ಆದರೆ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧವಾದ ಬೆನ್ನಲ್ಲೇ ಕಂಬಳಕ್ಕೂ ಆತಂಕ ಎದುರಾಗಿ ದೆಹಲಿಯ ಪೇಟಾ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಕಂಬಳಕ್ಕೆ ನಿಷೇಧ ಹೇರಲಾಗಿತ್ತು. ಹೀಗಾಗಿ 2016ರ ಮಾರ್ಚ್ 14ರಂದು ದ.ಕ. ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಕಂಬಳವೇ ಅಂತಿಮ ಕಂಬಳವಾಗಿತ್ತು. ಇದಾದ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಕಂಬಳ ಉಳಿಸಲು ಆಗ್ರಹಿಸಿ ಭಾರೀ ಹೋರಾಟಗಳು ನಡೆದಿದ್ದವು. ಬಳಿಕ ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರದ ಪ್ರಾಣಿ ಹಿಂಸೆ ಕಾಯ್ದೆಗೆ ತಿದ್ದುಪಡಿ ತಂದು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿತ್ತು. ಕೊನೆಗೆ ರಾಷ್ಟ್ರಪತಿ ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ನಿನ್ನೆ ಮೂಡಬಿದ್ರೆಯಲ್ಲಿ ವಿಜಯೋತ್ಸವ ಕಂಬಳ ಆಚರಿಸಲಾಗಿದೆ.

ಆದರೆ, ಇದನ್ನು ವಿರೋಧಿಸಿ ಸೆ.23ರಂದು ಪೇಟಾ ಸಂಸ್ಥೆ ಸುಪ್ರೀಂ ಕೋರ್ಟ್​​​ನಲ್ಲಿ ಮೊಕದ್ದಮೆ ಹೂಡಿತ್ತು. ಆದರೆ ಕೋರ್ಟ್ ತಡೆಯಾಜ್ಞೆ ನೀಡದೇ ಕಂಬಳ ಆಯೋಜನೆಗೆ ಹಸಿರು ಚಿಹ್ನೆ ನೀಡಿ ವಿಚಾರಣೆಯನ್ನು ಮುಂದೂಡಿತ್ತು. ಆದರೆ, ಇಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿರೋ ಬೆನ್ನಲ್ಲೇ ಪೇಟಾ ಸಂಸ್ಥೆ ಸಾಕ್ಷ್ಯ ಸಮೇತ ಕೋರ್ಟ್​​ಗೆ ದಾಖಲೆ ಸಲ್ಲಿಸಲು ಮುಂದಾಗಿದೆ. ಆದರೆ, ಪೇಟಾದ ಈ ಕ್ರಮದ ವಿರುದ್ದ ಕಂಬಳಪ್ರಿಯರು ಮತ್ತೆ ಆಕ್ರೋಶಗೊಂಡಿದ್ದು, ನಿನ್ನೆಯ ಕಂಬಳದಲ್ಲಿ ಯಾವುದೇ ಹಿಂಸೆ ನಡೆಸಿಲ್ಲ ಅಂತಿದ್ದಾರೆ. ಅಲ್ಲದೇ ಈ ಸಂಬಂಧ ಕಾನೂನು ಹೋರಾಟ ಮುಂದುವರೆಸುತ್ತೇವೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಾರೆ ಕಂಬಳಕ್ಕೆ ಆವರಿಸಿದ್ದ ನಿಷೇಧದ ತೂಗುಗತ್ತಿ ಸರೀತಾ ಇದ್ದ ಬೆನ್ನಲ್ಲೇ ನಿನ್ನೆ ನಡೆದ ಕಂಬಳದಲ್ಲಿ ಹಿಂಸೆಯ ಅಪಸ್ವರ ಕೇಳಿ ಬಂದಿದೆ. ಇನ್ನೇನು ಕರಾವಳಿಯಲ್ಲಿ ಕಂಬಳ ಶಕೆ ಆರಂಭವಾಗುತ್ತೆ ಅನ್ನೋವಷ್ಟರಲ್ಲೇ ಇದೀಗ ಪೇಟಾ ಮತ್ತೆ ತಗಾದೆ ತೆಗೆದು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ. ಹೀಗಾಗಿ ನಾಳೆಯ ತೀರ್ಪು ಮತ್ತೆ ಕಂಬಳದ ಅಳಿವು – ಉಳಿವಿನತ್ತ ದೃಷ್ಟಿ ನೆಡುವಂತೆ ಮಾಡಿದೆ.

ಸಂದೇಶ್ ಶೆಟ್ಟಿ ಆಜ್ರಿ ಸುದ್ದಿ ಟಿ ವಿ ಮಂಗಳೂರು

0

Leave a Reply

Your email address will not be published. Required fields are marked *