ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಪ್ರತಿರೋಧ ಸಮಾವೇಶ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಒಂದು ವಾರ. ಹತ್ಯೆ ಖಂಡಿಸಿ ಹೋರಾಟಗಳು ಕೂಡ ನಡೀತಿವೆ. ಇಂದೂ ಕೂಡ ಹೋರಾಟದ ಹಾದಿ ತುಳಿಯೋದಕ್ಕೆ ಎಲ್ಲರೂ ಸಜ್ಜಾಗಿ ನಿಂತಿದ್ದಾರೆ. ಗೌರಿ​ ಹತ್ಯೆಯನ್ನು ಖಂಡಿಸಲು ಸಮಾನ ಮನಸ್ಕ ಪ್ರಗತಿಪರ ಚಿಂತಕ ವರ್ಗ ಬೆಂಗಳೂರಲ್ಲಿ ವೇದಿಕೆ ಸೃಷ್ಟಿಸಿದೆ. ನಗರದಲ್ಲಿ ನಡೆಯಲಿರುವ ಪ್ರತಿರೋಧ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಇನ್ನು ಚಿತ್ರ ಕಲಾವಿದರೆಲ್ಲಾ ತಮ್ಮದೇ ಶೈಲಿಯಲ್ಲಿ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ಹೋರಾಟಕ್ಕಿಳಿದಿದ್ದಾರೆ.

ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್​ ಹತ್ಯೆಯಾಗಿ ಇಂದಿಗೆ ಒಂದು ವಾರ. ಈ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸಂಚಲನ್ನೇ ಸೃಷ್ಟಿಸ್ತಿದೆ. ಇನ್ನು ಈ ಪ್ರಕರಣ ಪೊಲೀಸರಿಗೆ ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಇಲ್ಲಿಯವರೆಗೂ ಚಿಕ್ಕ ಸುಳಿವು ಕೂಡ ಸಿಕ್ಕಿಲ್ಲ. ಇದರ ನಡುವೆ ಗೌರಿ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳೂ ನಡೆಯುತ್ತಿದೆ. ಗೌರಿ ಹತ್ಯೆ ಖಂಡಿಸಿ ಇಂದು ಬೆಂಗಳೂರಿನಲ್ಲಿ ಪ್ರಗತಿಪರರ ಬೃಹತ್ ಸಮಾವೇಶ ನಡೆಯಲಿದೆ.

ಗೌರಿ ಲಂಕೇಶ್​ ಹತ್ಯೆಯನ್ನು ಸಮಾನ ಮನಸ್ಕ ಪ್ರಗತಿಪರರು ಕಟುವಾಗಿ ಖಂಡಿಸಿದ್ದಾರೆ. ಬೆಂಗಳೂರಿನ ಸೆಂಟ್ರಲ್​ ಕಾಲೇಜು ಮೈದಾನದಲ್ಲಿ ಪ್ರತಿರೋಧ ಸಮಾವೇಶದಲ್ಲಿ ನಡೆಯಲಿದೆ. ಪ್ರಕಾಶ್ ರೈ, ಪ್ರಶಾಂತ್ ಭೂಷಣ್, ಆಶಿಶ್ ಕೇತನ್, ಗಿರೀಶ್ ಕಾರ್ನಾಡ್, ಕಣ್ಹಯ್ಯ ಕುಮಾರ್, ಜಿಗ್ನೇಶ್ ಮೆವಾನಿ ಸೇರಿದಂತೆ ದೇಶದ ಹಲವೆಡೆಯಿಂದ ಆಗಮಿಸಿದ ಪ್ರಗತಿಪರರು ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಸೆಂಟ್ರಲ್​ ಕಾಲೇಜು ಮೈದಾನದವರೆಗೆ ಬೃಹತ್ ರ್ಯಾಲಿ ನಡೆಯಲಿದೆ.

ಅಂದಾಜಿನ ಪ್ರಕಾರ ಸಮಾವೇಶಕ್ಕೆ ಮೂವತ್ತು ಸಾವಿರಕ್ಕೂ ಅಧಿಕ ಜನ ಸೇರಲಿದ್ದು, ಹದಿನೈದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಭಿನ್ನಮತವನ್ನೆಲ್ಲಾ ಬದಿಗೊತ್ತಿ ಗೌರಿ ಹತ್ಯೆಯನ್ನು ಖಂಡಿಸಿ ಎಲ್ಲರೂ ಒಗ್ಗಟ್ಟಿನಿಂದ ಪ್ರತಿಭಟಿಸಲು ಮುಂದಾಗಿದ್ದಾರೆ. ವೈಚಾರಿಕ ಸ್ವಾತಂತ್ರ್ಯ ಉಳಿಸುವ ಹೊಣೆ ನಮ್ಮದು ಎಂದು ಪ್ರಗತಿಪರರು ಇಂದಿನ ಸಮಾವೇಶದಲ್ಲಿ ಸಾರಲಿದ್ದಾರೆ.

ಇನ್ನು ಕಲಾವಿದರು ಕೂಡ ತಮ್ಮ ಕಲೆಯ ಮೂಲಕ ಗೌರಿ ಲಂಕೇಶ್‌ರ ಹತ್ಯೆ ವಿರೋಧಿಸಿ ವಿಭಿನ್ನ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ನಿನ್ನೆ ಚಿತ್ರಕಲಾ ಪರಿಷತ್‌ನಲ್ಲಿ ಕಲಾವಿದರು ನೂರಾರು ಕಪ್ಪು ಬಣ್ಣದ ಕೊಡೆಗಳನ್ನು ತಂದು ಕಲಾಕೃತಿಗಳನ್ನು ಬಿಡಿಸಿ ಆಕ್ರೋಶ ಹೊರಹಾಕಿದ್ರು. ಕೊಡೆ ಮೇಲೆ ಗೌರಿ ಲಂಕೇಶ್‌ರ ಹತ್ಯೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ದಮನ ಮಾಡುವ ಪ್ರಯತ್ನಗಳ ವಿರುದ್ಧ ದನಿ ಎತ್ತಿದ್ರು. ಇಂದು ನಡೆಯುವ ಹೋರಾಟದಲ್ಲಿ ಈ ಕಲಾವಿದರು ಎಲ್ಲಾ ಕೊಡೆಗಳನ್ನು ಬೆಟ್ಟದ ಆಕೃತಿಯಲ್ಲಿ ಜೋಡಿಸಿ ವಿಭಿನ್ನ ಹೋರಾಟ ನಡೆಸಲಿದ್ದಾರೆ.

ಇನ್ನು ಪ್ರಗತಿಪರ ಮಠಾಧೀಶರಾದ ನಿಡುಮಾಮಿಡಿ ಸ್ವಾಮೀಜಿ, ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ಕೂಡ ಇಂದಿನ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿರುವ ಪ್ರಗತಿಪರರ ದಂಡೇ ಇಂದಿನ ಸಮಾವೇಶದಲ್ಲಿ ಒಗ್ಗೂಡಲಿದೆ. ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು ಚಿಂತನೆಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂಬ ಅಂಶವನ್ನು ಸಾರಲು ಸಕಲ ಸಿದ್ಧತೆಗಳು ನಡೆದಿವೆ.

0

Leave a Reply

Your email address will not be published. Required fields are marked *